ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಕೊರೊನಾ ಕಲಿಸಿದ ‘ಪಾಠ'

Last Updated 12 ಏಪ್ರಿಲ್ 2021, 5:03 IST
ಅಕ್ಷರ ಗಾತ್ರ

ದಾವಣಗೆರೆ: ಮೊಬೈಲ್ ಗೀಳು ಹತ್ತಿಸಿಕೊಂಡಿದ್ದ ಬಾಲಕ ಮೂರ್ಛೆ ಬಂದವನಂತೆ ಆಡುತ್ತಿದ್ದ. ಮೊಬೈಲ್ ಕೊಟ್ಟ ತಕ್ಷಣ ಸುಮ್ಮನಾಗುತ್ತಿದ್ದ. ಬಾಲಕನ ಅಜ್ಜಿಗೆ ಮೂರ್ಛೆ ರೋಗವಿತ್ತು. ಪೋಷಕರು ‘ಹುಡುಗ ಆರಾಮ್ ಇಲ್ಲ ಕೇಳಿದ್ದನ್ನು ಕೊಟ್ಟು ಬಿಡೋಣ’ ಎಂದು ಕೈಗಿಟ್ಟು ಸುಮ್ಮನಾಗುತ್ತಿದ್ದರು. ಸಹಾನುಭೂತಿ ಸೃಷ್ಟಿಸಲು ಈ ರೀತಿ ನಾಟಕವಾಡುತ್ತಿದ್ದಾನೆ ಎಂಬುದು ಪೋಷಕರಿಗೆ ಕೊನೆಗೆ ಅರಿವಾಯಿತು.

ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಮರುಳಸಿದ್ದಪ್ಪ ಪಿ.ಎಂ, ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ಹೇಳಿದ ವಿಷಯ ಇಂದಿನ ಪರಿಸ್ಥಿತಿಯನ್ನು ಅಣಕಿಸುವಂತಿದೆ. ಕೊರೊನಾ ಬಂದು ವರ್ಷವಾಯಿತು. ಈಗ ಎರಡನೇ ಅಲೆಯೂ ಆರಂಭವಾಗಿದೆ. ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಮಕ್ಕಳು ಮೊಬೈಲ್‌ಗೆ ಹೇಗೆ ಅಡಿಕ್ಟ್ ಆಗಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆಗಳ ಮೂಲಕ ವಿವರಿಸುತ್ತಾರೆ.

ಇಂತಹ ಹಲವು ಪ್ರಕರಣಗಳು ಮರುಳಸಿದ್ದಪ್ಪ ಅವರ ಬಳಿಗೆ ಬರುತ್ತಿದ್ದು, ಅವರಿಗೆ ಸಲಹೆಯನ್ನು ನೀಡಿದ್ದಾರೆ. ದೂರವಾಣಿ ಮುಖಾಂತರವೂ ಹಲವು ಪೋಷಕರು ಇವರಿಂದ ಸಲಹೆ‍ಪಡೆದುಕೊಂಡಿದ್ದಾರೆ.

1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ತರಗತಿಗಳು ಆರಂಭವಾಗಿಲ್ಲ. 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭವಾಗಿತ್ತು. ಕೊರೊನಾ ಎರಡನೇ ಅಲೆ ಆರಂಭವಾದಾಗಿನಿಂದ ಅವುಗಳೂ ಸ್ಥಗಿತಗೊಂಡಿವೆ. ಈಗ 10ನೇ ತರಗತಿಯ ಮೇಲಿನ ವಿದ್ಯಾರ್ಥಿಗಳಿಗಷ್ಟೇ ತರಗತಿಗಳು ನಡೆಯುತ್ತಿವೆ.

‘ಹೊಸ ಬಗೆಯ ರೋಗವಾದ ಕೋವಿಡ್ ಬಹಳಷ್ಟು ದುಷ್ಪರಿಣಾಮ ಬೀರುತ್ತಿದೆ. ಸ್ನೇಹಿತರ ಜೊತೆ ಆಟವಾಡಿ ಬೆಳೆಯುತ್ತಿದ್ದ ಮಕ್ಕಳಿಗೆ ಕೋವಿಡ್‌ ನಿರ್ಬಂಧದಿಂದಾಗಿ ಸ್ನೇಹಿತರ ಜೊತೆ ಬೆರೆಯಲಾಗುತ್ತಿಲ್ಲ. ಪೋಷಕರು ತಮ್ಮ ಪಾಡಿಗೆ ತಾವು ಇರುತ್ತಾರೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಸಮಯ ಕಳೆಯಲು ಆಗುತ್ತಿಲ್ಲ. ಆನ್‌ಲೈನ್, ಆಫ್‌ಲೈನ್ ತರಗತಿಗಳು, ಪರೀಕ್ಷೆ ಇದೆಯೋ, ಇಲ್ಲವೋ ಎಂಬ ಗೊಂದಲಗಳಿಂದಾಗಿ ಮಕ್ಕಳು ಇನ್ನಷ್ಟು ಹೈರಾಣಾಗಿದ್ದಾರೆ’ ಎನ್ನುತ್ತಾರೆ ಡಾ. ಮರುಳಸಿದ್ದಪ್ಪ.

‘ಆನ್‌ಲೈನ್ ತರಗತಿಗಳು ಆರಂಭವಾದಾಗಿನಿಂದ ಮಕ್ಕಳು ಸ್ನೇಹಿತರ ಜೊತೆ ಆಟವಾಡುತ್ತ ಕಲಿಯುತ್ತಿದ್ದ ಪಾಠ ಇಲ್ಲವಾಗಿದೆ. ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿದಂತಾಗಿದೆ.ಮೊಬೈಲ್ ತೆಗೆದುಕೊಂಡು ಬಾಗಿಲು ಮುಚ್ಚಿಕೊಂಡರೆ ಮುಗಿಯಿತು. ಮಕ್ಕಳು ತಮ್ಮದೇ ಲೋಕದಲ್ಲಿ ಮುಳುಗುತ್ತಾರೆ. ಇಂಟರ್‌ನೆಟ್‌ ಗೇಮಿಂಗ್, ವಾಟ್ಸ್‌ಆ್ಯ‍ಪ್, ಫೇಸ್‌ಬುಕ್‌ಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಊಟ, ತಿಂಡಿಗೆ ಕರೆದರೆ, ಓದಲು ಹೇಳಿದರೆ ಒಲ್ಲೆ ಎನ್ನುತ್ತಾರೆ. ಮಕ್ಕಳಲ್ಲಿ ನಿದ್ರಾಹೀನತೆಯಿಂದಾಗಿ ಬೊಜ್ಜು ಬೆಳೆಯುತ್ತಿದೆ. ಮೂಳೆಗಳು ದುರ್ಬಲಗೊಳ್ಳುತ್ತಿವೆ. ಓದುವ ಅಭ್ಯಾಸವೂ ಕಡಿಮೆಯಾಗುತ್ತದೆ. ದೈಹಿಕ ಹಾಗೂ ಮಾನಸಿಕ ಕ್ಷಮತೆ ಕ್ಷೀಣಿಸುತ್ತಿದೆ. ವಿದ್ಯಾರ್ಥಿಗಳ ಏಕಾಂಗಿತನ, ಮನಸ್ಥಿತಿಯ ಲಕ್ಷಣಗಳು (ಮೂಡ್‌ ಸಿಂಪ್ಟಮ್ಸ್) ಸಮಯವನ್ನು ಬೇರೆ ಬೇರೆ ರೀತಿಯಲ್ಲಿ ಕಳೆಯುವಂತೆ ಮಾಡಿದೆ’ ಎಂಬುದು ಅವರ ಅಭಿಪ್ರಾಯ.

‘ತರಗತಿಯಲ್ಲಿ ಪಾಠ ಕೇಳಿದಾಗ ಎಲ್ಲ ಇಂದ್ರಿಯಗಳೂ ಚುರುಕಾಗುತ್ತವೆ. ಆದರೆ, ಆನ್‌ಲೈನ್‌ ಕ್ಲಾಸ್‌ನಲ್ಲಿ ಕಣ್ಣು, ಕಿವಿಗಳಷ್ಟೇ ಕಾರ್ಯ ನಿರ್ವಹಿಸಲಿದ್ದು, ಬೇರೆ ಇಂದ್ರಿಯಗಳು ಚುರುಕುಗೊಳ್ಳುವುದಿಲ್ಲ. ಪಾಠಗಳನ್ನು ಕೇಳುತ್ತಿದ್ದರೂ ಮನಸ್ಸು ಇನ್ನೆಲ್ಲೋ ಇರುತ್ತದೆ. ಆನ್‌ಲೈನ್ ತರಗತಿಗಳಿಂದ ಕಣ್ಣಿಗೆ ಹಾನಿ, ಬೆನ್ನು, ಕೈ ನೋವು ಬಂದ ನಿದರ್ಶನಗಳಿವೆ’ ಎನ್ನುತ್ತಾರೆ ಅವರು.

ಓದಿನ ಮೇಲೆ ಪರಿಣಾಮ: ‘ಹೆಚ್ಚಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಹೊಸತು. ತರಗತಿಗಳಲ್ಲಿ ಮಾಡುವ ಪಾಠವೇ ಎಷ್ಟೋ ಮಕ್ಕಳಿಗೆ ಅರ್ಥವಾಗಿರುವುದಿಲ್ಲ. ಇನ್ನು ಆನ್‌ಲೈನ್ ತರಗತಿಗಳು ಹೇಗೆ ಅರ್ಥವಾಗಬೇಕು? ಆನ್‌ಲೈನ್ ಕ್ಲಾಸ್‌ಗೆ ಅದರದ್ದೇ ಆದ ಮಿತಿಗಳಿವೆ. ಮುಂದಿನ ಪರೀಕ್ಷೆಯಲ್ಲಿ ಅದರ ಪರಿಣಾಮ ಗೊತ್ತಾಗಲಿದೆ’ ಎಂದು ಅವರು ವಾದಿಸುತ್ತಾರೆ.

ಸ್ವಲ್ಪ ಸಮಯ ಬೇಕು: ಕೊರೊನಾ ಕಾರಣದಿಂದಾಗಿ ಶಾಲೆಗಳು ಆರಂಭವಾಗಿಲ್ಲ. ಒಮ್ಮೆಲೆಯೇ ಶಾಲೆಗಳು ಆರಂಭವಾದರೆ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಲಿದ್ದು, ಮಕ್ಕಳಿಗೆ ಕೆಲವು ತಿಂಗಳು ಬೇಕಾಗುತ್ತದೆ ಎನ್ನುವುದು ಅವರ ಅನುಭವದ ಮಾತು.

ಅನುಸರಿಸಬೇಕಾದ ಕ್ರಮಗಳು: ‘ಮಕ್ಕಳ ಮನಸ್ಸು ಚಂಚಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹಂತ ಹಂತವಾಗಿ ಮೊದಲಿನ ಪರಿಸ್ಥಿತಿಗೆ ಒಗ್ಗಿಸಿಕೊಳ್ಳಬೇಕು. ಶಾಲೆ ಆರಂಭವಾದರೆ ಒಮ್ಮೆಲೆಯೇ ತರಗತಿಗೆ ಹೊಂದಿಕೊಳ್ಳುವುದು ಕಷ್ಟವಾದ್ದರಿಂದ ತರಗತಿಗಳ ನಡುವೆ ಸ್ವಲ್ಪ ಬಿಡುವು ಕೊಡಬೇಕು. ಮಕ್ಕಳ ಓದಿಗೆ ಪೂರಕ ವಾತಾವರಣ ನಿರ್ಮಿಸಬೇಕು’ ಎಂದು ಮರುಳಸಿದ್ದಪ್ಪ ಸಲಹೆ ನೀಡಿದರು.

‘ಮಕ್ಕಳ ಪರಿಸ್ಥಿತಿ ಏನಿದೆ ಎಂಬುದನ್ನು ಮೊದಲು ಮೌಲ್ಯಮಾಪನ ಮಾಡಬೇಕು. ಮಕ್ಕಳಿಗೆ ಏನು ಬೇಕು ಅಥವಾ ಏನು ಬೇಡ ಎಂಬುದನ್ನು ತಿಳಿದುಕೊಳ್ಳಬೇಕು. ಮುಖ್ಯವಾಗಿ ಮಕ್ಕಳು ಕಲಿಕೆಯ ಯಾವ ಹಂತದಲ್ಲಿ ಇದ್ದಾರೆ ಎಂಬುದನ್ನು ಗುರುತಿಸಿ ತರಗತಿಗಳನ್ನು ನಡೆಸಬೇಕು’ ಎನ್ನುವುದು ಅವರ ಸಲಹೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಹಲವು ಯೋಜನೆ

ಈ ಬಾರಿ ಜಿಲ್ಲೆಯನ್ನು ಟಾಪ್ 5ರೊಳಗೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾನುವಾರ ವಿಶೇಷ ತರಗತಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ 75 ದಿನ ಕಲಿಕಾ ಕ್ರಿಯಾ ಯೋಜನೆ ಹಾಗೂ ಪರೀಕ್ಷಾ ಭಯ ಹೋಗಲಾಡಿಸಲು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಈಗಾಗಲೇ ಶೇ 95ರಷ್ಟು ತರಗತಿಗಳು ಮುಗಿದಿವೆ. ಕೆಲವು ಶಾಲೆಗಳಲ್ಲಿ ಶೇ 100ರಷ್ಟು ಮುಗಿದಿದ್ದು, ಈಗ ಪುನರಾವರ್ತನೆ ಮಾಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರೇರಣಾ ತರಗತಿಗಳನ್ನು ನಡೆಸಲಾಗುತ್ತಿದೆ. ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಿರಂತರ ಸಂವಹನ ನಡೆಸಲಾಗುತ್ತಿದೆ.

ವಿದ್ಯಾರ್ಥಿಯ ಕಲಿಕೆಯಲ್ಲಿ ಶಿಕ್ಷಕರದಷ್ಟೇ ಪಾತ್ರ ತಾಯಿಯದ್ದೂ ಇರುತ್ತದೆ. ತಾಯಿಯೇ ಮೊದಲ ಗುರುವಾಗಿರುವುದರಿಂದ ಈಚೆಗೆ ಜಿಲ್ಲೆಯಲ್ಲಿ ತಾಯಂದಿರ ಸಭೆ ನಡೆಸಲಾಯಿತು. ಮಕ್ಕಳನ್ನು ಹೇಗೆ ಓದಿಸಬೇಕು? ಯಾವ ರೀತಿ ಕಡಿಮೆ ಕೆಲಸ ಕೊಡಬೇಕು? ಯಾವ ರೀತಿಯ ಬೆಂಬಲ ನೀಡಬೇಕು? ಮನೆಯಲ್ಲಿ ಟಿವಿ ನೋಡುತ್ತಾ ಕಾಲ ಕಳೆಯುತ್ತಾರಾ, ಓದುತ್ತಾರಾ ಎಂಬುದರ ಕುರಿತು ಚರ್ಚಿಸಲಾಯಿತು.

‘ಫೋನ್ ಇನ್ ಕಾರ್ಯಕ್ರಮಕ್ಕೂ ಉತ್ತಮ ಸ್ಪಂದನ ದೊರೆತಿದೆ. ಪ್ರತಿದಿನ ಮಧ್ಯಾಹ್ನ 3ರಿಂದ 5 ಗಂಟೆಯ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ನಗರ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ತಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಇಂಗ್ಲಿಷ್‌, ಗಣಿತ, ವಿಜ್ಞಾನ ಸೇರಿ ಎಲ್ಲ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ವಿಷಯ ತಜ್ಞರಿಂದ ಉತ್ತರ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ.

‘ಕಲಿಕೆಯಲ್ಲಿ ಹಿಂದುಳಿದ 4 ಸಾವಿರ ವಿದ್ಯಾರ್ಥಿಗಳು’

‘ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸುವ ಉದ್ದೇಶದಿಂದ ಇಲಾಖೆಯಿಂದ ಈಚೆಗೆ ಎಸ್ಎ–1 ಪರೀಕ್ಷೆ ನಡೆಸಿದ್ದು, ಆ ಪರೀಕ್ಷೆಯಲ್ಲಿ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಈಗ ಅವರೆಲ್ಲರನ್ನೂ ಗುರುತಿಸಿ ಉತ್ತಮ ಅಂಕ ಪಡೆಯಲು ಬೇಕಾದಂತಹ ಕೆಲ ಸೂತ್ರಗಳನ್ನು ರಚಿಸಲಾಗಿದೆ’ ಎಂದು ಸಿ.ಆರ್. ಪರಮೇಶ್ವರಪ್ಪ ತಿಳಿಸಿದರು.

‘ಒಬ್ಬ ಶಿಕ್ಷಕರಿಗೆ 6 ಮಕ್ಕಳ ದತ್ತು’

‘ಎಸ್ಸೆಸ್ಸೆಲ್ಸಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ವಿಶೇಷ ತರಗತಿಗಳನ್ನು ತಗೆದುಕೊಳ್ಳುತ್ತಿದ್ದೇವೆ. ಒಬ್ಬ ಶಿಕ್ಷಕರಿಗೆ 5ರಿಂದ 6 ಮಕ್ಕಳಂತೆ ದತ್ತು ತೆಗೆದುಕೊಳ್ಳುವಂತೆ ಮಾಡಿ, ಅವರು ಯಾವ ವಿಷಯಗಳಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಪತ್ತೆಹಚ್ಚಿ ವಿಶೇಷ ತರಗತಿಗಳನ್ನು ನಡೆಸುತ್ತಿದ್ದೇವೆ’ಎನ್ನುತ್ತಾರೆ ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಕಲ್ಪಿತಾ ರಾಣಿ.

ವರ್ಕ್ ಶೀಟ್: ‘ಶಾಲೆಗೆ ಹಾಜರಾಗದೇ ಇರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ದಿವಸ ಶಿಕ್ಷಕರು ವರ್ಕ್ ಶೀಟ್ ಅನ್ನು ವಾಟ್ಸ್ಆ್ಯಪ್ ಮೂಲಕ, ಇಲ್ಲವೇ ಮನೆಗೆ ಹೋಗಿ ತಲುಪಿಸಿ ಬರುತ್ತಿದ್ದಾರೆ. ಶಾಲೆಯಲ್ಲಿ ಹೆಚ್ಚಿನ ಬಡ ವಿದ್ಯಾರ್ಥಿಗಳು ಇರುವುದರಿಂದ ಅವರ ತಂದೆ ತಾಯಿಗಳು ಕೆಲಸಕ್ಕೆ ಹೋಗಿರುತ್ತಾರೆ. ಸಾಯಂಕಾಲದ ವೇಳೆಯೇ ಶಿಕ್ಷಕರು ಮನೆಗೆ ಹೋಗಿ ವರ್ಕ್ ಶೀಟ್ ತಲುಪಿಸಿ ಬರುತ್ತಾರೆ’ ಎಂದು ಹೇಳುತ್ತಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಫಲಿತಾಂಶ ತರಲು ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಆದರೆ ಈಗಾಗಲೇ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಮುಖ್ಯವಾಹಿನಿಗೆ ಬಂದಿರುವ ಮಕ್ಕಳು ಹಿಂದುಳಿದುಬಿಡುತ್ತಾರೋ ಎಂಬ ಆತಂಕ.‌

ಸಿ.ಆರ್. ಪರಮೇಶ್ವರಪ್ಪ, ಡಿಡಿಪಿಐ

ಡೆಂಗಿ, ಮಲೇರಿಯಾ, ಡಯಾರಿಯಾ ಸೀಸನ್‌ಗಳಂತೆ ಕೊರೊನಾಗೂ ಒಂದೂ ಸೀಸನ್ ಬರಬಹುದು. ಪ್ರತಿ ವರ್ಷ ಇದಕ್ಕೆ ತಕ್ಕಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೊಂದಾಣಿಕೆ ಮಾಡಿಕೊಳ್ಳಬೇಕು.

ಡಾ.ಮರುಳಸಿದ್ದಪ್ಪ ಪಿ.ಎಂ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT