ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಈಡೇರಲು ಸಾಕ್ಷರತೆ ಅವಶ್ಯ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್.ಬಡಿಗೇರ್
Last Updated 24 ಜುಲೈ 2019, 13:53 IST
ಅಕ್ಷರ ಗಾತ್ರ

ದಾವಣಗೆರೆ: ಸಂವಿಧಾನದ ಆಶಯಗಳು ಪೂರ್ಣಗೊಳ್ಳಬೇಕಾದರೆ ಕಾನೂನು ಸಾಕ್ಷರತೆ ಅವಶ್ಯಕ. ಕಾನೂನು ತಿಳಿವಳಿಕೆಯಿಂದ ತಪ್ಪುಗಳಾಗದಂತೆ ತಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್.ಬಡಿಗೇರ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮೈತ್ರಿ ಉಜ್ವಲ ಮಹಿಳೆಯ ಮತ್ತು ಮಕ್ಕಳ ಪುನರ್ವಸತಿ ಕೇಂದ್ರದ ವತಿಯಿಂದ ಪಿ.ಬಿ. ರಸ್ತೆಯ ಜಿ.ಎಂ.ಐ.ಟಿ ಎದುರುಗಡೆ ಇರುವ ರಶ್ಮಿ ಬಾಲಕಿಯರ ಉಚಿತ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಕಾನೂನು ಕುರಿತು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಸ್ತುಬದ್ಧ ಹಾಗೂ ಸುಗಮ ಜೀವನಕ್ಕೆ ಕಾನೂನುಗಳು ಸಹಕಾರಿ. 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಇತರ ಸೌಲಭ್ಯಗಳು ಇದ್ದು, ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿಯುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಶಾಲಾ-ಕಾಲೇಜುಗಳ ಮಕ್ಕಳು ಮೂಲಭೂತ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಬೇಕೆಂದು ತಿಳಿಸಿದರು.

ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳಿಗೆ ಶಿಕ್ಷೆಯಿದ್ದು, ಇಂದಿಗೂ ಮಕ್ಕಳು ಇಟ್ಟಿಗೆ ಭಟ್ಟಿ, ಕಾರ್ಖಾನೆಗಳು, ಹೋಟೆಲ್‌ಗಳಲ್ಲಿ ದುಡಿಯುವುದು ಕಂಡುಬರುತ್ತಿರುವುದು ವಿಷಾದದ ಸಂಗತಿ. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ದೊರೆಯದೆ ಬಡವರು ಬಡವರಾಗಿಯೇ ಉಳಿಯುತ್ತಿದ್ದರೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪದೇ ಇದ್ದಲ್ಲಿ ಅವರೂ ಸಹ ಕಾನೂನು ಸೇವಾ ಪ್ರಾಧಿಕಾರಕ್ಕೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದೆಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ‘ಇಂದು ಶಿಕ್ಷಣ ಒಂದು ಮಾರಾಟದ ಸರಕಾಗಿ ಪರಿಣಮಿಸಿದ್ದು, ಇಂತಹ ವ್ಯವಸ್ಥೆಯ ನಡುವೆಯೂ ರಶ್ಮಿ ಬಾಲಕಿಯರ ಉಚಿತ ವಸತಿಯುತ ಶಾಲೆಯು ಹೆಣ್ಣು ಮಕ್ಕಳಿಗೆ ಉಚಿತವಾಗಿ ವಸತಿಯ ಜೊತೆಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‍ಕುಮಾರ್, ‘ಮಕ್ಕಳೇ ದೇಶದ ಮುಂದಿನ ಭವಿಷ್ಯವಾಗಿದ್ದು, ಅವರಿಗೆ ಸರಿಯಾದ ಶಿಕ್ಷಣ, ಆರೋಗ್ಯ ನೀಡುವುದರ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಸಜ್ಜುಗೊಳಿಸಬೇಕಾಗಿದೆ’ ಎಂದು ತಿಳಿಸಿದರು.

‘ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ಮತ್ತು ಲೈಂಗಿಕ ದೌರ್ಜನ್ಯ’ ಕುರಿತು ವಕೀಲ ಕೆ.ಎನ್. ಏಕಾಂತಪ್ಪ ಉಪನ್ಯಾಸ ನೀಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸುಮತಿ ಜಯಪ್ಪ ಮಾತನಾಡಿದರು. ಮೈತ್ರಿ ಉಜ್ವಲ ಕೇಂದ್ರದ ಯೋಜನಾ ನಿರ್ದೇಶಕಿ ಜಿ.ಎಂ.ರೂಪಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಹಮೀರಾಭಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT