ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ಜನ ರಾಜಕೀಯ ಶಕ್ತಿಯಾಗಲಿ: ಎಚ್.ಜಿ. ಉಮೇಶ್

ಕಾರ್ಮಿಕರ ದಿನಾಚರಣೆ
Last Updated 2 ಮೇ 2021, 6:39 IST
ಅಕ್ಷರ ಗಾತ್ರ

ದಾವಣಗೆರೆ: ದುಡಿಯುವ ವರ್ಗದ ಮೇಲಿನ ಶೋಷಣೆ, ದಬ್ಬಾಳಿಕೆಯನ್ನು ನಿಲ್ಲಿಸಬೇಕಾದರೆ ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ರಾಜಕೀಯವಾಗಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲೇಬೇಕು ಎಂದು ಎಐಟಿಯುಸಿ‌ ರಾಜ್ಯ ಉಪಾಧ್ಯಕ್ಷ ಎಚ್.ಜಿ. ಉಮೇಶ್ ತಿಳಿಸಿದರು.

136ನೇ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ದಾವಣಗೆರೆಯ ಹೊರ ವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಾರ್ಮಿಕರಿದ್ದರೆ ಉತ್ಪಾದನೆ, ಉತ್ಪಾದನೆಯಿದ್ದರೆ ಮಾತ್ರ ದೇಶ ಸುಭಿಕ್ಷವಾಗಿ ಇರಲು ಸಾಧ್ಯ. ಆದರೆ ಆಳುವ ಸರ್ಕಾರಗಳು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸಿಕೊಂಡು ಬರುತ್ತಿವೆ. ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನೇ ಕೊಡುತ್ತಿಲ್ಲ. ಉದ್ಯೋಗ ಭದ್ರತೆ ನೀಡದೇ ಕೇವಲ ತಾತ್ಕಾಲಿಕವಾಗಿ ನೌಕರಿಗೆ ನೇಮಕ ಮಾಡಿಕೊಂಡು ಕಡಿಮೆ ವೇತನ ಸೌಲಭ್ಯಗಳನ್ನು ನೀಡಿ ಶೋಷಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾಲೀಕ ವರ್ಗದ ಒತ್ತಡದಿಂದಾಗಿ ಕೇಂದ್ರ ಸರ್ಕಾರವು ಸತತವಾಗಿ ಕಾರ್ಮಿಕರ ಹಿತ ರಕ್ಷಿಸುವಂತಹ ಕಾನೂನುಗಳ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ದುಡಿಯುವ ವರ್ಗವನ್ನು ಕಷ್ಟಕ್ಕೆ ತಳ್ಳುತ್ತಿದೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕಾರ್ಮಿಕ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಚುನಾವಣಾ ಸಂದರ್ಭದಲ್ಲಿ ಕಾರ್ಮಿಕ ವಿರೋಧಿ ಧೋರಣೆಯನ್ನು ಹೊಂದಿರುವ ರಾಜಕೀಯ ಪಕ್ಷಗಳ ಪರವಾಗಿರದೇ ದುಡಿಯುವ ವರ್ಗದ ಪರವಾದ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದಲ್ಲಿ ಮಾತ್ರ ಕಾರ್ಮಿಕರಿಗೆ ಉಳಿಗಾಲ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಕಾರ್ಮಿಕ ಮುಖಂಡ ಕೆ‌. ರಾಘವೇಂದ್ರ ನಾಯರಿ, ಆಂಜನೇಯ ಕಾಟನ್ ಮಿಲ್ ಎಂಪ್ಲಾಯೀಸ್ ಯೂನಿಯನ್‌ ಪದಾಧಿಕಾರಿಗಳಾದ ಮಹೇಶ್, ಎಸ್. ಜಯಪ್ರ, ಹಾಲೇಶ್ ನಾಯ್ಕ್, ಶಿವಕುಮಾರ್, ಅಜೀಜ್ ಅಹಮದ್, ಚಿತ್ರಪ್ಪ, ಲಕ್ಷ್ಮಮ್ಮ, ನಾಗಮ್ಮ, ಕುಸುಮಮ್ಮ, ಪಾರ್ವತಮ್ಮ, ಸುಜಾತ, ಮಂಜಮ್ಮ, ರಮೇಶ, ಸಂಜುಕುಮಾರ್ ಇದ್ದರು.

ದುಡಿಯುವ ಜನರಿಗೆ ಲಾಕ್‌ಡೌನ್‌ ಭೀತಿ: ಶಶಿಧರ್‌
ದಾವಣಗೆರೆ:
ಕಳೆದ ವರ್ಷದ ಲಾಕ್‌ಡೌನ್‌ನ ಕರಾಳ ನೆನಪು ಮಾಸುವ ಮೊದಲೇ ಈಗ ಮತ್ತೊಮ್ಮೆ ಲಾಕ್‌ಡೌನ್‌ ಭೀತಿ ದುಡಿಯುವ ಜನರನ್ನು ಆವರಿಸಿಕೊಳ್ಳುತ್ತಿದೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್‌ ಕಳವಳ ವ್ಯಕ್ತಪಡಿಸಿದರು.

ಎಐಯುಟಿಯುಸಿ ವತಿಯಿಂದ ಶನಿವಾರ ಆನ್‌ಲೈನ್‌ ಮೂಲಕ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಲಾಕ್‌ಡೌನ್‌ ಮುಂದುವರಿದರೆ ಮಹಾ ನಗರಗಳಿಂದ ಹುಟ್ಟಿದೂರುಗಳಿಗೆ ವಲಸೆ ಕಾರ್ಮಿಕರು ಮರಳುವುದು, ಶಾಲಾ ಕಾಲೇಜು-ಹಾಸ್ಟೇಲ್‌ಗಳ‌ನ್ನು ಬಂದ್‌ ಮಾಡಿರುವುದು, ದುಡಿಯುವವರು ಕೆಲಸದಿಂದ ವಜಾವಾಗುತ್ತಿರುವುದು, ವೇತನ ಕಡಿತ ಮತ್ತಿತರ ಸಂಕಷ್ಟಗಳು ಮರುಕಳಿಸಲಿವೆ ಎಂದು ಎಚ್ಚರಿಸಿದರು.

ಇಂಥ ಸಂದರ್ಭದಲ್ಲಿ ಲಜ್ಜೆ ಇಲ್ಲದ ಸರ್ಕಾರಗಳು ಬಂಡವಾಳ ಶಾಹಿಗಳ ಹಿತ ಕಾಪಾಡಲು ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿವೆ. ಈ ಅನಿಷ್ಟ ಕಾಯ್ದೆಗಳ ವಿರುದ್ಧ ಹೋರಾಡಲು ಮೇ ದಿನ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.

ದುಡಿಮೆಯ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಿದ, ದುಡಿಮೆಯ ಪರಿಸ್ಥಿತಿಗಳನ್ನು ಅನುಕೂಲಕರವಾಗಿಸಿ ದುಡಿಯುವ ವರ್ಗಕ್ಕೆ ಶಾಸನದತ್ತ ಸೌಲಭ್ಯಗಳನ್ನು ಹಾಗೂ ಹಕ್ಕುಗಳನ್ನು ತಂದುಕೊಡಲು ಕಾರಣವಾದ ದಿನ ಇದು. ಈ ಮೇ ದಿನದ ಮಹತ್ವವನ್ನೇ ಆಳ್ವಿಕರು ಹೇಳಹೆಸರಿಲ್ಲದಂತೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಮಂಜುನಾಥ ಕೈದಾಳೆ, ಕಾರ್ಯದರ್ಶಿ ಮಂಜುನಾಥ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಪ್ರಕಾಶ ಎಲ್.ಎಚ್. ವಿವಿಧ ಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT