ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕಿರ್ಲೋಸ್ಕರ್ ಕಾರ್ಮಿಕರಿಗೆ ಸಿಗದ ಗ್ರಾಚ್ಯುಟಿ

ಗ್ರಾಚ್ಯುಟಿ ಕೊಡಿಸಲು ಕ್ರಮಕ್ಕೆ ಆಗ್ರಹಿಸಿ ಕಾರ್ಮಿಕರಿಂದ ಎಸ್‌ಪಿಗೆ ದೂರು
Last Updated 15 ಮೇ 2022, 4:04 IST
ಅಕ್ಷರ ಗಾತ್ರ

ಹರಿಹರ: ಸಮಾಪನಾ ಪ್ರಕ್ರಿಯೆಲ್ಲಿರುವ ಇಲ್ಲಿನ ದಿ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯ 1800 ಕಾರ್ಮಿಕರಿಗೆ ಪೂರ್ಣ ಮೊತ್ತದ ಗ್ರಾಚ್ಯುಟಿ (ಉಪಧನ) ನೀಡದ ದಿ ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಗ್ರಾಚ್ಯುಟಿ ಟ್ರಸ್ಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಲವು ಕಾರ್ಮಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಹಲವು ಪ್ರಕರಣಗಳಲ್ಲಿ ಸಮಾಪನಾ ಪ್ರಕ್ರಿಯೆಯಲ್ಲಿರುವ ಈ ಕಾರ್ಖಾನೆಯ ಕಾರ್ಮಿಕರಿಗೆ ಬಾಕಿ ಗ್ರಾಚ್ಯುಟಿ ನೀಡಲು ಕಾರ್ಖಾನೆಯ ಗ್ರಾಚ್ಯುಟಿ ಟ್ರಸ್ಟ್ ಬಾಧ್ಯಸ್ಥ ಎಂದು ಹೈಕೋರ್ಟ್ ಹಾಗೂ ದಾವಣಗೆರೆ ಕಾರ್ಮಿಕ ನ್ಯಾಯಾಲಯಗಳು ಆದೇಶಿಸಿವೆ.

ಬಾಕಿ ಇರುವ ಗ್ರಾಚ್ಯುಟಿಯನ್ನು ಪಾವತಿ ಮಾಡುವಂತೆ ಗ್ರಾಚ್ಯುಟಿ ಟ್ರಸ್ಟ್‌ಗೆ ಸಹಾಯಕ ಕಾರ್ಮಿಕ ಆಯುಕ್ತರು 2016ರ ಫೆಬ್ರುವರಿ 15ಕ್ಕೆ ಶೋಕಾಸ್ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೆ ಇದಕ್ಕೆ ಟ್ರಸ್ಟಿಗಳು ಉತ್ತರಿಸಿಲ್ಲ. 2018ರ ನವೆಂಬರ್ 2ರಂದು ಕಾರ್ಮಿಕ ಇಲಾಖೆ ವಸೂಲಿ ಪ್ರಮಾಣ ಪತ್ರವನ್ನೂ ಬಿಡುಗಡೆ ಮಾಡಿದೆ.

ಕಂದಾಯ ಬಾಕಿ ಎಂದು ಟ್ರಸ್ಟ್‌ನವರಿಂದ ಬಾಕಿ ಮೊತ್ತದ ಗ್ರಾಚ್ಯುಟಿ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ 2020ರ ನವೆಂಬರ್ 11ರಂದು ಪತ್ರ ಬರೆದಿದ್ದಾರೆ.

ಉಪಧನ ಕಾಯ್ದೆ-1972ರನ್ವಯ ಗ್ರಾಚ್ಯುಟಿಯನ್ನು ವಸೂಲಾತಿ ಮಾಡುವಂತೆ ಕಾರ್ಮಿಕ ಇಲಾಖೆ ಆಯುಕ್ತರು ಅಧಿನಾಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಕಾರ್ಖಾನೆಯ ಹಲವು ಉನ್ನತ ಮಾಜಿ ಅಧಿಕಾರಿಗಳೇ ಗ್ರಾಚ್ಯುಟಿ ಟ್ರಸ್ಟ್‌ನ ಟ್ರಸ್ಟಿಗಳಾಗಿದ್ದು, ಕಂದಾಯ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲ. ಟ್ರಸ್ಟಿಗಳಿಂದ ಬಾಕಿ ಮೊತ್ತ ಕೊಡಿಸಲು ಕ್ರಮಕೈಗೊಳ್ಳಬೇಕು’ ಎಂದು ಕಾರ್ಮಿಕರಾದ ಎಂ.ಬಿ.ರಮೇಶ್, ಕೆಂಚಪ್ಪ, ಶಾಂತಲಾ, ಗಂಗಮ್ಮ, ಹಾಲಪ್ಪ, ಮಂಜುನಾಥ್ ಸಾ ಪವಾರ್, ಎಂ. ನಿಂಗಪ್ಪ ಅವರನ್ನು ಎಸ್‌ಪಿಯವರನ್ನು ಒತ್ತಾಯಿಸಿದ್ದಾರೆ.

‘ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ’ ಎಂದು ಕಾರ್ಮಿಕ ಮುಖಂಡ ಎಂ.ಬಿ.ರಮೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT