ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 4ಕ್ಕೆ ದಾವಣಗೆರೆಗೆ ಕೇಜ್ರಿವಾಲ್ ಭೇಟಿ

Last Updated 27 ಫೆಬ್ರುವರಿ 2023, 4:30 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಾರ್ಚ್‌ 4ರಂದು ನಡೆಯುವ ರಾಜ್ಯಮಟ್ಟದ ಸಮಾವೇಶಕ್ಕೆ ಆಮ್ ಆದ್ಮಿ ಪಾರ್ಟಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚಾಲನೆ ನೀಡಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ಪ್ರಚಾರ ಸಮಿತಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ತಿಳಿಸಿದರು.

‘ಅಂದು ಬೆಳಿಗ್ಗೆ 11ಕ್ಕೆ ‌ನಗರದ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಹಲವು ನಾಯಕರು ಭಾಗವಹಿಸಲಿದ್ದಾರೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದುವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ

ಜೆಡಿಎಸ್‌ಗಳು ಜನರಿಗೆ ಸಮಪಾಲು ಸಮಬಾಳು ಕೊಟ್ಟಿಲ್ಲ. ರೈತರಿಗೆ ಅನುಕೂಲ ಮಾಡಿಕೊಟ್ಟಿಲ್ಲ. ಈಗ ಚುನಾವಣೆ ಬಂದಿದೆ ಎಂದು ಆಮ್ ಆದ್ಮಿ ಪಾರ್ಟಿ ದೆಹಲಿ ಹಾಗೂ ಪಂಜಾಬ್‌ಗಳಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಕಾಪಿ ಮಾಡುತ್ತಿವೆ. ಇವೇ ಯೋಜನೆಗಳನ್ನು ಇಷ್ಟು ದಿನ ಏಕೆ ಜಾರಿಗೆ ತರಲಿಲ್ಲ? ದೆಹಲಿಯಲ್ಲಿ ಜಾರಿಗೆ ತರಲಾಗಿರುವ ಯೋಜನೆಗಳನ್ನು ‘ರೇವಡಿ’ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದರು. ಈಗ ಅವರದೇ ಪಕ್ಷ ಉಚಿತ ಕೊಡುಗೆ ನೀಡುತ್ತಿದೆ. ಈ ಬಗ್ಗೆ ಏಕೆ ಮೌನವಾಗಿದ್ದಾರೆ’ ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಒಂದೇ ದಿನದಲ್ಲಿ ₹ 6,000‌ ಕೋಟಿ ಗುತ್ತಿಗೆ ನೀಡಿದೆ. ಇದರಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಆಗಿದೆ ಎಂದು ಪ್ರಶ್ನಿಸಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಶ್ಯಕ್ತರಾಗಿದ್ದಾರೆ. ಅವರನ್ನು ರಿಮೋಟ್ ಮೂಲಕ ನಡೆಸಲಾಗುತ್ತಿದೆ‘ ಎಂದು ದೂರಿದರು.

’ಕಾಂಗ್ರೆಸ್ ಪಕ್ಷ ಸುದೀರ್ಘ ಆಡಳಿತ ನಡೆಸಿದರೂ ಜನರಿಗೆ ಸೌಲಭ್ಯಗಳನ್ನು ನೀಡಲಿಲ್ಲ. ಬಿಜೆಪಿ ಧಾರ್ಮಿಕ ವಿಷಯಗಳನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದೆ. ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದ 25 ತುಂಬಿದ ಎಲ್ಲರಿಗೂ ವಿಧಾನಸಭೆಗೆ ಹೋಗಬೇಕೆಂಬ ತವಕ ಇದೆ. ಇದು ಪ್ರಜಾಪ್ರಭುತ್ವವಾ’ ಎಂದು ಪ್ರಶ್ನಿಸಿದರು.

ಜನರಲ್ಲಿ ಈ ಮೂರೂ ‘ಜೆ.ಸಿ.ಬಿ.’ ಪಕ್ಷಗಳ ಬಗ್ಗೆ ಅಸಹನೆ ಇದೆ. ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಗಣನೀಯ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಂಜಾಬ್‌ನ ಕ್ರಾಂತಿಕಾರಿ ವಿಚಾರದ ಬೋಧಕ ಅಮೃತ್‌ಪಾಲ್‌ ಸಿಂಗ್‌ ಬೆಂಬಲಿಗರು ಅಜ್ಮಾಲಾ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮಗೆ ಕೇಂದ್ರ ಸರ್ಕಾರದ ಸಹಕಾರ ಸಿಗುತ್ತಿಲ್ಲ. ನಮಗೆ ಕೆಟ್ಟ ಹೆಸರು ಬರಬೇಕೆಂದು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈ ಘಟನೆಯನ್ನು ಮಂದಿಟ್ಟುಕೊಂಡು ಪಕ್ಷ ಮುಗಿಸಲು ಬಿಜೆಪಿ ಸಂಚು ನಡೆಸಿದೆ‘ ಎಂದು ಆರೋಪಿಸಿದರು.

ಪಕ್ಷದ ಮುಖಂಡರಾದ ರುದ್ರಯ್ಯ ನವಲಿ ಹಿರೇಮಠ್, ಗುರುಮೂರ್ತಿ, ಚಂದ್ರು ಬಸವಂತಪ್ಪ, ಮಂಜುನಾಥ್, ಆದಿಲ್ ಖಾನ್‌, ಗೋವಿಂದ್ ರಾಜ್, ಧರ್ಮಾನಾಯ್ಕ, ರಾಜಶೇಖರ್, ಶ್ರೀಧರ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT