ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಜನಮುಖಿ ತರಳಬಾಳು ಹುಣ್ಣಿಮೆ ಮಹೋತ್ಸವ

ಸಿರಿಗೆರೆಯಲ್ಲಿ ಇಂದಿನಿಂದ 24ರವರೆಗೆ ಸರಳ ಆಚರಣೆ
ಪ್ರೊ. ಎಸ್.ಬಿ.ರಂಗನಾಥ್
Published 22 ಫೆಬ್ರುವರಿ 2024, 5:17 IST
Last Updated 22 ಫೆಬ್ರುವರಿ 2024, 5:17 IST
ಅಕ್ಷರ ಗಾತ್ರ

ನಾಡಿನ ಪ್ರಮುಖ ಮಠಗಳಲ್ಲಿ ಗಮನ ಸೆಳೆಯುವ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಹತ್ತು-ಹಲವು. ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಮುಖವಾದ ತರಳಬಾಳು ಹುಣ್ಣಿಮೆ ಮಹೋತ್ಸವವು 1950ರಿಂದ ಕರ್ನಾಟಕ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲಿಯೂ ನಡೆದಿರುವ ಜನಪ್ರಿಯ ನಾಡಹಬ್ಬವಾಗಿದೆ. ಇದಕ್ಕೆ ಹೊಸ ಆಯಾಮ ನೀಡಿದವರು ಪ್ರಸ್ತುತ ಪೀಠಾಧ್ಯಕ್ಷರಾದ  ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು.

ಅಶಾಂತಿ, ಧರ್ಮಾಂಧತೆ, ಭಯೋತ್ಪಾದನೆ, ಅಸಹಿಷ್ಣುತೆಗಳ ಒಳಸುಳಿವುಗಳಿಗೆ ಸಿಕ್ಕು ನಲುಗುತ್ತಿರುವ ಪ್ರಸ್ತುತ ಸಮಾಜವನ್ನು ಧರ್ಮದ ತಳಹದಿಯ ಮೇಲೆ ಸಮಾನತೆ, ಜಾತ್ಯತೀತತೆ-ಭಾವೈಕ್ಯತೆಗಳ ಬೆಸುಗೆಯಲ್ಲಿ ಬಂಧಿಸುವುದು ಇದರ ಆಚರಣೆಯ ಉದ್ದೇಶವಾಗಿದೆ.

12ನೇ ಶತನಮಾನದ ಮಹಾಮಾನವತಾವಾದಿ ಬಸವಣ್ಣನ ಹಿರಿಯ ಸಮಾಕಾಲೀನ ವಿಶ್ವಬಂಧು ಮರುಳಸಿದ್ಧ ಈ ತರಳಬಾಳು ಹುಣ್ಣಿಮೆ ಆಚರಣೆಯ ಮೂಲಪುರುಷ. ಖ್ಯಾತ ಸಂಶೋಧಕ ಎಚ್.ದೇವೀರಪ್ಪನವರ ಪ್ರಕಾರ, ಸುಮಾರು ಕ್ರಿ.ಶ. 1140ರಲ್ಲಿ ಈಗಿನ ಬಳ್ಳಾರಿ ಜಿಲ್ಲೆ ಉಜ್ಜಯಿನಿಯ ಬಳಿ ಇದ್ದ ಕಗ್ಗಲ್ಲುಪುರದಲ್ಲಿ ಹರಿಜನರ ಮಗನಾಗಿ ಹುಟ್ಟಿದ (ಕಗ್ಗಲ್ಲುಪುರ ಈಗ ಬೇಚರಾಕ್ ಗ್ರಾಮ), ಮರುಳಸಿದ್ಧನವು ಕ್ರಾಂತಿಕಾರಿ ವಿಚಾರಗಳು. ಅಂದಿನ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ವರ್ಣಪದ್ಧತಿ, ಕ್ಷುದ್ರದೇವತಾರಾಧನೆ, ಪಶುಬಲಿಗಳನ್ನು ಅವನು ದಿಟ್ಟತನದಿಂದ ವಿರೋಧಿಸಿದ.

ಮರುಳಸಿದ್ಧನು ತಾನು ಆರಂಭಿಸಿದ ಲೋಕಶಿಕ್ಷಣ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಆಯ್ಕೆ ಮಾಡಿಕೊಂಡ ಉತ್ತರಾಧಿಕಾರಿಯೇ ತೆಲಗುಬಾಳು ಸಿದ್ಧೇಶ್ವರ. ಮರುಳಸಿದ್ಧನು ತೆಲಗುಬಾಳು ಸಿದ್ಧೇಶ್ವರನಿಗೆ ಉತ್ತರಾಧಿಕಾರ ವಹಿಸಿಕೊಟ್ಟ ದಿನ ಮಾಘ ಶುದ್ಧ ಪೂರ್ಣಿಮೆ. ಅಂದು ಅವನು ಸಿದ್ಧೇಶ್ವರನಿಗೆ ನೀಡಿದ ಆಶೀರ್ವಾದ 'ತರಳ ಬಾಳು' ಎಂಬುದು. ಈ ಪಂಚಾಕ್ಷರಿಯೇ ಈ ಗುರು ಪೀಠದ ಅಭಿದಾನವಾಗಿ ಅಂದಿನಿಂದ ಇಂದಿನವರೆಗೆ ಪ್ರಚಲಿತವಿದೆ. ಆ ದಿನದಿಂದ ತರಳರ ಬಾಳನ್ನು ಹಸನುಗೊಳಿಸಲು ಶ್ರಮಿಸುತ್ತಿರುವ ಈ ಗುರುಪರಂಪರೆಯ ಗುರುಗಳು `ತರಳಬಾಳು ಜಗದ್ಗುರು’ಗಳಾದರು ಹಾಗೂ ಈ ಪೀಠವು ಪ್ರತಿವರ್ಷ ಮಾಘ ಶುದ್ಧ ಪೂರ್ಣಿಮೆಯಂದು, ಈ ಐತಿಹಾಸಿಕ ಘಟನೆಯ ಸವಿನೆನಪಿನಲ್ಲಿ ಆಚರಿಸುತ್ತಾ ಬಂದಿರುವ ಉತ್ಸವವು ತರಳಬಾಳು ಹುಣ್ಣಿಮೆ ಮಹೋತ್ಸವ ಎಂದು ಸುಪ್ರಸಿದ್ಧವಾಯಿತು.

ತರಳಬಾಳು ಹುಣ್ಣಿಮೆ: ಜನಮುಖಿ ರೂಪ:

ಮರುಳಸಿದ್ದನು ಮಾಘ ಮಾಸದಲ್ಲಿ ನಡೆಸಿದ 9 ದಿನಗಳ ಶಿವಜ್ಞಾನ, ಶಿವಭಕ್ತಿ ಪ್ರಚಾರದ ಕುರುಹಾಗಿ ಪ್ರತಿ ವರ್ಷ ವಿವಿಧೆಡೆಗಳಲ್ಲಿ 9 ದಿನ ತರಳಬಾಳು ಜಗದ್ಗುರುಗಳ ನೇತೃತ್ವದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಉತ್ಸವದ ಅಂಗವಾಗಿ ಸಾರ್ವಜನಿಕರಿಂದ ಸಂಗ್ರಹಿಸಿದ, ಉಳಿಕೆ ಹಣವನ್ನು ಉತ್ಸವ ನಡೆದ ಸ್ಥಳಗಳಲ್ಲಿ ಆಸ್ಪತ್ರೆ, ಶಾಲೆ, ಕಲ್ಯಾಣಮಂಟಪ ನಿರ್ಮಾಣ, ಹುತಾತ್ಮ ವೀರಯೋಧರ ಅವಲಂಬಿತರಿಗೆ ಆರ್ಥಿಕ ನೆರವು ನೀಡುವುದು ಮುಂತಾದ ಸಮಾಜೋಪಯೋಗಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿರುವುದು ಇದರ ವೈಶಿಷ್ಟ್ಯ.

1992ರಲ್ಲಿ ಚನ್ನಗಿರಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ನೆನಪಿಗಾಗಿ ಅಲ್ಲಿ ಸುಸಜ್ಜಿತ ತರಳಬಾಳು ಜಗದ್ಗುರು ಗ್ರಾಮಾಂತರ ಆಸ್ಪತ್ರೆ ತಲೆ ಎತ್ತಿದೆ. ಅಲ್ಲಿ 2ನೆಯ ಬಾರಿ 2015ರಲ್ಲಿ ನಡೆದ ಹುಣ್ಣಿಮೆ ಮಹೋತ್ಸವದ ಉಳಿಕೆ ಹಣವನ್ನು ₹125 ಕೋಟಿ ಅಂದಾಜು ವೆಚ್ಚದ ಉಬ್ರಾಣಿ-ಅಮೃತಾಪುರ ನೀರಾವರಿ ಯೋಜನೆಯಡಿ ರೈತರಿಗೆ ಕೂಡಿಟ್ಟ ನಿಧಿಯಾಗಿ ಇಡುಗಂಟು ಮಾಡಲಾಗಿದೆ.

2001ರಲ್ಲಿ ಅರಸೀಕೆರೆಯಲ್ಲಿ ನಡೆದ ಮಹೋತ್ಸವವನ್ನು ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದ ಪರಿಹಾರ ಕಾರ್ಯಕ್ರಮವನ್ನಾಗಿ ಮಾರ್ಪಾಡಿಸಿದ ಶ್ರೀಗಳು ತಮ್ಮ ಉತ್ಸವವನ್ನು ಪಾದಯಾತ್ರೆಯನ್ನಾಗಿ ಮಾರ್ಪಾಡಿಸಿದರು. ಸಂತ್ರಸ್ತರಿಗೆ ಧನ ಸಂಗ್ರಹಿಸಿ ಕಳುಸಿದರು.

2004ರಲ್ಲಿ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಬರಗಾಲದ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಅದನ್ನು ಕುಡಿಯುವ ನೀರು ಪೂರೈಕೆ ಕಾರ್ಯಕ್ರಮವಾಗಿ ಪರಿವರ್ತಿಸಿ, ಸುನಾಮಿ ಚಂಡಮಾರುತ ಸಂತ್ರಸ್ತರಿಗೆ ನಿಧಿ ಅರ್ಪಿಸಲಾಯಿತು. ಇದೇ ರೀತಿ 2010ರಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಿ ಉತ್ತರ ಕರ್ನಾಟಕ ನೆರೆಪೀಡಿತ ಸಂತ್ರಸ್ತರಿಗೆ ನೆರವು ನೀಡಲಾಯಿತು.

2023ರಲ್ಲಿ ಕೊಟ್ಟೂರಿನಲ್ಲಿ ನಡೆದ ಹುಣ್ಣಿಮೆ ಮಹೋತ್ಸವದ ನೆನಪಿನಲ್ಲಿ, ತುಂಗಭದ್ರಾ ನದಿಯಿಂದ ಕೊಟ್ಟೂರು ಕೆರೆ ಸೇರಿದಂತೆ 17 ಕೆರೆಗಳನ್ನು ತುಂಬಿಸಲು ₹308 ಕೋಟಿ ಅಂದಾಜಿನ ಏತ ನೀರಾವರಿ ಯೋಜನೆ ಹಾಗೂ ತಾಲ್ಲೂಕಿನ ಅಲಬೂರು ಗ್ರಾಮದಲ್ಲಿ ಕೆರೆ, ಚೆಕ್‍ಡ್ಯಾಂ ನಿರ್ಮಾಣಕ್ಕೆ ಕ್ರಮ ಹಾಗೂ ಸಂಗಮೇಶ್ವರ ಮತ್ತು ಬಳಿಗನೂರು ಗ್ರಾಮಗಳ ನಡುವೆ ಇರುವ ಜಗಳೂರು ಏತ ನೀರಾವರಿಯ ತುಪ್ಪದಹಳ್ಳಿ ಕೆರೆ ಕೋಡಿ ಹಳ್ಳಕ್ಕೆ ಬ್ರಿಡ್ಜ್-ಬ್ಯಾರೇಜ್ ನಿರ್ಮಾಣಕ್ಕೆ ಕೈಗೊಳ್ಳಲಾಗಿದೆ.

ಭರಮಸಾಗರ ದೊಡ್ಡಕೆರೆಯ ದೊಡ್ಡ ಯೋಜನೆ:

ಶ್ರೀಗಳವರ ಒತ್ತಾಸೆಯಿಂದ ₹150 ಕೋಟಿ ವೆಚ್ಚದ ದಾವಣಗೆರೆ ತಾಲ್ಲೂಕು 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯಗತಗೊಂಡಿದೆ. ದಾವಣಗೆರೆ ತಾಲ್ಲೂಕು ಮಲ್ಲಶೆಟ್ಟಿಹಳ್ಳಿ ಬಳಿ ₹5 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣಗೊಂಡಿದೆ. ಹರಿಹರದ ಬಳಿ ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 53 ಕೆರೆಗಳಿಗೆ ಮತ್ತು ಭರಮಸಾಗರ ಭಾಗದ 41 ಕೆರೆಗಳಿಗೆ ನೀರು ತುಂಬಿಸುವ ₹1,250 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಆ ಭಾಗದ ಜನರ ಭಾಗ್ಯೋದಯವಾಗಿದೆ. ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಶ್ರದ್ಧಾಂಜಲಿ ಸಂದರ್ಭದಲ್ಲಿ, 2021ರ ಸೆ.29ರಂದು 55 ಕಿ.ಮೀ. ದೂರದಿಂದ ಬೃಹತ್ ಪೈಪ್‍ಗಳ ಮೂಲಕ ತುಂಗಾಭದ್ರೆಯ ನೀರು 1,000 ಎಕರೆ ವಿಸ್ತೀರ್ಣದ ಭರಮಸಾಗರದ ದೊಡ್ಡಕೆರೆಗೆ ಪವಾಡ ಸದೃಶವಾಗಿ ಚಿಮ್ಮಿಕ್ಕಿ ಹರಿದು ಬಂದು ಕೆರೆಯು ಕೋಡಿ ಬಿದ್ದಿದ್ದು, ಅದರಿಂದ ಜಗಳೂರು ಭಾಗದ ಕೆರೆಗಳಿಗೆ ನೀರು ಹರಿಸಲಾಗಿದೆ.

ಭರಮಸಾಗರದಿಂದ ಸಿರಿಗೆರೆಗೆ:

ಭರಮಸಾಗರ ಗ್ರಾಮದ ಕೃತಜ್ಞ ರೈತರು ಈ ಬಾರಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಭರಮಸಾಗರದಲ್ಲಿ ಫೆ.15ರಿಂದ 24ರವರೆಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದರು. ಆದರೆ ರಾಜ್ಯದಲ್ಲಿ ಬರಗಾಲ ತಲೆದೋರಿದ್ದು, ಜಗದ್ಗುರುಗಳ  ಆಶಯದಂತೆ ಈ ವರ್ಷ ಮುಂದೂಡಿ, ಫೆ.22ರಿಂದ 24ರವರೆಗೆ ಸಿರಿಗೆರೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.

ಈ ಸಮಾರಂಭಕ್ಕಾಗಿ ನಿರ್ಮಿಸಲಾಗುವ ವಿಶೇಷ ಸುಂದರ ಮಂಟಪದಲ್ಲಿ ಪ್ರತಿದಿನ ಬೆಳಿಗ್ಗೆ ಗ್ರಾಮೀಣರಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಕುಸ್ತಿ ಮುಂತಾದ ಕ್ರೀಡಾ ಸ್ಪರ್ಧೆಗಳು ಜರುಗುವುವು. ವಿಜ್ಞಾನ ವಸ್ತು ಪ್ರದರ್ಶನ, ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸಂಜೆ ವಿವಿಧ ಧಾರ್ಮಿಕ ನೇತಾರರು, ಮಠಾಧೀಶರು, ಸಾಹಿತಿಗಳು, ಚಿಂತಕರಿಂದ ಉಪನ್ಯಾಸ, ಗ್ರಂಥ ಬಿಡುಗಡೆ ಕಾರ್ಯಕ್ರಮಗಳಿವೆ.

ಹುತಾತ್ಮ ಯೋಧರ ಸ್ಮರಣೆ:

ಈ ಮಹೋತ್ಸವದ ಕೊನೆಯ ದಿನ ಫೆ. 24ರಂದು ರಾಷ್ಟ್ರಸೇವೆಯಲ್ಲಿ ಹುತಾತ್ಮರಾದ ಬೆಂಗಳೂರು, ಗೋಕಾಕ್, ಕಲಬುರಗಿ, ಜಗಳೂರು, ಚಿತ್ರದುರ್ಗ ಮತ್ತು ನಿಪ್ಪಾಣಿಯ 6 ವೀರ ಯೋಧರ ಅವಲಂಬಿತರಿಗೆ ತಲಾ ₹ 1ಲಕ್ಷ ಧನಸಹಾಯ ನೀಡಲಾಗುವುದು. ಸಂಪ್ರದಾಯದಂತೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸದ್ಧರ್ಮ ಸಿಂಹಾಸನಾರೋಹಣ ಮಾಡುವರು. ಅದಕ್ಕೂ ಮುನ್ನ ನಡೆಯಬೇಕಾಗಿದ್ದ ತಮ್ಮ ಅಡ್ಡಪಲ್ಲಕ್ಕಿ ಉತ್ಸವವನ್ನು ನಿರಾಕರಿಸಿರುವ ಸ್ವಾಮೀಜಿಯವರು ತೆರೆದ ವಾಹನದಲ್ಲಿ ಮೆರವಣಿಗೆ ಸಾಕು ಎಂದಿದ್ದಾರೆ.

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳವರ ಕಾಲದಲ್ಲಿ ಈ ಉತ್ಸವದ ದಿಗಂತಗಳು ವಿಸ್ತಾರಗೊಂಡು ವಿದೇಶಿಯರೂ ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶ್ವಭ್ರಾತೃತ್ವ-ವಿಶ್ವಭಾವೈಕ್ಯದ ಸಂಕೇತವಾಗಿದೆ.


(ಲೇಖಕರು: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು)

ಶ್ರೀ ಶಿವಕುಮಾರ ಸ್ವಾಮೀಜಿ
ಶ್ರೀ ಶಿವಕುಮಾರ ಸ್ವಾಮೀಜಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT