ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾಟಗಳಿಗೆ ಸಮಯಪ್ರಜ್ಞೆ ಬರಲಿ

ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ
Last Updated 2 ಸೆಪ್ಟೆಂಬರ್ 2021, 3:48 IST
ಅಕ್ಷರ ಗಾತ್ರ

ದಾವಣಗೆರೆ: ಕರಾವಳಿಯ ಯಕ್ಷಗಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಅದಕ್ಕೆ ಸಮಯಪ್ರಜ್ಞೆ, ಶಿಸ್ತು, ಬದ್ಧತೆ ಮತ್ತು ಕಲೆಯ ಬಗೆಗಿನ ಭಕ್ತಿ ಕಾರಣ. ಈ ಶಿಸ್ತು, ಬದ್ಧತೆ, ಸಮಯಪ್ರಜ್ಞೆಗಳು ಬಯಲಾಟಗಳಲ್ಲಿ ಕಾಣಿಸುತ್ತಿಲ್ಲ. ಅದುವೇ ಹಿಂದುಳಿಯಲು ಕಾರಣ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಯಲಾಟ, ಮೂಡಲಪಾಯ ಸಂಗೀತ, ವಿಚಾರ ಸಂಕಿರಣ ಮತ್ತು ಪ್ರದರ್ಶನದಲ್ಲಿ ‘ಬಯಲಾಟ–ತಿರುಗಾಟ’ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಳ್ಳಿಗಳಲ್ಲಿ ಬಯಲಾಟಗಳನ್ನು ಮಾಡುವಾಗ ಪ್ರೇಕ್ಷಕರೇ ವೇದಿಕೆಯಲ್ಲಿರುತ್ತಾರೆ. ಯಾರು ಕಲಾವಿದರು, ಯಾರು ಹಿನ್ನೆಲೆ ಕಲಾವಿದರು, ಯಾರು ನೋಡುಗರು ಎಂಬುದು ಗೊತ್ತಾಗದಷ್ಟು ಅಶಿಸ್ತು ಇರುತ್ತದೆ. ನಮ್ಮ ಕಲಾವಿದರು ಇನ್ನಷ್ಟು ಸುಧಾರಣೆಗೊಳ್ಳಬೇಕಾದ ಅವಶ್ಯ ಇದೆ’ ಎಂದು ಸಲಹೆ ನೀಡಿದರು.

‘ನಾನು 40 ವರ್ಷಗಳ ಹಿಂದೆ ಇದೇ ದಾವಣಗೆರೆಯಲ್ಲಿ ಭಿಕ್ಷೆ ಬೇಡುತ್ತಿದ್ದೆ. ಬಳಿಕ ಇಲ್ಲಿಯೇ ವೇಷ ಧರಿಸಿ ಕುಣಿಯುವುದನ್ನು ಕಲಿತೆ. ನಾನು ಗಂಡಾಗಿ ಜೀವಿಸದೇ ಇದ್ದರೂ ನಾಟಕ, ಬಯಲಾಟಗಳಲ್ಲಿ ಗಂಡು ವೇಷ ಧರಿಸಿ ಮೆರೆಯಬೇಕು ಎಂಬ ಆಸೆ ಇತ್ತು. ಗಿರಿಜಾ ಕಲ್ಯಾಣದಲ್ಲಿ ತಾರಕಾಸುರ ಮಾಡಿ ಆ ಆಸೆ ನಿವಾರಿಸಿಕೊಂಡೆ. ಮುಂದೆ ಕೀಚಕ, ಭಸ್ಮಾಸುರ ಸಹಿತ ಹಲವು ಪಾತ್ರಗಳನ್ನು ಮಾಡಿದೆ’ ಎಂದು ನೆನಪಿಸಿಕೊಂಡರು.

ಮೂಲ ಬಯಲಾಟ ಹುಟ್ಟಿರೋದು ಬಳ್ಳಾರಿಯಲ್ಲಿ ಹಾಗಾಗಿ ಬಯಲಾಟ ಅಕಾಡೆಮಿಯು ಬಳ್ಳಾರಿಗೆ ಬರಬೇಕು. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಬಯಲಾಟ ವಿದ್ವಾಂಸ ಡಾ.ಕೆ. ರುದ್ರಪ್ಪ, ಸಂಗೀತ ಶಿಕ್ಷಕ ಯುವರಾಜ, ಸಂಸ್ಕಾರ ಭಾರತಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ, ವಯಲಿನ್‌ ವಾದಕ ಎ. ನಾರಾಯಣ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎನ್‌. ರಂಗನಾಥ ಉಪಸ್ಥಿತರಿದ್ದರು.

‘ಗಿರಿಜಾ ಕಲ್ಯಾಣ’ ದೊಡ್ಡಾಟ ಪ್ರದರ್ಶನಗೊಂಡಿತು.

ಇದಕ್ಕಿಂತ ಮೊದಲು ನಡೆದ ಗೋಷ್ಠಿಯಲ್ಲಿ ಜನಪದ ವಿದ್ವಾಂಸ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ‘ಜನಪದ ಸಾಹಿತ್ಯ ಮತ್ತು ಸಂಗೀತ ಶೈಕ್ಷಣಿಕ ಪಠ್ಯವಾಗಿ’ ಬಗ್ಗೆ, ಸಂಗೀತ ವಿದ್ಯಾಂಸ ಡಾ. ಶಾಂತರಾಮ ಹೆಗಡೆ ಅವರು ‘ಶಾಸ್ತ್ರೀಯ ಸಂಗೀತ’ ಬಗ್ಗೆ ಹಾಗೂ ‘ಮೂಡಲಪಾಯ ದೊಡ್ಡಾಟ ಪರಂಪರೆ ಮತ್ತು ಪ್ರಭಾವ’ ಬಗ್ಗೆ ಪ್ರಾಧ್ಯಾಪಕ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ವಿಷಯ ಮಂಡನೆ ಮಾಡಿದರು.

ಮೊಬೈಲ್‌ ಅವಾಂತರದ ಬಗ್ಗೆ ‘ಬೆರಳ್‌–ಗೆ ಉರುಳ್‌’ ಎಂಬ ಕಿರು ದೊಡ್ಡಾಟವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಬಯಲಾಟದ ಹಾಡು, ಕಲೆಗಳ ಅಧ್ಯಯನವಾಗಲಿ: ಈಶ್ವರಪ್ಪ

ಯಾವ ತರಬೇತಿಯೂ ಇಲ್ಲದೇ ಬಯಲಾಟದ ಕಲಾವಿದರು ಅತ್ಯುತ್ತಮವಾಗಿ ಹಾಡುತ್ತಾರೆ. ಸ್ವರ, ನಾದಗಳು ಮನ ಸೆಳೆಯುತ್ತವೆ. ಈ ಸ್ವರ, ನಾದಗಳ ಬಗ್ಗೆ ವಿವಿಧ ಮಟ್ಟುಗಳ ಬಗ್ಗೆ ಶಾಸ್ತ್ರೀಯ ಅಧ್ಯಯನ ಆಗಬೇಕಿದೆ ಎಂದು ಜನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ಮೂಡಲಪಾಯವು ಪೌರಾಣಿಕವಿರಲಿ, ಐತಿಹಾಸಿಕ ಇರಲಿ, ಅದನ್ನು ದಾಟಿ ವರ್ತಮಾನವನ್ನು ಒಳಗೊಂಡು ನೀಡುವಂತಾಗಬೇಕು ಎಂದರು.

‘ಈಗ ಪಟ್ಟಣ, ಹಳ್ಳಿ ಎಂಬ ವ್ಯತ್ಯಾಸಗಳಿಲ್ಲ. ಆದರೂ ಸಂಸ್ಕೃತಿಯನ್ನು ಹಳ್ಳಿಗಳಲ್ಲಿ, ನಾಗರಿಕತೆಯನ್ನು ನಗರಗಳಲ್ಲಿ ಕಾಣಬಹುದು. ನಮ್ಮ ಕೈಯಲ್ಲಿ ಏನಿದೆ, ಏನಿರಬೇಕು ಎಂಬುದು ನಾಗರಿಕತೆ ತೋರಿಸುತ್ತದೆ. ನಾವು ಏನಾಗಿರಬೇಕು ಎಂಬುದನ್ನು ಸಂಸ್ಕೃತಿ ತೋರಿಸುತ್ತದೆ’ ಎಂದು ವಿಶ್ಲೇಷಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿ ಸೇವಾ ಸಂಸ್ಥೆ ಕಾರ್ಯದರ್ಶಿ ಡಾ.ಕೆ. ರುದ್ರಪ್ಪ, ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷ ಮಹಲಿಂಗಪ್ಪ ಎ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT