ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿತ್ತುವ ಅಸ್ತ್ರಗಳಾಗುತ್ತಿರುವ ಸಾಹಿತ್ಯ: ಪಿ. ಸಾಯಿನಾಥ್‌ ಕಳವಳ

ದಾವಣಗೆರೆಯಲ್ಲಿ ನಡೆದ ಮೇ ಸಾಹಿತ್ಯ ಮೇಳ
Last Updated 27 ಮೇ 2022, 18:53 IST
ಅಕ್ಷರ ಗಾತ್ರ

ದಾವಣಗೆರೆ: ‘ಭಾಷೆ ಹಾಗೂ ಸಾಹಿತ್ಯವನ್ನು ದ್ವೇಷ ಬಿತ್ತುವ ಅಸ್ತ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ’ ಎಂದು ಪತ್ರಕರ್ತ ಪಿ. ಸಾಯಿನಾಥ್‌ ಕಳವಳ ವ್ಯಕ್ತಪಡಿಸಿದರು.

ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ದಾವಣಗೆರೆಯ ಮೇ ಸಾಹಿತ್ಯ ಮೇಳದ ಬಳಗದ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ಕರ್ನಾಟಕದ ಪ್ರಗತಿಪರ ಬರಹಗಾರರು, ಕವಿಗಳು ಮುಂಚೂಣಿಯಲ್ಲಿದ್ದಾರೆ. ಈ ಹೊತ್ತಿಗೂ ಪುರಾಣವನ್ನೇ ಚರಿತ್ರೆ ಎಂದು ಬಿಂಬಿಸುವ ಕೆಲಸ ಮಾಡುತ್ತಿರುವವರ ವಿರುದ್ಧ, ಚರಿತ್ರೆಯ ಪಠ್ಯಪುಸ್ತಕಗಳನ್ನು ಪುನರ್‌ರಚಿಸುವ ಬೂಟಾಟಿಕೆಯ ವಿರುದ್ಧ ಹೋರಾಡುತ್ತಿದ್ದಾರೆ. ಗೌರಿ ಲಂಕೇಶ್‌, ಪ್ರೊ.ಎಂ.ಎಂ. ಕಲಬುರ್ಗಿ ಅವರಂತೆ ಕನ್ನಡದ ಬರಹಗಾರರು, ಪತ್ರಕರ್ತರು, ಶಿಕ್ಷಣ ತಜ್ಞರು ತಮ್ಮ ಬದ್ಧತೆಗಾಗಿ ಪ್ರಾಣವನ್ನೇ ಬಲಿ ಕೊಡುವ ಸಂದರ್ಭಗಳು ಎದುರಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಭಾರತದಲ್ಲಿ ವಾಕ್‌ ಸ್ವಾತಂತ್ರ್ಯ ಇದೆ. ಆದರೆ, ಮಾತಾಡಿದ ನಂತರ ಸ್ವಾತಂತ್ರ್ಯ ಇರುವುದಿಲ್ಲ. ಜಾಗತಿಕ ಪತ್ರಿಕಾ ಸಂಸ್ಥೆಗಳ ಅಧ್ಯಯನದ ಪ್ರಕಾರ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತವು ಈ ಮೊದಲು 105ನೇ ಸ್ಥಾನದಲ್ಲಿತ್ತು. ಈಗ ಅದು 150ನೇ ಸ್ಥಾನಕ್ಕೆ ತಲುಪಿದೆ’ ಎಂದು ಬೇಸರಿಸಿದರು.

ಧಾರವಾಡದ ನುಗ್ಗಿಕೇರಿಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಪಾರಿ ನಬೀಸಾಬ್‌ ಕಿಲ್ಲೇದಾರ್‌ ಸೇರಿ ಹಲವು ಶ್ರಮಿಕರಿಂದ ಗಣ್ಯರಿಗೆ ಧ್ವಜಗಳನ್ನು ಹಸ್ತಾಂತರಿಸಿ ಮೇಳಕ್ಕೆ ಚಾಲನೆ ನೀಡುವ ಮೂಲಕ ದುಡಿಯುವ ವರ್ಗದವರ ಜೊತೆಗಿದ್ದೇವೆ ಎಂಬ ಸಂದೇಶವನ್ನು ರವಾನಿಸಲಾಯಿತು.

ರಾಜ್ಯದಲ್ಲಿ ಶಿಕ್ಷಣದ ಕೇಸರೀಕರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿರುವ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಮೇಳದಲ್ಲಿ ಚಿಂತಕರು ಧ್ವನಿ ಎತ್ತಿದರು. ವಾರ್ತಾ ಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ದೆಹಲಿಯ ಚಿಂತಕಿ ಕವಿತಾ ಕೃಷ್ಣನ್‌ ಅವರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

‘ಹಿಂದುತ್ವದ ಅಜೆಂಡಾ ಸೋಲಿಸಬೇಕು’
‘ಹಿಂದುತ್ವದ ಸಂಘಟನೆಗಳು ಗೌರಿಬಿದನೂರಿನ ವಿದುರಾಶ್ವತ್ಥ ಹುತಾತ್ಮರ ಸ್ಮಾರಕಕ್ಕೆ ಬೆದರಿಕೆ ಒಡ್ಡಿರುವುದನ್ನು ಖಂಡಿಸುತ್ತೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಎಲ್ಲರ ತ್ಯಾಗ–ಬಲಿದಾನಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ಮೂಲ ಹಿಂದುತ್ವದ ಧೂರ್ತ ಅಜೆಂಡಾವನ್ನು ಸೋಲಿಸಬೇಕು’ ಎಂಬ ನಿರ್ಣಯವನ್ನು ಮೇ ಸಾಹಿತ್ಯ ಮೇಳದಲ್ಲಿ ಕೈಗೊಳ್ಳಲಾಯಿತು.

‘ರಾಜ್ಯದ ಬಿಜೆಪಿ ಸರ್ಕಾರವು ಕೃಷಿ ಮಾರುಕಟ್ಟೆ ತಿದ್ದುಪಡಿ ಮತ್ತು ಭೂಸುಧಾರಣಾ ಕಾಯ್ದೆಯನ್ನು ಹಿಂಪಡೆಯಬೇಕು. ಗ್ರಾಮ ಭಾರತದ ರೈತರು, ದಲಿತರು, ಕೂಲಿಕಾರರು ಮತ್ತು ಮಹಿಳೆಯರ ಬದುಕನ್ನು ಸುಸ್ಥಿರ ಗೊಳಿಸುವ ಸಮಗ್ರ ನೀತಿಯನ್ನು ಜಾರಿಗೊಳಿಸಬೇಕು’ ಎಂದು ಬರಹಗಾರ ಕೆ.ಪಿ. ಸುರೇಶ್‌ ನಿರ್ಣಯಗಳನ್ನು ಮಂಡಿಸಿದರು.

‘ಸಂಘ ಪರಿವಾರದಿಂದ ಶಿಕ್ಷಣದ ಕೇಸರೀಕರಣ’
ದಿಕ್ಸೂಚಿ ಭಾಷಣ ಮಾಡಿದ ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು, ‘ಇಡೀ ದೇಶವನ್ನು ಕೇಸರೀಕರಣ ಮಾಡುವುದು ಸಂಘ ಪರಿವಾರದ ಅಜೆಂಡಾ ಆಗಿದೆ. ಒಂದೇ ಸಿದ್ಧಾಂತವನ್ನು ಹೇರಲಾಗುತ್ತಿದೆ. ಇದರ ಭಾಗವಾಗಿಯೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದರು. ಶಿಕ್ಷಣವನ್ನು ನಿಯಂತ್ರಿಸಲು ಬಯಸಿರುವ ಅವರು ಭಗತ್‌ ಸಿಂಗ್‌, ಪೆರಿಯಾರ್‌ ಅವರನ್ನೆಲ್ಲ ಕಲಿಕೆಯಿಂದ ದೂರ ಇಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರೆಯಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಆದರೆ, ಕರ್ನಾಟಕದಲ್ಲಿ ಎಂಥ ಸನ್ನಿವೇಶವನ್ನು ನಿರ್ಮಿಸಲಾಯಿತು? ಹಿಜಾಬ್‌ ಸಮಸ್ಯೆಯೇ ಆಗಿರಲಿಲ್ಲ. ನಾವು ಶಾಲೆಗೆ ಹೋಗುವಾಗ ಎಷ್ಟೋ ಮಕ್ಕಳಿಗೆ ಬಟ್ಟೆಯೇ ಇರುತ್ತಿರಲಿಲ್ಲ. ಆಗ ಸಮವಸ್ತ್ರ ವಿಷಯವೇ ಆಗಿರಲಿಲ್ಲ. ಶಿಕ್ಷಣ ಮುಖ್ಯವಾಗಿತ್ತು’ ಎಂದು ಹೇಳಿದರು.

‘ರಾಜ್ಯದಲ್ಲಿ ಈ ಬಾರಿ ಸುಮಾರು 20 ಸಾವಿರ ಮಕ್ಕಳಿಗೆ 10ನೇ ತರಗತಿ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಿಲ್ಲ. ಇಂಥ ಸಮಸ್ಯೆ ಎದುರಾದರೂ ಹೈಕೋರ್ಟ್‌ ಏಕೆ ಸುಮ್ಮನಿದೆ ಎಂಬುದು ಅರ್ಥವಾಗುತ್ತಿಲ್ಲ. ನ್ಯಾಯಾಂಗವು ಕೊನೆಯ ಆಸೆಯಾಗಿತ್ತು. ಈಗ ಅದೂ ಕಳೆದುಹೋಗಿದೆ ಅನಿಸುತ್ತಿದೆ. ನಾಗಪುರದಿಂದ ಆಮದು ಮಾಡಿಕೊಂಡವರೇ ಎಲ್ಲಾ ಕಡೆ ಕುಳಿತಿದ್ದಾರೆ’ ಎಂದು ಬೇಸರವ್ಯಕ್ತಪಡಿಸಿದರು.

‘ಕರ್ನಾಟಕವು ಒಂದು ಪ್ರಯೋಗಶಾಲೆಯಾಗಿದೆ. ಹಿಜಾಬ್ ಇಲ್ಲ. ಅಜಾನ್‌, ಹಲಾಲ್‌ ಮಾಡುವಂತಿಲ್ಲ. ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಂವಿಧಾನ ನೀಡಿರುವ ಹಕ್ಕನ್ನು ಇಂದು ಇವರ‍್ಯಾರೋ ನಿರ್ಧರಿಸುತ್ತಿದ್ದಾರೆ’ ಎಂದು ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು.

‘ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಅವರಂತಹ ಚಿಂತಕರ ಕೊಲೆ ನಡೆದಿದೆ. ಆದರೆ, ಕೊಲೆಗಾರರಿಗೆ ಇನ್ನೂ ಶಿಕ್ಷೆಯಾಗಿಲ್ಲ. ದೇಶದ್ರೋಹ ಕಾಯ್ದೆಯನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಚಂದ್ರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT