ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು ಕ್ಷೇತ್ರ ಸ್ಥಿತಿ–ಗತಿ: ಸಾಂಪ್ರದಾಯಿಕ ಎದುರಾಳಿಗಳ ನಡುವೆಯೇ ಕದನ?

ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್‌.‍ಪಿ. ರಾಜೇಶ್‌ ಸಹಿತ 6 ಜನ ಟಿಕೆಟ್‌ ಆಕಾಂಕ್ಷಿಗಳು
Last Updated 14 ಜನವರಿ 2023, 5:54 IST
ಅಕ್ಷರ ಗಾತ್ರ

ದಾವಣಗೆರೆ: ‘ಬರಪೀಡಿತ ತಾಲ್ಲೂಕು’ ಎಂಬ ಹಣೆಪಟ್ಟಿ ಹೊಂದಿರುವ ಜಗಳೂರಿನಲ್ಲಿ ಎರಡು ವರ್ಷಗಳಿಂದ ಉತ್ತಮ ಮಳೆ ಸುರಿದು ಹಸಿರು ವಾತಾವರಣ ಸೃಷ್ಟಿಯಾಗುತ್ತಿದೆ. ಮಳೆ ಸುರಿದಂತೆಯೇ ರಾಜಕೀಯದ ಮೇಲಾಟವೂ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಹೊರತುಪಡಿಸಿ ಉಳಿದ ಪಕ್ಷಗಳು ಇಲ್ಲಿ ಅಷ್ಟಾಗಿ ನೆಲೆಯೂರಲು ಇದುವರೆಗೆ ಸಾಧ್ಯವಾಗಿಲ್ಲ. ಹಾಲಿ ಶಾಸಕ ಎಸ್‌.ವಿ. ರಾಮಚಂದ್ರ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಏಕೈಕ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ಗೆ ಪೈಪೋಟಿ ಕಂಡುಬಂದಿದೆ.

Caption
Caption

ಎಸ್‌.ವಿ. ರಾಮಚಂದ್ರ ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕೀಯಕ್ಕೆ ಬಂದಿದ್ದರೆ, ಎಚ್‌.ಪಿ. ರಾಜೇಶ್‌ ಬಿಜೆಪಿ ಮೂಲಕ ರಾಜಕಾರಣಕ್ಕೆ ಇಳಿದವರು. ಈಗ ಎಸ್‌.ವಿ. ರಾಮಚಂದ್ರ ಬಿಜೆಪಿಯಲ್ಲಿದ್ದರೆ, ಎಚ್‌.ಪಿ. ರಾಜೇಶ್‌ ಕಾಂಗ್ರೆಸ್‌ನಲ್ಲಿದ್ದಾರೆ.

2008ರಲ್ಲಿ ಎಸ್‌ವಿಆರ್‌ ಕಾಂಗ್ರೆಸ್‌ನಿಂದ, ಎಚ್‌ಪಿಆರ್‌ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಎಸ್‌ವಿಆರ್‌ ಗೆದ್ದು ಬಂದಿದ್ದರು. ನಂತರ ನಡೆದ ‘ಆಪರೇಶನ್‌ ಕಮಲ’ ಬೆಳವಣಿಗೆಯಲ್ಲಿ ಅವರು ಬಿಜೆಪಿಯತ್ತ ವಾಲಿದರು. ಅಂತೆಯೇ 2011ರಲ್ಲಿ ಉಪಚುನಾವಣೆ ನಡೆಯಿತು. ಬಿಜೆಪಿಯಿಂದ ರಾಮಚಂದ್ರ ಸ್ಪರ್ಧಿಸಿದರೆ, ರಾಜೇಶ್‌ ಬಂಡಾಯ ಎದ್ದು ಪಕ್ಷೇತರನಾಗಿ ಸ್ಪರ್ಧಿಸಿದ್ದರು. ವೈ.ದೇವೇಂದ್ರಪ್ಪ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ರಾಮಚಂದ್ರ ಕೇವಲ 3,500 ಮತಗಳ ಅಂತರದಿಂದ ಗೆದ್ದು ಬಂದಿದ್ದರು. ರಾಜೇಶ್‌ 2ನೇ ಸ್ಥಾನ ಪಡೆದರೆ, ದೇವೇಂದ್ರಪ್ಪ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರೂ, 28 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು.

2013ರ ಚುನಾವಣೆಯಲ್ಲಿ ರಾಜೇಶ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ರಾಮಚಂದ್ರ ಕೆಜೆಪಿಯಿಂದ ಕಣಕ್ಕಿಳಿದಿದ್ದರು. ರಾಜೇಶ್‌ 37,000 ಮತಗಳ ಭಾರಿ ಅಂತರದಿಂದ ಗೆದ್ದು ಬಂದಿದ್ದರು. ರಾಮಚಂದ್ರ 2ನೇ ಸ್ಥಾನ ಪಡೆಯಬೇಕಾಯಿತು. ಇದೇ ಸಮಯದಲ್ಲಿ ಬಿಜೆಪಿಯ ಅಭ್ಯರ್ಥಿಗೆ 2,000 ಮತ ಕೂಡ ಸಿಕ್ಕಿರಲಿಲ್ಲ. ಬಿಜೆಪಿಗಿಂತ ಎರಡು ಪಟ್ಟು ಮತಗಳನ್ನು ಜೆಡಿಎಸ್ ಪಡೆದಿತ್ತು.

2018ರಲ್ಲಿ ಮತ್ತೆ ಇದೇ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಮಚಂದ್ರ 30,000 ಮತಗಳ ಭಾರಿ ಅಂತರದಿಂದ ಜಯಸಿದರೆ, ರಾಜೇಶ್‌ 2ನೇ ಸ್ಥಾನಕ್ಕೆ ತೃಪ್ತರಾಗುವಂತಾಯಿತು.

ಮತ್ತೆ ಈ ಇಬ್ಬರೂ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಸ್‌.ವಿ. ರಾಮಚಂದ್ರ ಅವರಿಗೆ ಪಕ್ಷದೊಳಗೆ ಪೈಪೋಟಿ ಇಲ್ಲ. ‘ರಾಮಚಂದ್ರ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿ’ ಎಂದು ಇತ್ತೀಚೆಗೆ ಜಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಕರೆ ಕೊಟ್ಟು ಹೋಗಿದ್ದರು. ಆದರೆ, ಕಾಂಗ್ರೆಸ್‌ನಲ್ಲಿ ಎಚ್‌.ಪಿ.ಆರ್‌ ಅಲ್ಲದೇ ಮತ್ತೆ ಐವರು ಅರ್ಜಿ ಸಲ್ಲಿಸಿದ್ದಾರೆ. ಬಿ. ದೇವೇಂದ್ರಪ್ಪ, ಕೆ.ಪಿ. ಪಾಲಯ್ಯ ಪ್ರಬಲವಾಗಿ ಪ್ರಯತ್ನಿಸುತ್ತಿದ್ದಾರೆ. ದೇವೇಂದ್ರಪ್ಪ ಹಿಂದೆ ಜೆಡಿಎಸ್‌ನಿಂದ, ಪಾಲಯ್ಯ ಹಿಂದೆ ಬಿಎಸ್‌ಪಿಯಿಂದ ಸ್ಪರ್ಧಿಸಿ ಕ್ಷೇತ್ರದ ಅನುಭವ ಇರುವವರು. ಜತೆಗೆ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪುಷ್ಪಾ ಲಕ್ಷ್ಮಣ ಸ್ವಾಮಿಯೂ ಅರ್ಜಿ ಸಲ್ಲಿಸಿದ್ದಾರೆ. ಎಂ.ಹನುಮಂತಪ್ಪ, ಜೆ.ಆರ್. ರವಿಚಂದ್ರ ಅವರೂ ಆಕಾಂಕ್ಷಿಗಳಾಗಿದ್ದಾರೆ.

ಬೇರೆ ಪಕ್ಷಗಳಲ್ಲಿ ಟಿಕೆಟ್‌ ಸಿಗದೇ ಅಸಮಾಧಾನಗೊಳ್ಳುವವರು ಜೆಡಿಎಸ್‌ ಕಡೆ ಬರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಜೆಡಿಎಸ್‌ ಈ ಬಾರಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಉಳಿದ ಪಕ್ಷಗಳು, ಪಕ್ಷೇತರರು ಸಿದ್ಧವಾಗಲಿದ್ದಾರೆ. ಸದ್ಯಕ್ಕೆ ಬಿಜೆಪಿ–ಕಾಂಗ್ರೆಸ್‌ ಹಣಾಹಣಿಯೇ ಕಾಣಿಸುತ್ತಿದೆ.

***

ಜಗಳೂರಿನಲ್ಲಿ ಶಾಸಕ ಎಸ್‌.ವಿ. ರಾಮಚಂದ್ರ ಅವರು ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದಾರೆ. ಇಲ್ಲಿ ಬಿಜೆಪಿಗೆ ಮತ್ತೆ ಗೆಲುವಾಗಲಿದೆ.
- ಎಸ್‌.ಎಂ. ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಮಾಜಿ ಶಾಸಕ ಎಚ್‌.ಪಿ. ರಾಜೇಶ್‌ ಸಹಿತ ಕೆಲವು ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿದ್ದಾರೆ. ಜಗಳೂರಿನಲ್ಲಿ ಕಾಂಗ್ರೆಸ್‌ ಅಲೆ ಇರುವುದು ನಿಚ್ಚಳವಾಗಿದೆ.
- ಎಚ್‌.ಬಿ. ಮಂಜಪ್ಪ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT