ಬುಧವಾರ, ನವೆಂಬರ್ 20, 2019
27 °C
ಕಾಂಗ್ರೆಸ್‌–ಬಿಜೆಪಿಗೆ ಪ್ರತಿಷ್ಠೆಯಾದ ಮಹಾನಗರ ಪಾಲಿಕೆ ಚುನಾವಣೆ

‘ಕೈ’, ‘ಕಮಲ’ದ ಓಟಕ್ಕೆ ‘ತೆನೆ..’ ಅಡ್ಡಿ!

Published:
Updated:

ದಾವಣಗೆರೆ: ಮಹಾನಗರ ಪಾಲಿಕೆಯ ಗದ್ದುಗೆಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ರೂಪಿಸಿದ ‘ಕೈ’ ಪಡೆಯವರ ತಂತ್ರಕ್ಕೆ, ಈ ಬಾರಿ ಹೇಗಾದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಲೇಬೇಕು ಎಂದು ‘ಕಮಲ’ ಪಾಳಯದವರು ಪ್ರತಿ ತಂತ್ರ ರೂಪಿಸಿದ್ದಾರೆ. ಇವರಿಬ್ಬರ ಕಾದಾಟದ ನಡುವೆಯೇ ಕೆಲವು ವಾರ್ಡ್‌ಗಳನ್ನು ಗೆದ್ದುಕೊಂಡು ‘ಕಿಂಗ್‌ ಮೇಯರ್‌’ ಪಾತ್ರ ವಹಿಸಲು ‘ತೆನೆ ಹೊತ್ತ ಮಹಿಳೆ’ಯರು ದಾಳ ಉರುಳಿಸಿದ್ದಾರೆ. ಇನ್ನೊಂದೆಡೆ ‘ಬಂಡಾಯ’ಗಾರರೂ ದೂಳು ಎಬ್ಬಿಸುತ್ತಿದ್ದು, ‘ಕದನ ಕುತೂಹಲ’ವನ್ನು ಹೆಚ್ಚಿಸಿದೆ.

ಮಹಾನಗರ ಪಾಲಿಕೆಯ 45 ವಾರ್ಡ್‌ಗಳಿಗೆ ನವೆಂಬರ್‌ 12ರಂದು ನಡೆಯಲಿರುವ ಚುನಾವಣೆಗೆ ಒಟ್ಟು 208 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾಲಿಕೆಯ ಮೂರನೇ ಅವಧಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆಯೇ ನೇರ ಸ್ಪರ್ಧೆ ಕಂಡು ಬರುತ್ತಿದ್ದರೂ ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌–ಬಿಜೆಪಿ–ಜೆಡಿಎಸ್‌ ಹುರಿಯಾಳುಗಳ ನಡುವೆ ತ್ರಿಕೋನ ಸ್ಪರ್ಧೆಯೂ ಏರ್ಪಟ್ಟಿದೆ. ಕೆಲ ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಹಾಗೂ ಸಿಪಿಐ ಅಭ್ಯರ್ಥಿಗಳೂ ಪ್ರಬಲ ಸ್ಪರ್ಧೆ ಒಡ್ಡುವ ಲಕ್ಷಣಗಳು ಕಂಡು ಬರುತ್ತಿವೆ. 45ನೇ ವಾರ್ಡ್‌ನಲ್ಲಿ ತನ್ನ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ, ಬಂಡಾಯವಾಗಿ ಸ್ಪರ್ಧಿಸಿದ ಪಕ್ಷೇತರ ಅಭ್ಯರ್ಥಿ ವೆಂಕಟೇಶ್‌ ಅವರಿಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿದೆ.

2007ರಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಬೀಗಿತ್ತು. ಆದರೆ, 2013ರಲ್ಲಿ 41 ವಾರ್ಡ್‌ಗಳಿಗೆ ನಡೆದ ಎರಡನೇ ಚುನಾವಣೆಯಲ್ಲಿ 36 ಸ್ಥಾನಗಳನ್ನು ಗೆದ್ದುಕೊಂಡು ಕಾಂಗ್ರೆಸ್‌ ಗದ್ದುಗೆ ಏರಿತ್ತು. ಇದೀಗ 45 ವಾರ್ಡ್‌ಗಳಿಗೆ ಏರಿಕೆಯಾಗಿದ್ದು, ಪಾಲಿಕೆ ಗದ್ದುಗೆ ಏರಲು ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಪ್ರತಿಷ್ಠೆ ಪಣಕ್ಕೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಸೋಲು ಕಾಂಗ್ರೆಸ್‌ಗೆ ಆಘಾತ ತಂದಿತ್ತು. ಇದಾದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲೂ ಸೋಲಿನ ಕಹಿ ಅನುಭವವಾಗಿತ್ತು. ಹೀಗಾಗಿ ಇದೀಗ ಪಾಲಿಕೆ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸವಾಲು ‘ಕೈ’ ನಾಯಕರಿಗೆ ಎದುರಾಗಿದೆ.

ಕಳೆದ ಬಾರಿ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಎಡ–ಬಲಕ್ಕೆ ಈಗ ತಮ್ಮದೇ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರವಿದೆ. ಜೊತೆಗೆ ಸಂಸದರು, ಶಾಸಕರ ಬಲವೂ ಹೆಚ್ಚಿದೆ. ಇದರ ನಡುವೆಯೇ ಆರು ವಾರ್ಡ್‌ಗಳಲ್ಲಿ ‘ಬಂಡಾಯದ ಬಿಸಿ’ಯೂ ತಟ್ಟಿದೆ. ಹೀಗಾಗಿಯೇ ಬಂಡಾಯಗಾರರನ್ನು ಪಕ್ಷದಿಂದ ಉಚ್ಚಾಟಿಸಿದೆ. ಕಳೆದ ಬಾರಿ ‘ಶೂನ್ಯ ಸಂಪಾದನೆ’ ಮಾಡಿದ್ದ ಜೆಡಿಎಸ್‌, ಈ ಬಾರಿ ‘ತೆನೆ’ ಕೊಯ್ಲಿಗೆ ಕಸರತ್ತು ನಡೆಸುತ್ತಿದೆ.

ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತಬೇಟೆಗೆ ಹೊರಟಿದೆ. ಪ್ರಚಾರಕ್ಕೆ ಶಾಮನೂರು ಅವರು ಬಂದಿದ್ದರೂ, ಮಲ್ಲಿಕಾರ್ಜುನ ಅವರು ನಗರದಲ್ಲಿ ಸಂಚರಿಸಿ ಮತಯಾಚಿಸದೇ ಇರುವುದು ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಪಾಲಿಕೆಯ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾದರೆ ಕಾಂಗ್ರೆಸ್‌ ಟಿಕೆಟ್‌ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಮಲ್ಲಿಕಾರ್ಜುನ ಅವರಿಗೆ ಮತ್ತೆ ಮುಖಭಂಗವಾಗುವುದರಿಂದ ‘ಕೈ’ ನಾಯಕರೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಇನ್ನೊಂದೆಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಜೊತೆಗೆ ಪಕ್ಷದ ಸಿದ್ಧಾಂತ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಭರದಿಂದ ಪ್ರಚಾರ ನಡೆಸುತ್ತಿದೆ.

ಶಾಸಕ ಎಸ್‌.ಎ. ರವೀಂದ್ರನಾಥ ಅವರ ಪುತ್ರಿ ವೀಣಾ ನಂಜಪ್ಪ (ವಾರ್ಡ್‌ 40) ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್ ಅವರ ಪುತ್ರ ರಾಕೇಶ್‌ ಜಾಧವ್‌ (ವಾರ್ಡ್‌ 10) ಸ್ಪರ್ಧಿಸಿರುವುದರಿಂದ ಬಿಜೆಪಿ ನಾಯಕರಿಗೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿಯೇ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರೂ ಮೇಲಿಂದ ಮೇಲೆ ಬಂದು ಪ್ರಚಾರ ಮಾಡಿದ್ದಾರೆ.

ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮುಸ್ಲಿಂ ಪ್ರಾಬಲ್ಯದ ಐದಾರು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆಯೇ ನೇರ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ.

ತುರುಸಿನ ಪ್ರಚಾರ ನಡೆಸಿರುವ ‘ಬಂಡಾಯ’ ಅಭ್ಯರ್ಥಿಗಳೂ ನಿರೀಕ್ಷೆ ಮೀರಿ ಪಕ್ಷದ ಅಭ್ಯರ್ಥಿಗಳಿಗೆ ಪೈಪೋಟಿ ಒಡ್ಡುವ ಉತ್ಸಾಹದಲ್ಲಿದ್ದಾರೆ. 84 ಪಕ್ಷೇತರರು ಕಣದಲ್ಲಿದ್ದು, ಅಚ್ಚರಿಯ ಫಲಿತಾಂಶ ಹೊರ ಬರಲಿದೆಯೇ ಎಂಬುದು ಮತಎಣಿಕೆ ನಡೆಯುವ ನವೆಂಬರ್‌ 14ರಂದು ಗೊತ್ತಾಗಲಿದೆ.

ಪ್ರತಿಕ್ರಿಯಿಸಿ (+)