ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಮೀರಿ ಮಹಿಳೆಯರು ಒಂದಾಗಲಿ

Last Updated 10 ಜನವರಿ 2021, 4:49 IST
ಅಕ್ಷರ ಗಾತ್ರ

ದಾವಣಗೆರೆ: ಎಲ್ಲ ಮಹಿಳೆಯರೂ ಸಮಸ್ಯೆ ಎದುರಿಸುತ್ತಿರುವುದರಿಂದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎನ್ನದೇ ಎಲ್ಲ ಧರ್ಮಗಳ ಮಹಿಳೆರು ಒಂದಾಗಬೇಕು. ಭಾರತದ ಮೊದಲ ಶಿಕ್ಷಕಿಯರಾದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್‌ ಒಂದಾಗಿ ಮಹಿಳೆಯರಿಗೆ ಶಿಕ್ಷಣ ನೀಡಿರುವುದೇ ಆದರ್ಶವಾಗಬೇಕು ಎಂದು ಸಮುದಾಯ ಕಲಿಕಾ ಆಂದೋಲನ ಮುಖಂಡ ಬೆಳಗಾವಿಯ ದಿಲೀಪ್ ಕಾಮತ್ ತಿಳಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ದೇವರಾಜ ಅರಸು ಬಡಾವಣೆಯ ತಮ್ಮ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡ ಭಾರತದ ಪ್ರಥಮ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್‌ ಅವರ ಜನ್ಮ ದಿನಾಚರಣೆಯಲ್ಲಿ ಅವರು ಆನ್‌ಲೈನ್‌ ಮೂಲಕ ಮಾತನಾಡಿದರು.

ಶೂದ್ರರಿಗೆ ವಿದ್ಯಾಭ್ಯಾಸ ನಿರಾಕರಿಸಲಾಗಿತ್ತು. ಎಲ್ಲ ಮಹಿಳೆಯರನ್ನು ಶೂದ್ರರೆಂದೇ ಪರಿಗಣಿಸಲಾಗಿತ್ತು. ಅವರಿಗೆ ಶಿಕ್ಷಣ ನೀಡಲು ಮುಂದಾದ ಸಾವಿತ್ರಿಬಾಯಿ–ಜ್ಯೋತಿ ಬಾಫುಲೆ ದಂಪತಿಯನ್ನು ಅವರ ಮನೆಯಿಂದಲೇ ಹೊರ ಹಾಕಲಾಗಿತ್ತು. ಆಗ ಅವರಿಗೆ ಆಸರೆ ನೀಡಿದ್ದಲ್ಲದೇ ಶಾಲೆ ತೆರೆಯಲು ಮನೆಯನ್ನೇ ಬಿಟ್ಟುಕೊಟ್ಟವರು ಫಾತಿಮಾ ಶೇಖ್‌ ಮತ್ತು ಅವರ ಸಹೋದ ಉಸ್ಮಾನ್‌ ಶೇಖ್‌. ಬಳಿಕ ಅದೇ ಶಾಲೆಯಲ್ಲಿ ಫಾತಿಮಾ ಶೇಖ್‌ ಶಿಕ್ಷಕಿಯಾದರು. ಮಹಿಳೆಯರಿಗೆ ಶಿಕ್ಷಣ ನೀಡಿದ ಕಾರಣಕ್ಕಾಗಿ ಮುಸ್ಲಿಮ್‌ ಪುರುಷರಿಂದಲೂ ವಿರೋಧ ಎದುರಿಸಬೇಕಾಯಿತು ಎಂದು ತಿಳಿಸಿದರು.

ಮಹಿಳೆಯರಿಗೆ ಶಿಕ್ಷಣ ನೀಡಿದರೆ ಅವರು ಅನ್ಯಾಯವನ್ನು ಪ್ರಶ್ನಿಸಲು ಆರಂಭಿಸುತ್ತಾರೆ ಎಂಬ ಕಾರಣಕ್ಕಾಗಿಯೇ ಅವರನ್ನು ಶಿಕ್ಷಣದಿಂದ ದೂರ ಇರಿಸಲಾಯಿತು. ಅವರ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಪುರುಷರು ಅಧೀನದಲ್ಲಿಟ್ಟುಕೊಂಡರು. ಹಿಂದೂ ಸಮಾಜದಲ್ಲಿ ಮಾತ್ರವಲ್ಲ, ಮುಸ್ಲಿಂ ಸಮಾಜದಲ್ಲಿಯೂ ಇದೇ ಆಗಿದೆ. ಧಾರ್ಮಿಕವಾಗಿ ಮುಸ್ಲಿಮರೆಲ್ಲ ಒಂದು ಆಗಿರಬಹುದು. ಆದರೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲ ಮುಸ್ಲಿಮರು ಒಂದು ಅಲ್ಲ. ಅಲ್ಲಿಯೂ ಶ್ರೀಮಂತರು, ಬಡವರನ್ನು ಶೋಷಿಸುತ್ತಾರೆ. ಇದೆಲ್ಲವನ್ನು ಎದುರಿಸಲು ಶಿಕ್ಷಣ ಪಡೆಯಬೇಕು ಎಂದರು.

ಬೆಂಗಳೂರಿನ ರೂಪಾಂತರ ವೇದಿಕೆ ಮುಖಂಡ ವೆಂಕಟೇಶ ಪ್ರಸಾದ್‌ ಮಾತನಾಡಿ, ‘ಶಿಕ್ಷಕರ ದಿನಾಚರಣೆಯನ್ನು ಸಾವಿತ್ರಿಬಾಯಿ, ಫಾತಿಮಾ ಶೇಖ್‌ ನೆನಪಿನಲ್ಲಿ ಆಚರಿಸಬೇಕಿತ್ತು. ಆದರೆ ಭಾರತದಲ್ಲಿ ಮೇಲ್ವರ್ಗ, ಮೇಲ್ಜಾತಿಗೆ ಒಪ್ಪಿಗೆಯಾಗದವರ ಹೆಸರನ್ನು ಅಳಿಸಿ ಹಾಕುವ ಪ್ರಕ್ರಿಯೆ ಹಿಂದಿನಿಂದಲೂ ಬಂದಿತ್ತು. ಈಗಲೂ ಮುಂದುವರಿದಿದೆ. ಹಾಗಾಗಿ ನಿಜವಾದ ಶಿಕ್ಷಕರ ಹೆಸರಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಫಾತಿಮಾ ಶೇಖ್‌ ಅವರ ಬಗೆಗಿನ ಮಾಹಿತಿ ಪುಸ್ತಿಕೆಯನ್ನು ಬಿಡುಗಡೆ ಮಾಡಿದ ಹಿರಿಯ ವಕೀಲ ಅನೀಸ್‌ ಪಾಷಾ ಮಾತನಾಡಿ, ‘ಮುಸ್ಲಿಂ ಮಹಿಳೆಯರು ಧಾರ್ಮಿಕ ಶಿಕ್ಷಣ ಪಡೆದರೆ ಸಾಲದು. ಆಧುನಿಕ ಶಿಕ್ಷಣವನ್ನು ಕೂಡ ಪಡೆಯಬೇಕು. ಸ್ವಾತಂತ್ರ್ಯ, ಸಮಾನತೆ ಪಡೆಯಲು ಶಿಕ್ಷಣ ಅಗತ್ಯ. ಇಸ್ಲಾಂನ ಮೊದಲ ತತ್ವವೇ ಓದುವುದು ಆಗಿದೆ. ಹಾಗಾಗಿ ಮಹಿಳೆಯರಿಗೆ ಯಾವ ಶಿಕ್ಷಣವನ್ನೂ ನಿರಾಕರಿಸಬಾರದು. ಮುಸ್ಲಿಂ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನಮಾನ ಪಡೆಯಲು ಹೆತ್ತವರು ಪ್ರೋತ್ಸಾಹ ನೀಡಬೇಕು’ ಎಂದು ತಿಳಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾಖಾನಂ, ಕರಿಬಸಪ್ಪ ಎಂ., ನಾಹೇರಾಬಾನು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT