ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನಗೋಡು ಗ್ರಂಥಾಲಯ | ವಾಚನಾಲಯದ ಸುತ್ತ ಕಸದ ರಾಶಿ, ಗಿಡಗಳು; ಓದುಗರ ಪರದಾಟ

ಮಂಜುನಾಥ್‌ ಎಸ್‌.ಎಂ.
Published 1 ಜುಲೈ 2024, 6:49 IST
Last Updated 1 ಜುಲೈ 2024, 6:49 IST
ಅಕ್ಷರ ಗಾತ್ರ

ಮಾಯಕೊಂಡ: ಸುತ್ತಲೂ ಗಿಡಗಳು, ತಿಪ್ಪೆ ರಾಶಿ. ಆಗಾಗ ಬರುವ ಹಾವು, ಹುಳ ಹುಪ್ಪಟೆಗಳು. ಕುಂತರೂ, ನಿಂತರೂ ಕಚ್ಚುವ ಸೊಳ್ಳೆಗಳು..

ಇದು ಸಮೀಪದ ಆನಗೋಡು ಗ್ರಾಮದ ಗ್ರಂಥಾಲಯದ ಸ್ಥಿತಿ. ಗ್ರಾಮೀಣ ಭಾಗದ ಗ್ರಂಥಾಲಯಗಳು ಡಿಜಿಟಲ್ ಸ್ಪರ್ಶ ಪಡೆದಿದ್ದರೂ ಆನಗೋಡು ಮಾತ್ರ ಇದಕ್ಕೆ ಅಪವಾದ.

‘ಇಂತಹ ಪರಿಸರದಲ್ಲಿ ಓದುವುದಾದರೂ ಹೇಗೆ ಸರ್‌? ಊರಿನ‌ ಮಧ್ಯೆ ಇದ್ದ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ಗ್ರಾಮದ ಹೊರ ಭಾಗದಲ್ಲಿನ ಒಂದು ಚಿಕ್ಕ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಹಲವು ವರ್ಷ ಕಳೆದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ’ ಎಂದು ದೂರುತ್ತಾರೆ ಅಧ್ಯಯನಕ್ಕೆಂದು ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು.

ಆನಗೋಡು ಗ್ರಾಮದ ಮಧ್ಯಭಾಗದಲ್ಲಿ ಇದ್ದ ಗ್ರಂಥಾಲಯವನ್ನು ಕಾರಣಾಂತರಗಳಿಂದ ಮಾಧ್ಯಮಿಕ ಶಾಲೆ ಬಳಿ ಸ್ಥಳಾಂತರಿಸಲಾಗಿತ್ತು. ಅಲ್ಲಿಯೂ ಬಹಳ ದಿನ‌ ಉಳಿಯಲಿಲ್ಲ. ಈಗ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಇರುವ ಪುಟ್ಟ ಕೊಠಡಿಯಲ್ಲಿ ಗ್ರಂಥಾಲಯ ನಡೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸಂಬಂಧಿಸಿದ ಸಾಕಷ್ಟು ಹೊಸ ಪುಸ್ತಕಗಳು ಬಂದಿವೆ. ಆದರೆ ಡಿಜಿಟಲೀಕರಣ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಡಿ ವಿಕಸನದಲ್ಲಿ ಶಿಕ್ಷಣಪೀಡಿಯಾ ಆ್ಯಪ್‌ ಮೂಲಕ ಪ್ರಾಥಮಿಕ, ಪ್ರೌಢ, ಪಿಯು ಶಿಕ್ಷಣಕ್ಕೆ ಪಠ್ಯ ವಿಷಯ ಲಭಿಸುವಂತೆ ಡಿಜಿಟಲೀಕರಣ ಮಾಡಲು ‌‌‌ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಈಚೆಗೆ ಆದೇಶಿಸಿದೆ. ಆದರೆ ಆನಗೋಡಿನ ಗ್ರಂಥಾಲಯದಲ್ಲಿ ಅಂತಹ ಯಾವುದೇ ಸೌಲಭ್ಯಗಳು ಇಲ್ಲ.

ತಿಪ್ಪೆಗಳ ರಾಶಿ ಮಧ್ಯೆ ಇರುವ ಹಾಗೂ ಗ್ರಾಮದಿಂದ ದೂರವೇ ಇರುವುದರಿಂದ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನು ಸ್ಥಳಾಂತರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ, ಸದಸ್ಯರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಮುಂದಾದರೂ ಗ್ರಂಥಾಲಯವನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿ ಓದುಗರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು’ ಎಂದು ವಿದ್ಯಾರ್ಥಿ ಮನೋಜ್ ಒತ್ತಾಯಿಸುತ್ತಾರೆ.

‘ಗ್ರಂಥಾಲಯ‌ ಗ್ರಾಮದಿಂದ ದೂರ ಇದೆ. ಅದರ ಸುತ್ತ ಕಸದ ರಾಶಿ ಇದೆ. ಅಲ್ಲಿ ಕುಳಿತು ಓದಲು ಆಗುತ್ತಿಲ್ಲ. ಜಾಗವೂ ಇಲ್ಲ. ಹೆಚ್ಚಿನ ಸೌಲಭ್ಯವೂ ಇಲ್ಲ’ ಎಂದು ವಿದ್ಯಾರ್ಥಿ ಅಕ್ಷಯ್ ದೂರಿದರು.

‘ಬಿಸಿಎಂ ಹಾಸ್ಟೆಲ್ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಅದೇ ಕಟ್ಟಡದ ಬಳಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಸದ್ಯ ಗ್ರಂಥಾಲಯದ ಬಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜಪ್ಪ ತಿಳಿಸಿದರು.

‘ಗ್ರಾಮದಲ್ಲಿ ಗ್ರಂಥಾಲಯ ಮಾಡಲು ಜಾಗ ಇಲ್ಲ. ಸಮಸ್ಯೆ ಇದೆ ಎಂದು ನಮಗೆ ಯಾರೂ ದೂರು ನೀಡಿಲ್ಲ’ ಎಂದು ಆನಗೋಡು ಪಿಡಿಒ ಸುಮಲತಾ ಸಮಜಾಯಿಷಿ ನೀಡಿದರು.

ಆನಗೋಡು ಗ್ರಾಮದ ಗ್ರಂಥಾಲಯದ ಸುತ್ತ ಗಿಡಗಳು ಬೆಳೆದಿರುವುದು
ಆನಗೋಡು ಗ್ರಾಮದ ಗ್ರಂಥಾಲಯದ ಸುತ್ತ ಗಿಡಗಳು ಬೆಳೆದಿರುವುದು
ಗ್ರಂಥಾಲಯವನ್ನು ಗ್ರಾಮದ ಮಧ್ಯಭಾಗಕ್ಕೆ ಸ್ಥಳಾಂತರಿಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಕ್ರಮ ಕೈಗೊಂಡಿಲ್ಲ
ಅಕ್ಷಯ್ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT