ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಮಾಜವನ್ನು ಸರಿದಾರಿಗೆ ತರುವವರು ಪತ್ರಕರ್ತರು

ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಬೈರತಿ ಬಸವರಾಜ
Last Updated 2 ಅಕ್ಟೋಬರ್ 2021, 13:49 IST
ಅಕ್ಷರ ಗಾತ್ರ

ದಾವಣಗೆರೆ: ಸಮಾಜದ ಅಂಕು ಡೊಂಕುಗಳನ್ನು ತೋರಿಸಿ ತಿದ್ದಿ ಸರಿ ದಾರಿಗೆ ತರುವವರು ಪತ್ರಕರ್ತರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾ ವರದಿಗಾರರ ಕೂಟದಿಂದ ಮಾಧ್ಯಮ ದಿನಾಚರಣೆ ಹಾಗೂ ಮಾಧ್ಯಮ ಪ್ರಶಸ್ತಿ ‍ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದ್ದವು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಬಳಿಕ ನಾಲ್ಕನೇ ಅಂಗವಾಗಿ ಕೆಲಸ ಮಾಡಿದವು. ನಾವು ತಪ್ಪು ಮಾಡಿದಾಗ ಅದನ್ನು ಗುರುತಿಸಿ ನಾವು ತಿದ್ದುಕೊಳ್ಳುವಂತೆ ಇಂದಿಗೂ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಎಲ್ಲೇ ನಿವೇಶನ ನಿರ್ಮಿಸಿದಾಗ ಅದರಲ್ಲಿ ಶೇ 5ರಷ್ಟು ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿಡಬೇಕು ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಪ್ರಸ್ತಾವ ಸಲ್ಲಿಸಿದ್ದಲ್ಲದೇ ಅದಕ್ಕೆ ಅನುಮೋದನೆ ಸಿಗುವಂತೆ ಮಾಡಿದ್ದೇನೆ. ಹಾಗಾಗಿ ದಾವಣಗೆರೆಯಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಧೂಡಾದಿಂದ ನಿರ್ಮಿಸುತ್ತಿರುವ ನಿವೇಶನದಲ್ಲಿ ಪತ್ರಕರ್ತರಿಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

ವಿಜಯವಾಣಿ ಬ್ಯೂರೊ ಮುಖ್ಯಸ್ಥ ಎನ್‌.ಡಿ. ಶಾಂತಕುಮಾರ್‌ ಮಾತನಾಡಿ, ‘ಯಾವುದೇ ವೃತ್ತಿಯಲ್ಲಿ ಇರುವವರಿಗೆ ಪ್ರಶಸ್ತಿಯು ಇನ್ನಷ್ಟು ಕೆಲಸ ಮಾಡಲು ಪ್ರೇರಣೆಯನ್ನು ನೀಡುತ್ತದೆ. ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೂ ಇದು ಅನ್ವಯಿಸುತ್ತದೆ. ಆದರೆ ಒಬ್ಬ ಪತ್ರಕರ್ತ ತಾನು ಬರೆದ ಸುದ್ದಿಗೆ ಪ್ರತಿಕ್ರಿಯೆಗಳು, ಪ್ರತಿಸ್ಪಂದನೆಗಳು ಬಂದರೆ, ಆತ ತೋರಿಸಿದ ಸಮಸ್ಯೆಗಳನ್ನು ಸರ್ಕಾರ, ಅಧಿಕಾರಿಗಳು, ಸಾರ್ವಜನಿಕರು ಪರಿಹರಿಸಿದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ’ ಎಂದು ವ್ಯಾಖ್ಯಾನಿಸಿದರು.

‘ಇಂದಿನ ಬಹುತೇಕ ಪತ್ರಕರ್ತರು ಸಭೆ ಸಮಾರಂಭ, ಸುದ್ದಿಗೋಷ್ಠಿಯ ಸುದ್ದಿಗಳನ್ನು ಬರೆಯುವುದಕ್ಕೆ ಸೀಮಿತರಾಗಿದ್ದಾರೆ. ಅದರಾಚೆಗೆ ಹೋಗಿ ಜನರ ಸಮಸ್ಯೆ, ಸಂಕಷ್ಟಗಳ ಬಗ್ಗೆ ವಿಶೇಷ ವರದಿ ಮಾಡುವುದು ಕಡಿಮೆಯಾಗಿದೆ. ನಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮ ಛಾಪು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಜನತಾವಾಣಿ ಉಪ ಸಂಪಾದಕ ಇ.ಎಂ. ಮಂಜುನಾಥ, ಸಂಯುಕ್ತ ಕರ್ನಾಟಕ ಉಪಸಂಪಾದಕ ಎ.ಎನ್‌. ನಿಂಗಪ್ಪ, ಸಂಜೆವಾಣಿ ಸ್ಥಾನಿಕ ಸಂಪಾದಕ ಬಿ.ಎಂ. ಶಿವಕುಮಾರ್‌, ನಗರವಾಣಿ ವರದಿಗಾರ ಸುರೇಶ್‌ ಕೋಲ್ಕುಂಟೆ, ಟಿ.ವಿ. 9 ವಿಡಿಯೊ ಜರ್ನಲಿಸ್ಟ್‌ ರಾಮಪ್ಪ ಜಿ.ಎನ್‌. ಅವರಿಗೆ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಜತೆಗೆ ಕೂಟದಿಂದ ಎಂದಿನಂತೆ ₹ 5 ಸಾವಿರ ನಗದು ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆಯಾಗಿ ತಲಾ ₹ 10 ಸಾವಿರ ನೀಡಲಾಯಿತು.

ಕೂಟದ ಅಧ್ಯಕ್ಷ ಜಿ.ಎಂ.ಆರ್‌. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್‌, ಕೂಟದ ಮಾಜಿ ಅಧ್ಯಕ್ಷರಾದ ಏಕಾಂತಪ್ಪ, ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಬಿ.ಎನ್‌. ಮಲ್ಲೇಶ್‌, ಪ್ರಧಾನ ಕಾರ್ಯದರ್ಶಿ ಪಿ. ಮಂಜುನಾಥ ಕಾಡಜ್ಜಿ, ಕೋಶಾಧಿಕಾರಿ ನಂದಕುಮಾರ್‌ ಉಪಸ್ಥಿತರಿದ್ದರು.

ತಾರಾನಾಥ್‌ ಸ್ವಾಗತಿಸಿದರು. ಫಕೃದ್ಧೀನ್‌ ವಂದಿಸಿದರು. ದೇವಿಕಾ ಸುನಿಲ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT