ಮಂಗಳವಾರ, ಜನವರಿ 31, 2023
19 °C
ದಾವಣಗೆರೆ, ಹರಿಹರ, ಪಾಂಡೋಮಟ್ಟಿ ಸಹಿತ ಅನೇಕ ಕಡೆ ಪ್ರವಚನ ನೀಡಿದ್ದ ಸಿದ್ದೇಶ್ವರ ಸ್ವಾಮೀಜಿ

ಮಧ್ಯ ಕರ್ನಾಟಕದಲ್ಲೂ ಸಿದ್ದೇಶ್ವರ ಸ್ವಾಮೀಜಿ ಜ್ಞಾನಸುಧೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಸೋಮವಾರ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಯವರು ದಾವಣಗೆರೆ ಜಿಲ್ಲೆಯಲ್ಲಿಯೂ ಭಕ್ತಿ, ಭಾವ ಮತ್ತು ಜ್ಞಾನವನ್ನು ಪಸರಿಸಿದ್ದರು.

ನಗರದಲ್ಲಿ ಅನೇಕ ಬಾರಿ ಉಪನ್ಯಾಸ ನೀಡಿದ್ದ ಸ್ವಾಮೀಜಿ, 10 ವರ್ಷಗಳ ಹಿಂದೆ ಮೋತಿ ವೀರಪ್ಪ ಪದವಿಪೂರ್ವ ಕಾಲೇಜು ಆವರಣದಲ್ಲಿ ಒಂದು ತಿಂಗಳುಗಳ ಕಾಲ ಪ್ರವಚನ ನೀಡಿದ್ದರು. ಐದು ವರ್ಷಗಳ ಹಿಂದೆ ಜ್ಞಾನಯೋಗಿ ಸಿದ್ಧೇಶ್ವರ ಬಳಗವು ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಶ್ರೇಷ್ಠಿ ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪ್ರವಚನದಲ್ಲಿ ಒಂದು ತಿಂಗಳ ಕಾಲ ಜ್ಞಾನಪ್ರಸಾರ ಮಾಡಿದ್ದರು. ಆಗ ದೊಡ್ಡಬಾತಿಯ ತಪೋವನದಲ್ಲಿ ತಂಗಿದ್ದರು.

2018ರಲ್ಲಿ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವತತ್ವ ಸಮ್ಮೇಳನದಲ್ಲಿ ಭಾಗವಹಿಸಿ ವಿಚಾರಧಾರೆಯನ್ನು ಉಣಬಡಿಸಿದ್ದರು. 2020ರಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದಿದ್ದ ಹರಜಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದರು.

ಜಿಲ್ಲೆಯಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಜಿಲ್ಲೆಯ ಮೂಲೆ ಮೂಲೆಯಲ್ಲಿ ಭಕ್ತರು, ಅನುಯಾಯಿ ಗಳು, ಅಭಿಮಾನಿಗಳು ಇದ್ದಾರೆ.

ದಾವಣಗೆರೆ ಜಿಲ್ಲೆ ಮಾತ್ರವಲ್ಲದೆ, ಅಕ್ಕಪಕ್ಕದ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ವಿಜಯನಗರ ಜಿಲ್ಲೆಗಳಲ್ಲೂ ಶ್ರೀಗಳು ಜ್ಞಾನಸುಧೆಯನ್ನು ಪಸರಿಸಿದ್ದರು.

‘ಸಿದ್ಧೇಶ್ವರ ಸ್ವಾಮೀಜಿಯವರ ನಿರಂತರ ಸಂಪರ್ಕದಲ್ಲಿ ನಾವಿದ್ದೆವು. ಅವರು ನಮ್ಮ ಮಠದಲ್ಲಿ ನಡೆದಿದ್ದ ಬಸವತತ್ವ ಸಮ್ಮೇಳನದಲ್ಲಿ ಭಾಗವಹಿಸಿ ಒಂದು ಗಂಟೆ ಮಾತನಾಡಿದ್ದರು. ಉಪನ್ಯಾಸದಲ್ಲಿ ಬಸವಣ್ಣನವರ ವಿಚಾರಧಾರೆಗೆ ಹೆಚ್ಚಿನ ಒತ್ತು ನೀಡಿದ್ದರು. ಭಕ್ತಿ, ಭಾವ, ಜ್ಞಾನದ ಸಂಗಮವೇ ಬಸವಣ್ಣ ಎಂದು ಶ್ರೀಗಳು ಅಂದು ಬಣ್ಣಿಸಿದ್ದರು. ಅದೇ ದಾರಿಯಲ್ಲಿ ಸಾಗಿದ್ದ ಸಿದ್ಧೇಶ್ವರ ಶ್ರೀಗಳ ಎಲ್ಲ ಉಪನ್ಯಾಸಗಳು ಭಕ್ತಿ, ಭಾವ, ಜ್ಞಾನದ ಸಂಗಮವೇ ಆಗಿದ್ದವು. ಅಲ್ಲಮಪ್ರಭುವಿನ ಬಗ್ಗೆ ವಿಶೇಷವಾದ ಅನುಭಾವ ಹೊಂದಿದ್ದರು’ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ‘ಪ್ರಜಾವಾಣಿ’ ಜತೆಗೆ ನೆನಪುಗಳನ್ನು ಹಂಚಿಕೊಂಡರು.

‘ಜನಸಾಮಾನ್ಯರ ಜಾತಿ, ಮತ, ಭೇದವಿಲ್ಲದೇ ಎಲ್ಲರನ್ನೂ ಒಟ್ಟಿಗೆ ಒಯ್ದ ಬಸವಣ್ಣನ ಸಾರಥ್ಯವನ್ನು ಕೊಂಡಾಡುತ್ತಿದ್ದ ಸ್ವಾಮೀಜಿ, ಭೂಮಿಯ  ಮೇಲಿನ ಎಲ್ಲ ಮನುಜರು ಸಮಾನರು. ನಮ್ಮ ವರ್ತನೆಯಿಂದ ಬೇರೆ ಬೇರೆಯಾಗಿದ್ದೇವೆ. ಬಸವತತ್ವದ ಮೂಲಕ ಎಲ್ಲರೂ ಒಂದಾಗಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಸಮಾಜದ, ಯುವಜನರ ಸಮಸ್ಯೆಗಳಿಗೆ ಬಸವತತ್ವ, ಶರಣರ ವಿಚಾರಧಾರೆಯೇ ಔಷಧ ಎನ್ನುತ್ತಿದ್ದರು. ಅವರ ಉಪನ್ಯಾಸದಲ್ಲಿ ಪರಿಸರದ ಬಗ್ಗೆ ಕಾಳಜಿ, ಜನರನ್ನು ದುಶ್ಚಟದಿಂದ ದೂರ ಇರುವಂತೆ ಮಾಡುವ ಪ್ರಯತ್ನ ಹೀಗೇ ಅನೇಕ ವಿಚಾರಗಳಿರುತ್ತಿದ್ದವು’ ಎಂದು ಅವರು ನೆನಪಿಸಿಕೊಂಡರು.

‘ಸಮಯಕ್ಕೆ ಭಾರಿ ಮಹತ್ವ ನೀಡುತ್ತಿದ್ದ ಸ್ವಾಮೀಜಿ, ತಮ್ಮ ಪ್ರವಚನವನ್ನು ಒಂದು ನಿಮಿಷವೂ ತಡವಿಲ್ಲದೇ ಆರಂಭಿಸುತ್ತಿದ್ದರು. ಕರಾರುವಕ್ಕಾಗಿ ಮುಗಿಸುತ್ತಿದ್ದರು. ಬಸವಾದಿ ಶರಣರ ತತ್ವ, ವಿಚಾರಗಳೇ ಅಡಿಗಲ್ಲಾಗಿರುವ ನಮ್ಮ ಮಠಕ್ಕೆ ರಾಷ್ಟ್ರದ ಮಹಾನ್‌ ಸಂತ, ಸದ್ವಿವೇಕಿ, ಆದರ್ಶಪ್ರಾಯರೂ, ವಿರಳರಲ್ಲಿ ವಿರಳರೂ ಆಗಿರುವ ಸರಳ ಜೀವನದ ಜ್ಞಾನಯೋಗಿ ಸಿದ್ಧೇಶ್ವರಶ್ರೀಗಳು ಬಂದಿರುವುದೇ ನಮ್ಮ ಹೆಮ್ಮೆ’ ಎಂದು ಅವರು ಕೊಂಡಾಡಿದರು.

‘ನಾವೆಲ್ಲರೂ ಸಿದ್ಧೇಶ್ವರರ ಉಪನ್ಯಾಸವನ್ನು ದಾವಣಗೆರೆ, ಹರಿಹರ, ಪಾಂಡೋಮಟ್ಟಿ ಸಹಿತ ವಿವಿಧೆಡೆ ಕೇಳಿ ಬೆಳೆದವರು. ಭಕ್ತಿ, ಸಂಸ್ಕೃತಿ, ಸಂಸ್ಕಾರ, ಪರಿಸರ ಪ್ರೀತಿ ಎಲ್ಲವನ್ನೂ ಅವರು ಪ್ರವಚನದ ಮೂಲಕ ಧಾರೆ ಎರೆದಿದ್ದರು. ಅವರನ್ನು ಕಳೆದುಕೊಂಡು ನಾಡು ದುಃಖ ಪಡುವಂತಾಗಿದೆ’ ಎಂದು ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಲ್‌.ಜಿ. ಮಧುಕುಮಾರ್‌ ಬಸವಾಪಟ್ಟಣ ವಿಷಾದ ವ್ಯಕ್ತಪಡಿಸಿದರು.

ಸಂತಾಪ: ಸಿದ್ಧೇಶ್ವರ ಸ್ವಾಮೀಜಿಯವರ ನಿಧನಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು