ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ವಿವಿಧ ವಲಯಗಳಿಗೆ ಆತಂಕ, ಊರಿನತ್ತ ಹೊರಟ ಪ್ರಯಾಣಿಕರು

Last Updated 27 ಏಪ್ರಿಲ್ 2021, 3:19 IST
ಅಕ್ಷರ ಗಾತ್ರ

ದಾವಣಗೆರೆ: ಏ.27ರಿಂದ ರಾತ್ರಿಯಿಂದ 14 ದಿನಗಳವರೆಗೆ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ನಗರದಲ್ಲಿ ಚಟುವಟಿಕೆ ಗರಿಗೆದರಿದವು.ಜನರು ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆ, ಅಂಗಡಿಗಳತ್ತ ದೌಡಾಯಿಸಿದರು. ಅನ್ಯ ಜಿಲ್ಲೆಯವರು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.

ಕಿರಾಣಿ ಅಂಗಡಿ, ಬೇಕರಿ, ಹಣ್ಣಿನ ಅಂಗಡಿಗಳು, ಮೆಡಿಕಲ್ ಸ್ಟೋರ್, ಹಾರ್ಡ್‌ವೇರ್, ಕೃಷಿ ಉಪಕರಣದ ಅಂಗಡಿಗಳು ತೆರೆದಿದ್ದವು. ಬಟ್ಟೆ ಅಂಗಡಿ ಹಾಗೂ ಎಲೆಕ್ಟ್ರಾನಿಕ್ಸ್ ಗೂಡ್ಸ್ ಮಳಿಗೆಗಳು ಮುಚ್ಚಿದ್ದವು. ಮದ್ಯದ ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಿದ್ದರು. ಸರಕುಗಳು ಸಿಗುವುದಿಲ್ಲ, ಬೆಲೆ ಹೆಚ್ಚಾಗುತ್ತದೆ ಎಂಬ ಆತಂಕದಿಂದ ಸೋಮವಾರ ಸಂಜೆಯಿಂದಲೇ ವಾರಕ್ಕೆ ಆಗುವಷ್ಟು ದಿನಸಿಗಳನ್ನು ಮುಂಚಿತವಾಗಿಯೇ ಖರೀದಿಸಿದರು.

ಊರಿಗೆ ಹೋಗುವ ಧಾವಂತ: ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಹೊರ ಜಿಲ್ಲೆಗಳ ಜನರು ತಮ್ಮ ಊರುಗಳತ್ತ ಮುಖ ಮಾಡಿದರು. ಅಲ್ಲದೇ ವಿವಿಧ ಜಿಲ್ಲೆಗಳಲ್ಲಿದ್ದ ಜಿಲ್ಲೆಯ ಜನರು ತಮ್ಮ ಊರಿನತ್ತ ಧಾವಿಸಿದರು. ಕೆಲವರು ಟ್ಯಾಕ್ಸಿ, ರೈಲು ಹಾಗೂ ಬಸ್‌ಗಳಲ್ಲಿ ತಮ್ಮ ಊರುಗಳಿಗೆ ತೆರಳಿದರು.

ಬೆಂಗಳೂರಿಗೆ 50ಕ್ಕೂ ಹೆಚ್ಚು ಬಸ್‌ಗಳ ಸಂಚಾರ: ಕೆಎಸ್‌ಆರ್‌ಟಿಸಿ ಬಸ್‌ಗಳ ಟ್ರಿಪ್‌ಗಳನ್ನು ಹೆಚ್ಚಿಸಲಾಗಿದೆ. ವಿಶೇಷವಾಗಿ ಬೆಂಗಳೂರಿಗೆ 50ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿದವು. ಅಲ್ಲಿಂದಲೂ ಹೆಚ್ಚು ಜನರು ಬರುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು. ಟ್ಯಾಕ್ಸಿಗಳಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಸಂಚರಿಸುವವರಿಗೆ ಪ್ರತಿ ಕಿ.ಮೀಗೆ ₹1 ಹೆಚ್ಚು ಮಾಡಿದರೆ, ಬೆಂಗಳೂರಿನಿಂದ ದಾವಣಗೆರೆಗೆ ಬರುವವರಿಗೆ ₹2ರಿಂದ ₹3ಕ್ಕೆ ಹೆಚ್ಚಿಸಲಾಗಿದೆ ಚಾಲಕರೊಬ್ಬರು ತಿಳಿಸಿದರು. ಖಾಸಗಿ ಬಸ್‌ಗಳಲ್ಲೂ ಪ್ರಯಾಣಿಕರು ಹೆಚ್ಚಾಗಿ ಇದ್ದರು.

ಜವಳಿ ವ್ಯಾಪಾರಿಗಳಿಗೆ ನಷ್ಟ: 14 ದಿನಗಳ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಜವಳಿ ವ್ಯಾಪಾರಿಗಳಿಗೆ ಆತಂಕ ಶುರುವಾಗಿದೆ. ಮದುವೆ ಸೀಸನ್ ಇದಾಗಿದ್ದುದರಿಂದ 5 ತಿಂಗಳ ವ್ಯಾಪಾರ ಈ ಒಂದು ತಿಂಗಳಲ್ಲಿ ನಡೆಯುತ್ತದೆ. ಕಳೆದ ಬಾರಿಯು ಇದೇ ಸಮಯಕ್ಕೆ ಲಾಕ್‌ಡೌನ್ ಆಗಿದ್ದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. ಈಗ ಹೆಚ್ಚಿನ ವ್ಯಾಪಾರವಾಗುವ ಸಮಯದಲ್ಲೇ ಲಾಕ್‌ಡೌನ್ ಘೋಷಿಸಿರುವುದು ಇನ್ನಷ್ಟು ಆತಂಕ ಶುರುವಾಗಿದೆ.

ಗಾರ್ಮೆಂಟ್ಸ್ ಬಂದ್: ದಾವಣಗೆರೆ ನಗರದಲ್ಲಿಯೂ ಗಾರ್ಮೆಂಟ್ಸ್‌ಗಳಿದ್ದು, ಇದರಿಂದ ಮಹಿಳೆಯರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ‘ಕಳೆದ ಬಾರಿ ಕೊರೊನಾದಿಂದ ಗಾರ್ಮೆಂಟ್ಸ್‌ಗಳು ಮುಚ್ಚಿದ್ದು, ಸ್ವಲ್ಪ ಚೇತರಿಕೆಯತ್ತ ಸಾಗುತ್ತಿರುವಾಗಲೇ ಈಗ ಲಾಕ್‌ಡೌನ್ ಘೋಷಣೆಯಾಗಿದೆ. ಕೊರೊನಾದಿಂದ ಹೆದರಿದ್ದಶೇ 70ರಷ್ಟು ಕೆಲಸಗಾರರನ್ನು ಸಜ್ಜುಗೊಳಿಸಿ ಉತ್ಪನ್ನಗಳನ್ನು ಸಿದ್ಧಗೊಳಿಸಲಾಗಿದೆ. ಅವುಗಳು ವ್ಯಾಪಾರವಾಗುವ ವೇಳೆ ಲಾಕ್‌ಡೌನ್ ಆಗಿದೆ. ಕಚ್ಚಾವಸ್ತುಗಳಿಗೆ ಹಣವನ್ನು ಪಾವತಿಸಬೇಕು. ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲವಾಗಿದೆ. ಇದನ್ನು ಸರಿದೂಗಿಸುವುದೇ ಸವಾಲಾಗಿದೆ’ ಎಂದು ಎಸ್‌ಎಸ್‌ಎಂ ಗಾರ್ಮೆಂಟ್ಸ್ ಮಾಲೀಕ ಅಳಲು
ತೋಡಿಕೊಂಡರು

ರೈತರಿಗೂ ಸಂಕಷ್ಟ: ಅಲ್ಪಸ್ವಲ್ಪ ಜಮೀನಿನಲ್ಲಿ ತರಕಾರಿ ಬೆಳೆದ ರೈತರಿಗೆ ಲಾಕ್‌ಡೌನ್‌ನಿಂದ ಸಂಪೂರ್ಣ ಹೊಡೆತ ಬೀಳಲಿದ್ದು, ಯಾರಿಗೆ ವ್ಯಾಪಾರ ಮಾಡಬೇಕೆಂಬ ಸಂಕಷ್ಟ ರೈತರಿಗೆ ಎದುರಾಗಿದೆ. ಬೆಳೆದ ಬೆಳೆಗೆ ಬೆಲೆ ಸಿಗುವುದು ಅನುಮಾನ.

ಬೆಲೆ ಏರಿಕೆ ಸಾಧ್ಯತೆ: ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವೋಲ್‌ಸೇಲ್ ವ್ಯಾಪಾರಿಗಳು ಇರುವ ವಸ್ತುಗಳಿಗೆ ಹೆಚ್ಚು ದುಪ್ಪಟ್ಟು ದರ ಫಿಕ್ಸ್‌ಮಾಡಲು ಸಿದ್ದರಾಗಿದ್ದಾರೆ. ಇಲ್ಲಿಂದ ತೆಗೆದುಕೊಂಡ ರಿಟೇಲ್ ವ್ಯಾಪಾರಿಗಳು ಒಂದಿಷ್ಟು ಲಾಭಕ್ಕೆ ಮಾರಾಟ ಮಾಡಲಿದ್ದು, ಅಂತಿಮವಾಗಿ ಗ್ರಾಹಕನ ಜೇಬಿಗೆ ಪೆಟ್ಟು ಬೀಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT