ಗುರುವಾರ , ಜನವರಿ 23, 2020
21 °C

ಧರ್ಮತತ್ವಗಳು ಜನತೆ ಮನಸ್ಸಿನಲ್ಲಿ ಮೂಡಲಿ: ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹರಿಹರ: ದೇಹ ಮನಸ್ಸು, ಬುದ್ಧಿ ವಿಕಸಿತಗೊಳಿಸುವ ಸಾಮರ್ಥ್ಯ ಯೋಗಕ್ಕೆ ಇದೆ. ಅದರ ಕೇಂದ್ರ ಈ ಮಹಾಪೀಠ. ಅದರೊಂದಿಗೆ ಧರ್ಮ ತತ್ವಗಳು ಜನತೆಯ ಮನಸ್ಸಿನಲ್ಲಿ ಮೂಡಬೇಕು. ಜನರ ಬದುಕು ಧರ್ಮಯುಕ್ತವಾಗಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಪ್ರಥಮ ಹರಜಾತ್ರೆ ಮತ್ತು ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಯೋಗವನ್ನು ಜಗತ್ತಿಗೆ ಹರವಿದವರೂ ವಚನಾನಂದ ಶ್ರೀಗಳು. ಎರಡು ವರ್ಷಗಳಿಂದ ಶ್ರೀಗಳು ತಮ್ಮ ಯೋಗಕಾಯಕದಲ್ಲಿ ತೊಡಗಿದ್ದಾರೆ. ಇದು ಹೇಗೆ ಧರ್ಮಪೀಠವೋ ಹಾಗೇ ಯೋಗಪೀಠ. ಅಂತಹ ಎರಡು ಕಾರ್ಯಗಳನ್ನು ಈ ಪೀಠ ಮಾಡುತ್ತಿದೆ ಎಂದರು.

ಜೀವನಕ್ಕೆ ಬೇಕಾದ ಎರಡು ಅಪರೂಪದ ಸಂಗತಿಗಳಾದ ಧರ್ಮ ಮತ್ತು ಯೋಗ ಸುಂದರ ಸಮಾಜವನ್ನು ಕಟ್ಟಲು ನಾವು ಶ್ರಮಿಸಬೇಕು. ಆ ಉದ್ದೇಶದಿಂದ ಈ ಪೀಠ ಅಸ್ತಿತ್ವಕ್ಕೆ ಬಂದಿದೆ. ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಶ್ರೀಮಂತವಾಗಿರಬೇಕು.  ಅಷ್ಟೇ ಕಾರ್ಯ ಸಮರ್ಥವಾಗಿರಬೇಕು. ಅಂಥದೊಂದು ಸುಂದರ ಸಮಾಜವನ್ನು ರಚಿಸುವುದಕ್ಕಾಗಿಯೇ ಈ ಪೀಠ ನಿರ್ಮಾಣವಾಗಿದೆ. ಆ ಕಾರ್ಯಗಳ ಪರಿಚಯಕ್ಕಾಗಿ ಹರಜಾತ್ರೆ ಹಮ್ಮಿಕೊಳ್ಳಲಾಗಿದೆ ಇದು ಉತ್ತಮ ಕಾರ್ಯವಾಗಿದೆ. ಯಾವುದನ್ನು ನೆನೆಸಿಕೊಂಡರೆ ಮನಸ್ಸು ಸ್ವಚ್ಛವಾಗುತ್ತದೆ. ಕತ್ತಲೆ ಹರಿದು ಹೋಗುತ್ತದೆ. ಅಂಥ ಸತ್ಯ ವಸ್ತುಗೆ ಹರ ಎಂದು ಕರೆಯಲಾಗುತ್ತದೆ.

ಮನುಷ್ಯ ಗಳಿಸುವುದಷ್ಟೇ ಅಲ್ಲ, ಆತನ ಭಾವ ವಿಸ್ತಾರವಾಗಬೇಕು. ಮನಸ್ಸನ್ನು ಸಜ್ಜುಗೊಳಿಸಬೇಕು. ಲಕ್ಷಾಂತರ ಜನರ ಮನಸ್ಸನ್ನು ಸುಲಭ, ಸುಂದರ, ಶ್ರೀಮಂತಗೊಳಿಸಬೇಕು. ದೇವರು ಶಕ್ತಿ, ಸಾಮರ್ಥ್ಯ ಕೊಟ್ಟಿದ್ದಾನೆ. ಅದನ್ನು ಯೋಗ್ಯ ಕಾರಣಕ್ಕೆ ಬಳಸಬೇಕು. ಇತಿಹಾಸದ ಪುಟ ನೋಡಿದರೆ ಸಾಧನೆ ಮಾಡಿದವರು ಯುವಕರು. ಅವರು ತಮ್ಮ ಜೀವನವನ್ನು ಪವಿತ್ರ ಸುಂದರಗೊಳಿಸುವುದರ ಮೂಲಕ ಸುತ್ತಲ ಸಮಾಜವನ್ನು ಸುಂದರಗೊಳಿಸಬೇಕು. ಸಮೃದ್ಧಗೊಳಿಸಬೇಕು. ಭೂಮಿಯಲ್ಲಿ ಎಲ್ಲ ಸಂಪತ್ತು ಇದೆ. ಅದನ್ನು ಹೊರ ತೆಗೆಯಬೇಕು. ಆ ಮೂಲಕ ದೇಶವನ್ನು ಕಟ್ಟಬೇಕು. ಅದಕ್ಕಾಗಿಯೇ ಯುವ ಸಮಾವೇಶ ನಡೆಯುತ್ತಿದೆ. ಶ್ರೀಗಳು ಪೀಠಾರೋಹಣ ಮಾಡಿದ ಮೇಲೆ ಎಲ್ಲವನ್ನು ಬದಲು ಮಾಡುತ್ತಿದ್ದಾರೆ. ದೇಶದಲ್ಲಿ ಹೊಸ ಕ್ರಾಂತಿಯನ್ನು ತರಲಿ ಎಂದು ಹಾರೈಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಹರ ಎಂದರೆ ಉತ್ಸಾಹ, ವಿಜಯ. ಜಪಾನ್‍ನಲ್ಲಿ ಹರ ಅಂದರೆ ಸೂರ್ಯ,ಚಂದ್ರ ಎಂದು. ಸಂಕ್ರಾಂತಿಯ ಈ ಸಂದರ್ಭದಲ್ಲಿ ಹೊಸ ಪಥ ಹಾಕಿಕೊಟ್ಟವರೇ ಸ್ವಾಮೀಜಿ. ಯೋಗಾಸನದ ಜತೆಗೆ ಯೋಗವನ್ನು ಹೇಳಿಕೊಡಬೇಕಿದೆ. ಯೋಗಾಸನ ವ್ಯಾಯಾಮ ಅದನ್ನು ಮಾಡುತ್ತಾ ಯೋಗಿಗಳಾಗಬಹುದು ಎಂಬುದನ್ನು ಶ್ರೀಗಳು ತೊರಿಸಿಕೊಟ್ಟಿದ್ದಾರೆ. ಭಯ ಮತ್ತು ಭಕ್ತಿ ಈಗ ಹೆಚ್ಚು ಅವಶ್ಯಕತೆ ಇದೆ. ವ್ಯಕ್ತಿ ವ್ಯಕ್ತಿಗಳ ನಡುವೆ, ಸಮಾಜ ಸಮಾಜದ ನಡುವೆ ಅಸೂಯೆಯನ್ನು ನಿವಾರಿಸಬೇಕು.  ಭವ್ಯವಾದ, ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಅದರಲ್ಲಿ ಯೋಗ ಕೂಡ ಒಂದು ಹಾಗೂ ಅಂತಿಮ ಸತ್ಯ, ಅಂತಿಮ ಸುಖಕ್ಕೆ ಅಧ್ಯಾತ್ಮ ಬೇಕು. ಜೀವನ ಪದ್ಧತಿಯೇ ನಮ್ಮ ಭಾರತ ಧರ್ಮ. ನಾವೆಲ್ಲರೂ ಅಧರ್ಮ ಮಾಡದೇ ಬದುಕು ಸಾಗಿಸಬೇಕು ಎಂದು ಹೇಳಿಕೊಟ್ಟ ಧರ್ಮ ಭಾರತೀಯ ಧರ್ಮ, ಹಿಂದೂ ಧರ್ಮ. ನಮ್ಮಲ್ಲಿ ಶೈಶಾವಸ್ಥೆ, ಯೌವನ, ವೃದ್ಧಾಪ್ಯ ಮೂರು ಸ್ಥಿತಿ ಜೀವನದಲ್ಲಿ ಇರುತ್ತದೆ ಎಂದರು.

ಶಾಸಕ ಮುರುಗೇಶ್ ನಿರಾಣಿ ಮಾತನಾಡಿ, ಕೃಷಿ ನಂಬಿ ಬದುಕಿದ ಸಮಾಜ ಪಂಚಮಸಾಲಿ ಸಮಾಜ. ನಾವು ಆಕಾಶದ ಕಡೆಗೆ ನೋಡದೆ ಭೂಮಿ ನೋಡಿ ಬದುಕಿದವರು. ಜೀವನದಲ್ಲಿ ಸಾಧನೆ ಮಾಡುವ ಚಲ ಇದ್ದರೆ ಸಾಕು ನಾವು ಅಂದುಕೊಂಡ ಕೆಲಸಗಳು ನನಸಾಗುತ್ತವೆ. ಬಡವರಾಗಿ ಹುಟ್ಟುವುದು ತಪ್ಪಲ್ಲ ಬಡವರಾಗಿ ಹುಟ್ಟಿ ಬಡವರಾಗಿ ಸಾಯುವುದು ತಪ್ಪ. ಈ ನಿಟ್ಟಿನಲ್ಲಿ ಸಮಾಜದ ಯುವಕರು ಶ್ರಮ ಪಟ್ಟು ದುಡಿದು ಜೀವನದಲ್ಲಿ ಮುಂದಾಗಿ ಎಂದು ಮಾರ್ಗದರ್ಶನ ನೀಡಿದರು.

ಈ ವೇಳೆ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ ಗುರೂಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಚಿತ್ರನಟ ರಮೇಶ್ ಅರವಿಂದ್, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಚಂದ್ರ ಶೇಖರ್ ಪೂಜಾರ್,ಯುವ ಘಟಕದ ಅಧ್ಯಕ್ಷರಾದ ನವೀನ್, ಚನ್ನಪ್ಪ,  ಬಿ. ನಾಗನಗೌಡ, ಬಸವರಾಜ್ ದಿಂಡೂರು ಸೇರಿ ವಿವಿಧ ಇಲಾಖೆಗಳ ಸಚಿವರು, ಶಾಸಕರು, ಸಂಸದರು ಗಣ್ಯರು ಇದ್ದರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು