ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಡಿಎಸ್‌ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಎಂಜಿನ್‌ ಸೀಜ್‌: ಕಟೀಲ್‌

Last Updated 16 ಮಾರ್ಚ್ 2023, 9:46 IST
ಅಕ್ಷರ ಗಾತ್ರ

ದಾವಣಗೆರೆ: ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಧ್ವನಿಯೇ ಕೇಳಿಸುತ್ತಿಲ್ಲ. ಜೆಡಿಎಸ್‌ನ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಎಂಜಿನ್‌ ಸೀಜ್‌ ಆಗಿ ಉಳಿದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು.

ಮಾರ್ಚ್‌ 25ಕ್ಕೆ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ, ನಾಲ್ಕು ರಥಗಳ ಮಹಾ ಸಂಗಮ ಕಾರ್ಯಕ್ರಮಕ್ಕಾಗಿ ಇಲ್ಲಿನ ಜಿಎಂಐಟಿ ಬಳಿ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ 60–70ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯುವುದಿಲ್ಲ. ಜೆಡಿಎಸ್‌ ಅನ್ನು 25 ದಾಟಲು ನಾವು ಬಿಡುವುದಿಲ್ಲ. 150 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿ ನಮ್ಮದಾಗಿತ್ತು. ಜನರ ಸ್ಪಂದನೆ ನೋಡಿದರೆ 150 ಮೀರಿ ಗೆಲ್ಲಲಿದ್ದೇವೆ. ಯಾವ ಸಮ್ಮಿಶ್ರ ಸರ್ಕಾರವೂ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಮಾರ್ಚ್‌ 25ರಂದು ನಡೆಯುವ ಈ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ಮತದಾರರು ತಯಾರಾಗಿದ್ದಾರೆ. 25ರವರೆಗೆ ವಿಜಯ ಸಂಕಲ್ಪ ಯಾತ್ರೆ, ಬಳಿಕ ವಿಜಯ ದುಂದುಬಿಯಾಗಲಿದೆ. ಬಿಜೆಪಿಗೆ ಶಕ್ತಿ ತುಂಬುವ ಸಮಾವೇಶ ಇದಾಗಲಿದೆ ಎಂದು ಬಣ್ಣಿಸಿದರು.

ಸಿದ್ದರಾಮಯ್ಯ ಅವರ ಜನ್ಮದಿನದ ಆಚರಣೆಗೆ ರಾಜ್ಯದಾದ್ಯಂತ ಜನ ಕರೆಸಿದ್ದರು. ನಾವು ಅವರಂತಲ್ಲ. ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಲ್ಕೈದು ಜಿಲ್ಲೆಗಳ ಜನರಷ್ಟೇ ಭಾಗವಹಿಸುತ್ತಾರೆ. ರಾಜ್ಯದಾದ್ಯಂತ ಕರೆಸುವುದಿಲ್ಲ. 3 ಲಕ್ಷ ಸೇರಿದರೆ 5 ಲಕ್ಷ ಎಂದು ಹೇಳುವುದಿಲ್ಲ. ಇಲ್ಲಿ 10 ಲಕ್ಷ ಜನರನ್ನು ಸೇರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ಕಾರ್ಯವಾಗಬೇಕು. ಅದಕ್ಕಾಗಿ ಈ ಭಾಗದ ಕಾರ್ಯಕರ್ತರಷ್ಟೇ ಕೆಲಸ ಮಾಡಿದರೆ ಸಾಲದು. ನಾಯಕರು ಕೂಡ ಕೆಲಸ ಮಾಡಬೇಕು. ಮನೆಮನೆಗೆ ತೆರಳಬೇಕು ಎಂದು ಸೂಚನೆ ನೀಡಿದರು.

ಸಂಸದರಾದ ಜಿ.ಎಂ. ಸಿದ್ದೇಶ್ವರ, ದೇವೇಂದ್ರಪ್ಪ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ. ಎನ್‌.ಲಿಂಗಣ್ಣ, ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಅರುಣ್‌ ಕುಮಾರ್‌ ಪೂಜಾರ್‌, ಕೆ.ಎಸ್‌. ನವೀನ್‌, ಕೇಶವ ಪ್ರಸಾದ್‌, ಎಸ್‌.ವಿ. ರಾಮಚಂದ್ರ, ಹೇಮಲತಾ ನಾಯ್ಕ್‌, ತಿಪ್ಪಾರೆಡ್ಡಿ, ಆರ್‌. ಶಂಕರ್‌, ಮುಖಂಡರಾದ ಬಿ.ಪಿ. ಹರೀಶ್‌, ಶಿವಲಿಂಗಪ್ಪ, ಬಸವರಾಜ ನಾಯ್ಕ್‌, ಎ.ವೈ. ಪ್ರಕಾಶ್‌, ಸುಧಾ ಜಯರುದ್ರೇಶ್‌, ಎ.ಎಸ್‌. ಶಿವಯೋಗಿಸ್ವಾಮಿ ಮತ್ತಿತರರಿದ್ದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಸ್ವಾಗತಿಸಿದರು. ಅಧ್ಯಕ್ಷ ವೀರೇಶ್‌ ಹನಗವಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ‌ಜಗದೀಶ್‌ ನಿರೂಪಿಸಿದರು.

‘ಸವಾಲು ಹಾಕಲು ಸಮಾವೇಶವಲ್ಲ’

‘ಯಾರಿಗೂ ಸವಾಲು ಕೊಡುವುದಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ಮಧ್ಯಕರ್ನಾಟಕ ಆಗಿರುವುದರಿಂದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಹಮ್ಮಿಕೊಂಡಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

’ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರ. ಅವರಲ್ಲಿ ಜಗಳ ಶುರುವಾಗುವುದನ್ನು ಕಾಯುತ್ತಿದ್ದೇವೆ. ಬೀದಿ ಕಾಳಗ ಆಗುತ್ತದೆ. ಹೋರಾಟ ನಡೆಯುತ್ತದೆ. ಕಣ್ಣೀರು ಹರಿಯುತ್ತದೆ. ಕಲ್ಲುಗಳು ಬೀಳುತ್ತವೆ‘ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುತ್ತಾರೆ ಎಂಬ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವಾಗ ನೆರೆ ಬಂದಿದ್ದಾಗ ಎಲ್ಲೂ ಬಂದಿಲ್ಲ. ಕರಾವಳಿ ಜಿಲ್ಲೆಗೂ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಸರ್ವೋಚ್ಛ ನಾಯಕ. ಅವರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT