ಶುಕ್ರವಾರ, ಮಾರ್ಚ್ 5, 2021
21 °C

ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿ, ₹5000 ಕೋಟಿ ಪರಿಹಾರಕ್ಕೆ ಉಗ್ರಪ್ಪ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು. ರಾಜ್ಯಕ್ಕೆ ₹ 5000 ಕೋಟಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಬೇಕು. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಅತ್ಯಂತ ಭೀಕರ ಪ್ರವಾಹ ಇದಾಗಿದ್ದು, ಅಪಾರ ಸಾವು ನೋವು ಸಂಭವಿಸಿದ್ದು, ಜನ, ಜಾನುವಾರು, ಬೆಳೆಹಾನಿಯಾಗಿದೆ. ರಸ್ತೆ, ರೈಲು, ಸೇತುವೆ, ಮನೆಗಳು ನಾಶವಾಗಿದ್ದು, ₹1ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಇಂದು ಏಕವ್ಯಕ್ತಿ ಆಡಳಿತವಿದ್ದು, ಜಿಲ್ಲಾ ಉಸ್ತುವಾರಿ ಸಚಿವರುಗಳು ಇಲ್ಲದೇ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಜೀವಂತವಿದ್ದರೂ ರಾಜ್ಯದ ಕಡೆ ಗಮನಹರಿಸುತ್ತಿಲ್ಲ. ಕೇಂದ್ರದಲ್ಲಿ ರಾಜ್ಯದ ನಾಲ್ವರು ಸಚಿವರಾಗಿದ್ದಾರೆ. ಅವರು ಈಗ ನಿದ್ರಾವಸ್ಥೆಯಿಂದ ಎಚ್ಚೆತ್ತು ಕಾಣಿಸಿಕೊಳ್ಳುತ್ತಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ ಸಂದರ್ಭ ವಿಶ್ವಾಸಮತ ಯಾಚನೆಗೆ ತೋರಿದ ತರಾತುರಿ ಈಗ ಇಲ್ಲವಾಗಿದೆ’ ಎಂದು ಆರೋಪಿಸಿದರು.

‘ಪ್ರವಾಹ ಒಂದು ಕಡೆಯಾದರೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ, ದಾವಣಗೆರೆ ಹಾಗೂ ಬಳ್ಳಾರಿಗಳಲ್ಲಿ ಬರ ಪರಿಸ್ಥಿತಿ ಇದ್ದು, ಶೇ 20ರಷ್ಟು ಬಿತ್ತನೆಯಾಗಿಲ್ಲ. ಕುಡಿಯುವ ನೀರು, ಮೇವಿನ ಸಮಸ್ಯೆಗಳು ಇವೆ. ಇವುಗಳ ಪರಿಹಾರಕ್ಕೆ ಸರ್ಕಾರ ಯುದ್ಧೋಪಾದಿಯಲ್ಲಿ  ಕೆಲಸ ಮಾಡಬೇಕು. ಅದರ ಬದಲು ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಲ್ಲಿ ಸಮೀಕ್ಷೆ ನಡೆಸಿ, ನಾನೇ ಸಿಎಂ ಎಂದು ಜನರ ಮುಂದೆ ಹೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು

‘ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಬದಲು ಅಭಿವೃದ್ಧಿ, ಸಮಸ್ಯೆಗಳಿಗಿಂತ ಬಿಜೆಪಿಗೆ ಪ್ರತಿಷ್ಠೆಯೇ ಮುಖ್ಯವಾಗಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ರಾಜ್ಯದ ಪರಿಸ್ಥಿತಿ ಇದೆ. ಕೂಡಲೇ ಸಚಿವರನ್ನು ನೇಮಿಸಬೇಕು, ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಸೇರಿ ತಳಮಟ್ಟದ ಕಾರ್ಯ ನಿರ್ವವಹಿಸಿದಾಗ ಸಮಸ್ಯೆ ಬಗೆಹರಿಸಲು ಸಾಧ್ಯ’ ಎಂದು ಹೇಳಿದರು.

ರಾಜ್ಯದ ಇತಿಹಾಸದಲ್ಲಿ ಗೊಬ್ಬರ, ಬಿತ್ತನೆ ಬೀಜ ಕೇಳಿದವರ ಮೇಲೆ ಗುಂಡು ಹಾರಿಸಿದ ಮುಖ್ಯಮಂತ್ರಿ ಎಂದರೆ ಬಿ.ಎಸ್‌. ಯಡಿಯೂರಪ್ಪ, ಈಗ ಪ್ರವಾಹಪೀಡಿತ ಜನ ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋದರೆ ಅವರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಮನುಷ್ಯತ್ವ ಇರುವವರು ಮಾಡುವ ಕೆಲಸವಲ್ಲ ಇದು. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡ ಅವರು, ಕೂಡಲೇ ಜನರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಸಂತ್ರಸ್ತರಿಗೆ ಮನೆ ನಿರ್ಮಿಸಲು ₹5ಸಾವಿರ ಕೋಟಿ ಹಣ ಬೇಕು ಎಂದು ರಾಜ್ಯದ ಜನರ ಬಳಿ ಸಹಾಯ ಯಾಚಿಸುವ ಬದಲು ಕೇಂದ್ರಕ್ಕೆ ಎಷ್ಟು ಹಾನಿಯಾಗಿದೆ ಎಂಬುದನ್ನು ಕುರಿತು ಕೇಂದ್ರಕ್ಕೆ ಪತ್ರ ಬರೆಯಿರಿ. ಬಿಜೆಪಿಗೆ ಬದ್ಧತೆ ಇದ್ದರೆ ಯುದ್ದೋಪಾದಿಯಲ್ಲಿ ಜನ, ಜಾನುವಾರು ರಕ್ಷಣೆಗೆ ಮುಂದಾಗಿ. ಜಾನುವಾರಿಗೆ ಮೇವು, ಜನರಿಗೆ ಆಹಾರ, ಬಟ್ಟೆ, ಹೊದಿಕೆ ಹಾಗೂ ಔಷಧಗಳನ್ನು ಪೂರೈಸಬೇಕು. ಹೆಚ್ಚಿನ ಸೈನಿಕರನ್ನು ನಿಯೋಜಿಸಬೇಕು’ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌ನಿಂದ ಜನಪರ ಕೆಲಸಗಳಿಗೆ ಬೆಂಬಲ ನೀಡುತ್ತೇವೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ಇನ್ನೆರಡು ದಿನಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಸಮಸ್ಯೆ ಆಲಿಸುತ್ತೇವೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು