ಸೋಮವಾರ, ಮಾರ್ಚ್ 8, 2021
19 °C
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಇ. ರಂಗಸ್ವಾಮಿ

ಜ್ಞಾನದ ಆರ್ಥಿಕತೆ ಬರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶಕ್ಕೆ ಜ್ಞಾನದ ಆರ್ಥಿಕತೆ ಬೇಕು. ಜ್ಞಾನದ ಆರ್ಥಿಕತೆಯಲ್ಲಿ ಪ್ರಬಲರಾದರೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬಹುದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಇ. ರಂಗಸ್ವಾಮಿ ಹೇಳಿದರು.

ಇಲ್ಲಿನ ಜೈನ್‌ ವಿದ್ಯಾಲಯದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟ‌ದ ಯುವ ವಿಜ್ಞಾನಿ ಸ್ಪರ್ಧೆ 2018–19ರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜ್ಞಾನದ ಆರ್ಥಿಕತೆಯು ರಾಜಕೀಯ, ಸಾಮಾಜಿಕ ಆರ್ಥಿಕತೆಗೆ ದಾರಿ ತೋರಿಸಿ ಅಭಿವೃದ್ಧಿಗೆ ಸಹಕರಿಸುತ್ತದೆ. ಈ ಮೂಲಕ ಸಮಾಜದ ಬದಲಾವಣೆಗೆ ನಾಂದಿ ಹಾಡುತ್ತದೆ ಎಂದರು.

ವಿಜ್ಞಾನಿಗಳಾಗಲು ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಆಸಕ್ತಿ ಇರಬೇಕು. ನೀವು ಮಾಡುವ ಹೊಸ ಅನ್ವೇಷಣೆಗಳು ಅಭಿವೃದ್ಧಿ ಪೂರಕವಾಗಿರಬೇಕು. ದೇಶದ ಸಮಸ್ಯೆಗೆ ಸ್ಪಂದಿಸುವಂತಿರಬೇಕು. ಸದ್ಯ ಎಲ್ಲೆಡೆ ಪ್ರವಾಹ ತಲೆದೋರಿದ್ದು, ಜನರು ತತ್ತರಿಸಿದ್ದಾರೆ. ವಿಜ್ಞಾನ ಮೂಲಕ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ ಎಂದು ಸಲಹೆ ನೀಡಿದರು.

ಅನ್ವೇಷಣೆ ಮೂಲಕ ಹೊರಬರುವ ತಂತ್ರಜ್ಞಾನ ಎಲ್ಲರಿಗೂ ಸಿಗುವಂತಾಗಬೇಕು. ಈ ಮೂಲಕ ಗ್ರಾಮೀಣ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮೂಲಕ ಗ್ರಾಮೀಣ ಭಾರತ, ಹೆಮ್ಮೆಯ ಭಾರತ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ. ವಸಂತಕುಮಾರಿ, ‘ಯುವ ವಿಜ್ಞಾನಿಗಳೇ ದೇಶದ ಶಕ್ತಿ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರತರಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳ ಪ್ರತಿಭೆ ಒಂದು ದಿನಕ್ಕೆ ಸೀಮಿತಗೊಳಿಸಿಕೊಳ್ಳದೆ, ದಿನನಿತ್ಯ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲರೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಡಿಡಿಪಿಯು ಜಿ.ಸಿ. ನಿರಂಜನ್‌ ಮಾತನಾಡಿದರು. ಜೈನ್‌ ವಿದ್ಯಾಲಯದ ಪ್ರಾಚಾರ್ಯರಾದ ಅನಿತ ರಜಪೂತ್‌, ಜಿಲ್ಲೆಯ ವಿವಿಧ ತಾಲ್ಲೂಕಿನ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಕಾರ್ಯಕ್ರಮ ಸಂಯೋಜಕ ಅಂಗಡಿ ಸಂಗಪ್ಪ ಸ್ವಾಗತಿಸಿದರು. ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ನಿರೂಪಿಸಿದರು.

ಯುವ ವಿಜ್ಞಾನಿ ಸ್ಪರ್ಧೆಯ ವಿಜೇತರು: ನಿಖಿತಾ ಎಸ್‌. ರಾಜ್‌–ಪುಷ್ಪಮಹಲಿಂಗಪ್ಪ ಪ್ರೌಢಶಾಲೆ (ಪ್ರಥಮ ಸ್ಥಾನ), ಕೀರ್ತಿ ಎಸ್‌. – ಜೈನ್‌ ವಿದ್ಯಾಲಯ (ದ್ವಿತೀಯ ಸ್ಥಾನ), ಖುಷಿ ಎಂ.ಯು– ರಾಷ್ಟ್ರೋತ್ಥಾನ ವಿದ್ಯಾಕೇಂದ್ರ (ತೃತೀಯ). ಭಾಗವಹಿಸಿದ್ದ 20 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.