ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ನಾಮಫಲಕಗಳಲ್ಲಿ ಕಣ್ಮರೆಯಾದ ಕನ್ನಡ!

Published 31 ಡಿಸೆಂಬರ್ 2023, 7:09 IST
Last Updated 31 ಡಿಸೆಂಬರ್ 2023, 7:09 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಕನ್ನಡ ನಾಮಫಲಕ ಕಡ್ಡಾಯ’ಕ್ಕಾಗಿ ಆಗ್ರಹಿಸಿ ನಡೆದ ಹೋರಾಟದ ಬೆನ್ನಲ್ಲೇ ನಗರದಲ್ಲೂ ‘ಕನ್ನಡ ನಾಮಫಲಕ ಕಡ್ಡಾಯ’ದ ಕುರಿತಾದ ಗಟ್ಟಿ ಧ್ವನಿ ಎದ್ದಿದೆ.

ನಗರದಲ್ಲಿನ ಹಲವು ಅಂಗಡಿ, ಹೋಟೆಲ್, ಮಳಿಗೆ, ವ್ಯಾಪಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಮಾಯವಾಗಿದ್ದು, ಸಂಪೂರ್ಣ ಇಂಗ್ಲಿಷ್‌ ಹಾಗೂ ಹಿಂದಿಮಯವಾಗಿವೆ. ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಈ ಹಿಂದೆಯೂ ಕನ್ನಡ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಿದ್ದರು. ಇಷ್ಟಾ ದರೂ ಪರಿಸ್ಥಿತಿ ಕಿಂಚಿತ್ತೂ ಬದಲಾಗಿಲ್ಲ. 

ಕನ್ನಡ ಸಂಘಟನೆಗಳ ಪ್ರತಿಭಟನೆ, ಕಪ್ಪು ಮಸಿ ಬಳಿಯುವ ಎಚ್ಚರಿಕೆಗೆ ಅನ್ಯ ಭಾಷೆಗಳ ನಾಮಫಲಕಗಳನ್ನು ಅಳವಡಿಸಿರುವವರು  ‘ಕ್ಯಾರೆ’ ಎನ್ನುತ್ತಿಲ್ಲ. ನಗರದ ಹಲವು ಅಂಗಡಿ, ಹೋಟೆಲ್‌ ಸೇರಿದಂತೆ ಇನ್ನಿತರ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಕಣ್ಮರೆಯಾಗಿದೆ. 

ನಗರದ ಪಿ.ಜೆ.ಬಡಾವಣೆ, ಆಂಜನೇಯ ಬಡಾವಣೆ, ಬಿ.ಇ.ಐ.ಟಿ. ಕಾಲೇಜು ರಸ್ತೆ, ಎ.ವಿ.ಕೆ. ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ, ಎಚ್‌.ಎಂ.ರಸ್ತೆ, ಆಜಾದ್ ನಗರ, ಭಾಷಾ ನಗರ ಸೇರಿದಂತೆ ಪ್ರಮುಖ ರಸ್ತೆಗಳು, ವಾಣಿಜ್ಯ ಪ್ರದೇಶಗಳಲ್ಲಿರುವ ಮಳಿಗೆಗಳು, ಅಂಗಡಿ, ಹೋಟೆಲ್‌ ಹಾಗೂ ವಾಣಿಜ್ಯ ಸಂಸ್ಥೆಗಳ ಎದುರು ಇಂಗ್ಲಿಷ್‌ ಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ. 

ಇದ್ದೂ ಇಲ್ಲದಂತಿರುವ ಕನ್ನಡ: ನಗರದ ಹಲವೆಡೆ ಇಂಗ್ಲಿಷ್‌ ಹಾಗೂ ಕನ್ನಡ ಎರಡೂ ಭಾಷೆಯ ನಾಮಫಲಕಗಳಿವೆ. ಆದರೆ, ಇಂಗ್ಲಿಷ್‌ ಭಾಷೆಯ ಅಕ್ಷರಗಳನ್ನು ದೊಡ್ಡದಾಗಿ ಬರೆದು ಕನ್ನಡ ಭಾಷೆಯ ಪದಗಳನ್ನು ಕಂಡೂ ಕಾಣದೇ ಇರುವ ಹಾಗೆ ಹಾಕಲಾಗಿದೆ. ಇನ್ನೂ ಕೆಲವೆಡೆ ಶೇ 50:50ರ ಅನುಪಾತದಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ. 

ಜಾಹೀರಾತು ಫ್ಲೆಕ್ಸ್‌ಗಳಲ್ಲಿಲ್ಲ ಕನ್ನಡ

‘ಶಾಲಾ–ಕಾಲೇಜುಗಳ ಪ್ರವೇಶಾತಿ, ತರಬೇತಿ ಶಿಬಿರ, ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಪಟ್ಟಂತೆ ನಗರದ ಹಲವೆಡೆ ಅಳವಡಿಸಿರುವ ಹೆಚ್ಚಿನ ಫ್ಲೆಕ್ಸ್‌ಗಳಲ್ಲಿ ಕನ್ನಡ ಭಾಷೆ ಇಲ್ಲವಾಗಿದ್ದು, ಇಂಗ್ಲಿಷ್‌ ಭರಾಟೆ ಹೆಚ್ಚಿದೆ. ಫ್ಲೆಕ್ಸ್‌, ಬ್ಯಾನರ್‌ಗಳಲ್ಲೂ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ರಾಮೇಗೌಡ ಒತ್ತಾಯಿಸಿದರು.

‘ಕನ್ನಡ ಭಾಷೆಯನ್ನು ಬಳಸದ ನಾಮಫಲಕಗಳನ್ನು ತೆರವುಗೊಳಿಸಲಾಗುತ್ತಿದೆ. ನಗರದಲ್ಲಿ ಅಳವಡಿಸುವ ನಾಮಫಲಕಗಳು ಶೇ 60 ಕನ್ನಡ ಭಾಷೆ, ಶೇ 40ರಷ್ಟು ಇತರ ಭಾಷೆಯಲ್ಲಿ ಇರಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಾಲಿಕೆ ಮುಂದಾಗಿದೆ. ಈ ನಿಯಮ ಪಾಲಿಸುವಂತೆ ಬಂಟಿಂಗ್ಸ್‌, ಫ್ಲೆಕ್ಸ್‌, ಬ್ಯಾನರ್‌ ತಯಾರಿಸುವವರಿಗೆ ಆರೋಗ್ಯ ನಿರೀಕ್ಷಕರ ಮೂಲಕ ನೋಟಿಸ್‌ ನೀಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಚಂದ್ರಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT