ಸೋಮವಾರ, ಸೆಪ್ಟೆಂಬರ್ 27, 2021
22 °C

ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಗಳಾಗಲಿ: ಕಲಾವಿದ ಆರ್‌.ಟಿ. ಅರುಣ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಾಟಕಗಳಿಗೆ ಜನರು ಬರುವುದಿಲ್ಲ ಎಂಬುದು ಸರಿಯಲ್ಲ. ರಂಗಭೂಮಿಯಲ್ಲಿ ಪ್ರಯೋಗಗಳು ವಿಭಿನ್ನವಾಗಿದ್ದರೆ ಜನರನ್ನು ಸೆಳೆಯಬಲ್ಲವು ಎಂದು ಕಲಾವಿದ ಆರ್‌.ಟಿ. ಅರುಣ್‌ಕುಮಾರ್‌ ಹೇಳಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಗುರುವಾರ ಯುವ ಸಮೂಹ, ಅನ್ವೇಷಕರು ಆರ್ಟ್ಸ್‌ ಫೌಂಡೇಷನ್‌, ನೀವು–ನಾವು, ರಂಗಾಯಣ ಮೈಸೂರು ಸಂಚಾರಿ ರಂಗ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದರು.

ಸಿನಿಮಾಗಳಿಗೆ ಇಂದು ಜನರನ್ನು ಕರೆತರುವ ಸ್ಥಿತಿ ಇದೆ. ಯುವಕರು ಧಾರಾವಾಹಿ ನೋಡುತ್ತಿಲ್ಲ. ಇಂತಹ ಕಾಲಘಟ್ಟದಲ್ಲಿ ರಂಗಭೂಮಿಯೆಡೆ ಜನರನ್ನು ಸೆಳೆಯಲು ಹೊಸ ಪ್ರಯೋಗಗಳು ಆಗಬೇಕು ಎಂದು ಅಭಿಪ್ರಾಯಪಟ್ಟರು.

ರಂಗಕರ್ಮಿ ಬಾ.ಮ. ಬಸವರಾಜಯ್ಯ, ‘ಹಿರಿಯ ರಂಗ ನಿರ್ದೇಶಕರು ಹಳೆಯ ನಾಟಕಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳದೆ ಹೊಸ ನಾಟಕಕಾರರ ಕೃತಿಯನ್ನು ಪ್ರಯೋಗಕ್ಕೆ ಒಡ್ಡಬೇಕು. ಪ್ರಯೋಗಗಳನ್ನು ಜನರು ಇಷ್ಟಪಡುತ್ತಾರೆ’ ಎಂದರು.

ಜನರಲ್ಲಿ ಇಂದು ಸಾಂಸ್ಕೃತಿಕ ಆಸಕ್ತಿ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಒಂದು ಕಡೆ ಟಿ.ವಿ. ಸಿನಿಮಾ ಮಾಧ್ಯಮವೂ ಜನರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ. ಇಂತಹ ಸಮಯದಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವಲ್ಲಿ ಎಡವುತ್ತಿದ್ದೇವೆಯೋ ಎಂದು ಅನಿಸುತ್ತದೆ. ಸಂಘ, ಸಂಸ್ಥೆಗಳು ಮರು ಚಾಲನೆಗೊಂಡು ಸಾಂಸ್ಕೃತಿಕ ಚಟುವಟಿಕೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲ. ಇದು ಸರಿಯಾಗಿ ಮತ್ತೆ ದಾವಣಗೆರೆಯಲ್ಲಿ ಹಿಂದಿನಂತೆ ಸಾಂಸ್ಕೃತಿಕ ವೈಭವ ಮರುಕಳಿಸಬೇಕು ಎಂದು ಹೇಳಿದರು.

ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ, ‘ನಗರದಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮಗಳ ಮೂಲಕ ಯುವಕರನ್ನು ಸೆಳೆಯಲು ವಿಫಲರಾಗಿದ್ದೇವೆ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡೋಣ’ ಎಂದು ಕಿವಿಮಾತು ಹೇಳಿದರು.

ನೀನಾಸಂನ ರಂಗ ನಿರ್ದೇಶಕ ವೆಂಕಟಮರಣ ಐತಾಳ್, ‘ನಗರದಲ್ಲಿ ಹಲವು ಶಿಷ್ಯರು ಇದ್ದಾರೆ. ಹಲವರು ನೀನಾಸಂನಲ್ಲಿ ಕಲಿತಿದ್ದಾರೆ. ಇದು ಹೊಸ ಪ್ರಯೋಗದ ನಾಟಕ. ಹೊಸ ಪ್ರಯತ್ನಗಳು ವಿಭಿನ್ನ ಶೈಲಿಯ ನಾಟಕಗಳಿಗೆ ಪ್ರಚೋದನೆ ನೀಡಲಿ’ ಎಂದು ಆಶಿಸಿದರು.

ಕಿರುತೆರೆ ನಟ ಅಭಿಲಾಷ್‌ ಎಸ್‌. ಮಾತನಾಡಿದರು. ಜನಪದ ತಜ್ಞ ಎಂ. ಜಿ. ಈಶ್ವರಪ್ಪ, ರಂಗ ನಿರ್ದೇಶಕ ಸಿದ್ದರಾಜು ಎಸ್‌. ಇದ್ದರು.  ರಂಗಾಯಣ ಕಲಾವಿದರಿಂದ  ಶ್ರವಣ್‌ಕುಮಾರ್‌ ನಿರ್ದೇಶನದ ‘ರೆಕ್ಸ್ ಅವರ್ಸ್‌ ಡೈನೋ ಏಕಾಂಗಿ ಪಯಣ’ ನಾಟಕ ಪ್ರದರ್ಶನಗೊಂಡಿತು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು