ಶುಕ್ರವಾರ, ಸೆಪ್ಟೆಂಬರ್ 24, 2021
27 °C

9ರಂದು ಸಿಪಿಐನಿಂದ ಜನಾಂದೋಲನ ಜಾಗೃತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜನ ವಿರೋಧಿ ಸರ್ಕಾರಗಳ ನೀತಿ ಖಂಡಿಸಿ ಸಿಪಿಐನಿಂದ ಆಗಸ್ಟ್‌ 9ರಂದು ಬೆಳಿಗ್ಗೆ 11ಕ್ಕೆ ಜನಾಂದೋಲನ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಚಲೇಜಾವ್ ಚಳವಳಿಯ ಸ್ಮರಣೆ ದಿನದ ಅಂಗವಾಗಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಬಡತನ, ಹಸಿವು, ನಿರುದ್ಯೋಗ, ಅಸಮಾನತೆ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರ ಯಾವ ಸಮಸ್ಯೆಗೂ ಪರಿಹಾರ ನೀಡದೆ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿ ಜನಾಂದೋಲನ ನಡೆಸಲಾಗುತ್ತದೆ. ದಾವಣಗೆರೆ ಜಿಲ್ಲೆ ಸೇರಿ ಬೆಂಗಳೂರು, ಮಂಗಳೂರು, ಕಲಬುರ್ಗಿ, ಮೈಸೂರು ಜಿಲ್ಲೆಗಳಲ್ಲಿ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜನಾಂದೋಲನ ಜಾಗೃತಿ ಸಭೆಯನ್ನು ಸಿಪಿಐ ರಾಜ್ಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ಉದ್ಘಾಟಿಸುವರು. ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್ ಅಧ್ಯಕ್ಷತೆ ವಹಿಸುವರು. ಸಿಪಿಐ ಮತ್ತು ಎಐಟಿಯುಸಿ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

‘ಕೇಂದ್ರ ಸರ್ಕಾರ ಸಾಮ್ರಾಜ್ಯಶಾಹಿ ಬ್ರಿಟಿಷರಿಗಿಂತಲೂ ಜನವಿರೋಧಿ ಆಡಳಿತ ನಡೆಸುತ್ತಿದೆ. ಕೊರೊನಾದಲ್ಲಿ ಜನರ ಜೀವದೊಂದಿಗೆ ಚೆಲ್ಲಾಟವಾಡಿದೆ. ಲಾಕ್‍ಡೌನ್ ಹೆಸರಿನಲ್ಲಿ ಜನರನ್ನು ಮನೆಗಳಲ್ಲಿ ಬಂಧಿಸಿಟ್ಟು ಕೋಟ್ಯಂತರ ಜನರನ್ನು ಕೆಲಸ ಆಹಾರ ಮತ್ತು ಆರೋಗ್ಯ ಸೌಲಭ್ಯಗಳಿಲ್ಲದೇ ಅನಾಥರನ್ನಾಗಿ ಮಾಡಿದೆ. ಆನ್‍ಲೈನ್ ಶಿಕ್ಷಣದ ಬಗ್ಗೆ ಸರಿಯಾದ ನೀತಿ ರೂಪಿಸದೇ ಇದ್ದುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚಿಸದೇ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಕಾರ್ಪೊರೇಟ್‌ ಕಂಪನಿಗಳ ಪರ ನೀತಿ ರೂಪಿಸಿದೆ’ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಸಹಕಾರ್ಯದರ್ಶಿಗಳಾದ ಎಚ್.ಜಿ. ಉಮೇಶ್, 
ಆವರಗೆರೆ ವಾಸು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.