ಸಾಲ ಮನ್ನಾಕ್ಕೆ ಷರತ್ತು: ರೈತರಿಗೆ ಅನಾನುಕೂಲ

7
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒ ತರಬೇತಿ ಶಿಬಿರದಲ್ಲಿ ಡಿಸಿಸಿ ಬ್ಯಾಂಕ್‌ ಪ್ರಭಾರ ಸಿಇಒ ತಾವರ‍್ಯನಾಯ್ಕ

ಸಾಲ ಮನ್ನಾಕ್ಕೆ ಷರತ್ತು: ರೈತರಿಗೆ ಅನಾನುಕೂಲ

Published:
Updated:
Deccan Herald

ದಾವಣಗೆರೆ: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಘೋಷಿಸಿರುವ ಸಾಲ ಮನ್ನಾ ಯೋಜನೆಗೆ ಹಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದ್ದು, ಇದರಿಂದಾಗಿ ರೈತರಿಗೆ ಹಾಗೂ ಸಹಕಾರ ಬ್ಯಾಂಕ್‌ಗಳಿಗೆ ಹೆಚ್ಚಿನ ಅನುಕೂಲ ಆಗುವುದಿಲ್ಲ’ ಎಂದು ಡಿಸಿಸಿ ಬ್ಯಾಂಕ್‌ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾವರ‍್ಯನಾಯ್ಕ ಅಭಿಪ್ರಾಯಪಟ್ಟರು.

ರಾಜ್ಯ ಸಹಕಾರ ಮಹಾಮಂಡಳಿ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್‌, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಆಶ್ರಯದಲ್ಲಿ ಜನತಾ ಬಜಾರ್‌ನಲ್ಲಿ ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸಿಇಒಗಳಿಗೆ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರದಲ್ಲಿ ಅವರು ಸಾಲ ಮನ್ನಾ ಕುರಿತು ಉಪನ್ಯಾಸ ನೀಡಿದರು.

‘ಸಾಲ ಮನ್ನಾ ಕುರಿತು ಹಲವು ಷರತ್ತುಗಳನ್ನು ವಿಧಿಸಿ ಆಗಸ್ಟ್‌ 14ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. 2018ರ ಜುಲೈ 10ರೊಳಗಿನ ಹೊರಬಾಕಿಯಲ್ಲಿ ₹1 ಲಕ್ಷ ಮಾತ್ರ ಮನ್ನಾ ಮಾಡಲಾಗುತ್ತದೆ. ಮಾರ್ಗಸೂಚಿ ಅವಧಿಯಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿ ₹224 ಕೋಟಿ ಬೆಳೆ ಸಾಲವನ್ನು ರೈತರಿಗೆ ವಿತರಿಸಲಾಗಿದೆ. ಷರತ್ತುಗಳನ್ನು ನೋಡಿದರೆ ಹೆಚ್ಚೆಂದರೆ ₹180 ಕೋಟಿ ಸಾಲ ಮನ್ನಾ ಆಗಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.

ಶಿಬಿರ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಜೆ.ಎಸ್‌. ವೇಣುಗೋಪಾಲ, ‘ರಾಜ್ಯದಲ್ಲಿ ₹50 ಕೋಟಿ ಬೇನಾಮಿ ಸಾಲ ಕೊಡಲಾಗಿದೆ ಎಂಬ ಮಾತುಗಳು ಸರ್ಕಾರ ಮಟ್ಟದಲ್ಲಿ ಕೇಳಿ ಬರುತ್ತಿವೆ. ಇದು ಸತ್ಯಕ್ಕೆ ದೂರವಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಕಲ್ಪಿಸಿಕೊಡಲು ಸೊಸೈಟಿಗಳಲ್ಲಿ ಆಡಳಿತ ಮಂಡಳಿಯವರು ನಿರ್ಧಾರ ತೆಗೆದುಕೊಂಡು ಸಾಲ ಕೊಡಿಸಿರುತ್ತಾರೆ. ಹೀಗಿರುವಾಗ ಕಾರ್ಯದರ್ಶಿಗಳನ್ನೇ ಇದಕ್ಕೆ ಹೊಣೆ ಮಾಡುವುದು ಸರಿಯಲ್ಲ. ಈಗ ಎಲ್ಲವೂ ಗಣಕೀರಣಗೊಂಡಿರುವುದರಿಂದ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷ ಎಸ್‌.ಬಿ. ಶಿವಕುಮಾರ್‌, ‘ಇಂದು ಕಾನೂನುನಿನ ಹಲವು ತೊಡಕುಗಳಿವೆ. ಹಿಂದಿನಷ್ಟು ಕೆಲಸ ಸುಲಭವಾಗಿಲ್ಲ. ಹೀಗಾಗಿ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್‌ನ ಆರ್‌. ಬಸವರಾಪ್ಪ, ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಜಿ.ಡಿ. ಗುರುಸ್ವಾಮಿ, ಪಿ.ಎ.ಸಿ.ಎಸ್‌.ನ ಎಚ್‌.ಬಿ. ಭೂಮೇಶ್ವರ ಹಾಜರಿದ್ದರು. ಸಹಕಾರ ಯೂನಿಯನ್‌ನ ವ್ಯವಸ್ಥಾಪಕ ಜಗದೀಶ ನಿರೂಪಿಸಿದರು. ಯೂನಿಯನ್‌ನ ಸಿಇಒ ಕೆ.ಎಚ್‌. ಸಂತೋಷಕುಮಾರ್‌ ವಂದಿಸಿದರು.

ಠೇವಣಿ ಹೊಂದಾಣಿಕೆ: ಡಿಡಿಸಿ ಬ್ಯಾಂಕ್‌ಗೆ ಮಾರಕ

ರೈತರ ಹೆಸರಿನಲ್ಲಿ ಡಿಸಿಸಿ/ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇದ್ದರೆ ಅಂತಹ ಮೊತ್ತವನ್ನು ಹೊರಬಾಕಿಯಲ್ಲಿ ಕಳೆದು ಸಾಲ ಮನ್ನಾ ಮಾಡಬೇಕು ಎಂಬ ಷರತ್ತು ವಿಧಿಸಿರುವುದು ಡಿಸಿಸಿ ಬ್ಯಾಂಕ್‌ನ ಬೆಳವಣಿಗೆಗೆ ಮಾರಕವಾಗಿದೆ ಎಂದು ತಾವರ‍್ಯನಾಯ್ಕ ಆತಂಕ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್‌ಗಳಲ್ಲಿ ರೈತರು ಮಾತ್ರ ಠೇವಣಿ ಇಟ್ಟಿರುತ್ತಾರೆ. ಹೀಗಿರುವಾಗ ಅವರ ಠೇವಣಿ ಹಣವನ್ನು ಸಾಲ ಮನ್ನಾ ಜೊತೆಗೆ ಹೊಂದಾಣಿಕೆ ಮಾಡುವುದರಿಂದ ಹೆಚ್ಚಿನ ರೈತರಿಗೆ ಸಾಲ ಮನ್ನಾ ಯೋಜನೆಯ ಸಂಪೂರ್ಣ ಲಾಭ ಸಿಗುವುದಿಲ್ಲ ಎಂದು ಮಾಹಿತಿ ನೀಡಿದರು.

ಒಂದು ಕುಟುಂಬದಲ್ಲಿ ಗರಿಷ್ಠ ₹ 1 ಲಕ್ಷ ಮಾತ್ರ ಸಾಲ ಮನ್ನಾ ಮಾಡಲಾಗುವುದು ಎಂದಿದೆ. ಇದು ಒಂದೇ ಕುಟುಂಬದಲ್ಲಿ ಇಬ್ಬರು, ಮೂವರು ಪಡೆದಿರುವ ಸಾಲಕ್ಕೆ ಅನ್ವಯವಾಗಲಿದೆಯೋ ಅಥವಾ ಒಬ್ಬ ವ್ಯಕ್ತಿ ಪಡೆದಿರುವ ಸಾಲಕ್ಕೋ ಎಂಬ ಬಗ್ಗೆ ಇನ್ನೂ ಸರ್ಕಾರದಿಂದ ಸ್ಪಷ್ಟೀಕರಣ ಪಡೆದುಕೊಳ್ಳಬೇಕಾಗಿದೆ ಎಂದರು.

***

ರೈತರ ಸಾಲಮನ್ನಾ ನಿಯಮಾವಳಿಗಳು

* ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾಲ ಪಡೆದವರೂ ಈಗ ಯೋಜನೆಯ ಲಾಭ ಪಡೆಯಬಹುದು.

* ಒಂದು ಕುಟುಂಬಕ್ಕೆ ಗರಿಷ್ಠ ₹ 1 ಲಕ್ಷದವರೆಗೆ ಸಾಲ ಮನ್ನಾ ಆಗಲಿದೆ.

* ಸಾಲ ಪಡೆದ ರೈತರು ಮೃತಪಟ್ಟಿದ್ದರೆ, ಅವರ ವಾರಸುದಾರರಿಗೆ ಈ ಸೌಲಭ್ಯ ಸಿಗಲಿದೆ.

* ಯೋಜನೆಯಡಿ ಮನ್ನಾ ಮಾಡುವ ಸಾಲವು ರೈತರ ಸಾಲ ಮರುಪಾವತಿ ಮಾಡುವ ಗಡುವು ದಿನಾಂಕಕ್ಕೆ ಜಾರಿಗೆ ಬರುತ್ತದೆ.

* ಜುಲೈ 10ರೊಳಗೆ ಸಾಲವನ್ನು ಪೂರ್ಣವಾಗಿ ಮರುಪಾವತಿಸಿದ್ದರೆ, ಮನ್ನಾ ಆಗಬೇಕಾಗಿದ್ದ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು.

ಸೌಲಭ್ಯ ಪಡೆಯಲು ಯಾರು ಅನರ್ಹರು?

* ಸರ್ಕಾರಿ, ಸಹಕಾರ ಮತ್ತು ಇತರೆ ಕ್ಷೇತ್ರದ ನೌಕರರಾಗಿದ್ದು, ತಿಂಗಳಿಗೆ ₹ 20 ಸಾವಿರಕ್ಕಿಂತ ಹೆಚ್ಚಿನ ವೇತನ/ ಪಿಂಚಣಿ ಪಡೆಯುತ್ತಿರುವ ರೈತರು

* ಮೂರು ವರ್ಷಗಳಲ್ಲಿ ಒಮ್ಮೆ ಆದಾಯ ತೆರಿಗೆ ಪಾವತಿಸಿದ್ದರೆ, ಅಂಥವರಿಗೆ ಯೋಜನೆ ಅನ್ವಯಿಸುವುದಿಲ್ಲ.

* ಚಾಲ್ತಿಗೆ ಸಾಲದ ಮೊತ್ತ ಹಾಗೂ ಬಡ್ಡಿ ಎರಡೂ ಮನ್ನಾ ಆಗಲಿದೆ. ಆದರೆ, ಸುಸ್ತಿಗೆ ರೈತರೇ ಬಡ್ಡಿಯನ್ನು ಪಾವತಿಸಬೇಕು.

* ಕೃಷಿ ಉತ್ಪನ್ನ, ಚಿನ್ನಾಭರಣ ಒತ್ತೆ ಇಟ್ಟು ಪಡೆದಿರುವ ಸಾಲ ಮನ್ನಾ ಯೋಜನೆಯಡಿ ಬರುವುದಿಲ್ಲ.

* ಒಂದಕ್ಕಿಂತ ಹೆಚ್ಚು ಸಹಕಾರ ಸಂಘ/ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರೆ ಒಂದು ಸಂಸ್ಥೆಯಿಂದ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯಬಹುದು. 

ಅಂಕಿ– ಅಂಶಗಳು

78,808 ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಲಮನ್ನಾ ಫಲಾನುಭವಿ ರೈತರು

₹ 222 ಕೋಟಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಲ ಮನ್ನಾ

₹ 224 ಕೋಟಿ ಪ್ರಸಕ್ತ ಸಾಲಿನಲ್ಲಿ ರೈತರಿಗೆ ನೀಡಿರುವ ಸಾಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !