ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಭಾಗಕ್ಕೆ ನೀರು ಹರಿಸಿ; ತೋಟ ಉಳಿಸಿ–ಅಧಿಕಾರಿಗಳಿಗೆ ಶಾಸಕ ಹರೀಶ್ ತಾಕೀತು

ಹರಿಹರ: ಕೆಡಿಪಿ ಸಭೆಯಲ್ಲಿ ಶಾಸಕ ಹರೀಶ್ ಅಧಿಕಾರಿಗಳಿಗೆ ತಾಕೀತು
Published 12 ಮಾರ್ಚ್ 2024, 14:32 IST
Last Updated 12 ಮಾರ್ಚ್ 2024, 14:32 IST
ಅಕ್ಷರ ಗಾತ್ರ

ಹರಿಹರ: ‘ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿಸಲಿರುವ ನೀರು ಕೊನೆ ಭಾಗದವರೆಗೆ ತಲುಪದಿದ್ದರೆ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೋಟಗಾರಿಕೆ ಬೆಳೆಗಳು ನಾಶವಾಗುವ ಅಪಾಯವಿದೆ’ ಎಂದು ಶಾಸಕ ಬಿ.ಪಿ.ಹರೀಶ್ ಆತಂಕ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮಳೆಗಾಲದ ಮುನ್ನ ಇನ್ನೆರಡು ಬಾರಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಮಾರ್ಚ್‌ 19ರ ವೇಳೆಗೆ ತಾಲ್ಲೂಕಿನ ಕಾಲುವೆಗಳಿಗೆ ನೀರು ತಲುಪುವ ನಿರೀಕ್ಷೆ ಇದೆ. ನಿಯಮದಂತೆ ಸರಿಯಾದ ಪ್ರಮಾಣದಲ್ಲಿ ನೀರು ಹರಿಯುತ್ತಿದೆಯೆ ಎಂದು ಇಲಾಖೆ ಎಂಜಿನಿಯರ್‌ಗಳು ನಿಗಾ ಇಡಬೇಕು. ಕೊನೆ ಭಾಗದಲ್ಲಿರುವ ಅಡಿಕೆ ಹಾಗೂ ಇತರೆ ತೋಟಗಳಿಗೆ ನೀರು ಹರಿಯುವಂತೆ ಎಚ್ಚರಿಕೆ ವಹಿಸಿ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಬೇಸಿಗೆಯಲ್ಲಿ ವಿವಿಧ ಕಾಯಿಲೆಗಳು ಹರಡುವ ಅಪಾಯ ಇರುತ್ತದೆ. ತಾಲ್ಲೂಕು ಪಂಚಾಯಿತಿ ಇಒ, ಗ್ರಾಮ ಪಂಚಾಯಿತಿ ಪಿಡಿಒ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಗಳಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸಬೇಕು’ ಎಂದರು.

‘ಕುಡಿಯುವ ನೀರಿನ ಕೊರತೆ ಆಗದಂತೆ ವ್ಯವಸ್ಥೆ ಮಾಡಬೇಕು. ವಿಶೇಷವಾಗಿ ತಾಲ್ಲೂಕಿನಲ್ಲಿರುವ ವಿವಿಧ ಇಲಾಖೆಗಳ ಹಾಸ್ಟೆಲ್, ವಸತಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಲಭ್ಯತೆ ಬಗ್ಗೆ ನಿಗಾ ವಹಿಸಬೇಕು. ವಿದ್ಯಾರ್ಥಿಗಳಿಗೆ ಶುದ್ಧವಾದ ಕುಡಿಯುವ ನೀರು ಹಾಗೂ ಗುಣಮಟ್ಟದ ಆಹಾರ ವಿತರಣೆಯಾಗಬೇಕು’ ಎಂದು ತಾಕೀತು ಮಾಡಿದರು.

‘ಮಲೇಬೆನ್ನೂರಿನಲ್ಲಿ ಗ್ರಾಮದೇವತೆ ಹಬ್ಬ ನಡೆಯಲಿದ್ದು, ಕುಡಿಯುವ ನೀರಿನ ಕೊರತೆ ಆಗದಂತೆ ಹಾಗೂ ನೈರ್ಮಲ್ಯದ ಕುರಿತು ಮುಂಜಾಗ್ರತೆ ವಹಿಸಬೇಕು’ ಎಂದಾಗ, ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ‘9 ಕೊಳವೆಬಾವಿಗಳನ್ನು ಮತ್ತಷ್ಟು ಆಳಕ್ಕೆ ತೋಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಹೊನ್ನಾಳಿ ಪುರಸಭೆಯಿಂದ ಕೆಲವು ಪೌರ ನೌಕರರನ್ನು ಕಳುಹಿಸಲು ಕೋರಿಕೆ ಸಲ್ಲಿಸಲಾಗಿದೆ’ ಎಂದರು.

‘ಪ್ರತಿ ತಾಲ್ಲೂಕಿಗೆ ಐದು ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಲಾಗುವುದು’ ಎಂದು ಶಿಕ್ಷಣ ಸಚಿವರು ಹೇಳಿರುವ ಬಗ್ಗೆ ಶಾಸಕರು ಪ್ರಸ್ತಾಪಿಸಿದಾಗ, ಬಿಇಒ ಹನುಮಂತಪ್ಪ ಎಂ. ಪ್ರತಿಕ್ರಿಯಿಸಿ, ‘ನಿಯಮದಂತೆ ಹರಿಹರದ ಡಿಆರ್‌ಎಂ ಮತ್ತು ಮಲೇಬೆನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಫ್ರೌಢಶಾಲೆಗಳು ಮಾತ್ರ ಕೆಪಿಎಸ್ ಶಾಲೆಯಾಗಲು ಅರ್ಹತೆ ಪಡೆದಿವೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲ್ಲೂಕನ್ನು ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ತರಲು ನಿಶ್ಚಯಿಸಲಾಗಿದೆ’ ಎಂದರು.

‘ಅರಣ್ಯ ಇಲಾಖೆಯಿಂದ ರಸ್ತೆ ಅಂಚಿಗೆ ಮರ ಬೆಳೆಸುವುದರಿಂದ ರಸ್ತೆಗಳಿಗೆ ಧಕ್ಕೆ ಆಗುತ್ತಿದೆ, ಕನಿಷ್ಠ ಮೂರು ಮೀಟರ್ ಅಂತರದಲ್ಲಿ ಮರಗಳನ್ನು ಬೆಳೆಸಬೇಕು’ ಎಂದು ಪಿಡಬ್ಲ್ಯುಡಿ ಎಇಇ ಶಿವಮೂರ್ತಿ ಹೇಳಿದಾಗ, ‘ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಅಮೃತ ಟಿ.ಆರ್ ಪ್ರತಿಕ್ರಿಯಿಸಿ, ‘ಮುಂದಿನ ಬಾರಿಗೆ ಇದನ್ನು ಪಾಲನೆ ಮಾಡಲಾಗುವುದು’ ಎಂದು ಹೇಳಿದರು.

ತಹಶೀಲ್ದಾರ್ ಗುರುಬಸವರಾಜ್, ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಸುಲ್ಪಿ, ವಿವಿಧ ಇಲಾಖಾಧಿಕಾರಿಗಳಾದ ನಾರನಗೌಡ್ರು, ಡಾ.ಪ್ರಶಾಂತ್, ಶಶಿಧರ್, ಡಾ.ಹನುಮನಾಯ್ಕ, ನಿರ್ಮಲಾ, ರಾಮಕೃಷ್ಣಪ್ಪ, ಗಿರೀಶ್, ಟಿ.ಕೆ.ಸಿದ್ದೇಶ್, ಸತೀಶ್, ಜಾಕಿರ್, ಕವಿತಾ, ಸುನಿತಾ ವಿದ್ಯಾ ಇದ್ದರು.

ಸೌರ ಫಲಕ ಅಳವಡಿಸಿದರೆ ಸಹಾಯಧನ

‘ಆರ್‌ಸಿಸಿ ಮತ್ತು ಶೀಟಿನ ಮನೆಗಳ ಮೇಲೆ ಸೌರ ಶಕ್ತಿ ವಿದ್ಯುತ್ ಫಲಕ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವವರಿಗೆ ಇಲಾಖೆಯಿಂದ ₹ 30000ದವರೆಗೆ ಸಹಾಯಧನ ನೀಡಲಾಗುವುದು. ಇದೇ ರೀತಿ ರೈತರು ಜಮೀನುಗಳಲ್ಲಿಯೂ ಸೌರ ಫಲಕ ಅಳವಡಿಸಿದರೆ ಸಹಾಯಧನ ನೀಡಲಾಗುವುದು. ಅವರು ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್ತನ್ನು ಇಲಾಖೆ ಖರೀದಿಸಲಿದೆ’ ಎಂದು ಬೆಸ್ಕಾಂ ಎಇಇ ನಾಗರಾಜ್‌ನಾಯ್ಕ ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT