ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ದಂಪತಿಯನ್ನು ಒಂದು ಮಾಡಿದ ಲೋಕ ಅದಾಲತ್‌

ಮನವೊಲಿಸಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಿದ ನ್ಯಾಯಾಧೀಶರು, ಸಂಧಾನಕಾರರು
Last Updated 26 ಜೂನ್ 2022, 4:24 IST
ಅಕ್ಷರ ಗಾತ್ರ

ದಾವಣಗೆರೆ: ಕೌಟುಂಬಿಕ ವೈಮನಸ್ಸಿನಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಯನ್ನು ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಂದು ಮಾಡಲಾಗಿದೆ. ಮೂರು ಮಕ್ಕಳ ಭವಿಷ್ಯದ ಬಗ್ಗೆ ತಿಳಿ ಹೇಳಿದ ನ್ಯಾಯಾಧೀಶರು ಮತ್ತು ರಾಜೀ ಸಂಧಾನಗಾರರು ದಂಪತಿಯನ್ನು ಒಂದು ಮಾಡುವಲ್ಲಿ ಯಶಸ್ವಿಯಾದರು.

ದಾವಣಗೆರೆಯ ಉದ್ಯಮಿ ವ್ಯಕ್ತಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿರುವ ಮಹಿಳೆ 2011ರಲ್ಲಿ ಮದುವೆಯಾಗಿದ್ದರು. 2020ರಲ್ಲಿ ಪತಿ ಮೇಲೆ ದೌರ್ಜನ್ಯ ಪ್ರಕರಣವನ್ನು ಪತ್ನಿ ದಾಖಲಿಸಿದ್ದರು. ಈ ದಂಪತಿಗೆ ಮೂವರು ಹೆಣ್ಣುಮಕ್ಕಳು ಇದ್ದು, ಮೂವರೂ ತಾಯಿ ಜತೆಗೆ ಇದ್ದರು. ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ನ್ಯಾಯಾಧೀಶರ ಜತೆಗೆ ವಕೀಲ ಎಸ್‌. ತಿಪ್ಪೇಸ್ವಾಮಿ ಈ ಪ್ರಕರಣವನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ದಂಪತಿಯ ಮನವೊಲಿಸಿದರು.

ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನಕಾರರು ದಂಪತಿಗೆ ತಿಳಿಹೇಳಿ ಒಂದುಗೂಡಿಸಿದರು. ಒಬ್ಬಳು ಮಗಳು ಇದಕ್ಕೆ ಸಾಕ್ಷಿಯಾದಳು.

ಇದೇ ಸಂದರ್ಭದಲ್ಲಿ ವಿಚ್ಛೇದನವಾಗಿ ಎರಡು ವರ್ಷವಾಗಿದ್ದ ಜೋಡಿಯನ್ನೂ ಮತ್ತೆ ಒಂದುಗೂಡಿಸಿದ ಅಪರೂಪದ ಘಟನೆಯೂ ನಡೆಯಿತು.

ಎರಡು ಜೋಡಿಗಳೂ ನ್ಯಾಯಾಲಯದಲ್ಲಿಯೇ ಪರಸ್ಪರ ಹಾರ ಬದಲಾಯಿಸಿಕೊಂಡರು. ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದರು. ಮಗಳಿಗೂ ತಿನ್ನಿಸಿ ಖುಷಿಪಟ್ಟರು.

‘ವಿಚ್ಛೇದನ ಪಡೆದ ಈ ಎರಡು ಜೋಡಿಗಳು ಮತ್ತೆ ಒಂದಾಗಿ ಜೀವನ ನಡೆಸಲು ಮುಂದಾಗಿರುವುದು ಉತ್ತಮ ವಿಚಾರ. ಇಂಥ ಹಲವು ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿದ್ದೇವೆ. ಕೌಟುಂಬಿಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಹೊಂದಿಕೊಂಡು ಹೋಗುವ ಈ ಪ್ರಕರಣಗಳು ಸಮಾಜಕ್ಕೆ ಮಾದರಿಯಾಗಲಿ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.

ಕುಟುಂಬದಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಪತಿ, ಪತ್ನಿ ಮಾನಸಿಕವಾಗಿ ಹೊಂದಿಕೊಂಡರೆ ಮುಂದಿನ ಬದುಕು ಚೆನ್ನಾಗಿ ಇರುತ್ತದೆ. ಒಂದು ಕುಟುಂಬದಲ್ಲಿ ಒಬ್ಬಳು ಹೆಣ್ಣುಮಗಳು, ಮತ್ತೊಂದು ಕುಟುಂಬದಲ್ಲಿ ಮೂವರು ಹೆಣ್ಣುಮಕ್ಕಳು ಇದ್ದಾರೆ. ಈಗ ಹೆತ್ತವರು ಒಂದಾಗಿರುವುದರಿಂದ ಈ ನಾಲ್ವರು ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಎಂದು 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ. ಹೇಳಿದರು.

ಮುಂದೆ ಪ್ರೀತಿಯಿಂದ ಬಾಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪ್ರೀತಿ ಎಸ್‌. ಜೋಷಿ, ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪ್ರವೀಣ್‌ ನಾಯಕ್‌ ಹಾರೈಸಿದರು.

ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ. ಶ್ರೀನಿವಾಸ್, ವಕೀಲರಾದ ಎಲ್.ಎಚ್. ಅರುಣ್‌ಕುಮಾರ್, ಎಸ್.ತಿಪ್ಪೇಸ್ವಾಮಿ, ವಿವಿಧ ಸಂಧಾನಕಾರರು ಇದ್ದರು.

ಲೋಕ ಅದಾಲತ್‌ನಲ್ಲಿ 12,958 ಪ್ರಕರಣ ಇತ್ಯರ್ಥ
ಜಿಲ್ಲಾ ನ್ಯಾಯಾಲಯವೂ ಸೇರಿ ಜಿಲ್ಲೆಯಲ್ಲಿರುವ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 21,529 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳ ಪೈಕಿ 12,958 ಪ್ರಕರಣಗಳು ಇತ್ಯರ್ಥಗೊಂಡವು. ಒಟ್ಟು 12.29 ಕೋಟಿ ಪರಿಹಾರ ನೀಡಲಾಯಿತು.

ರಾಜಿಯಾಗಬಲ್ಲ 347 ಅಪರಾಧ ಪ್ರಕರಣಗಳಲ್ಲಿ 42 ಪ್ರಕರಣಗಳು ಇತ್ಯರ್ಥಗೊಂಡವು. 95 ಚೆಕ್‌ ಅಮಾನ್ಯ ಪ್ರಕರಣಗಳು ಇತ್ಯರ್ಥವಾಗಿದ್ದು, ₹ 2.71 ಕೋಟಿ ಪರಿಹಾರ ಒದಗಿಸಲಾಯಿತು.ಬ್ಯಾಂಕ್‌ಗೆ ಸಂಬಂಧಿಸಿದ 25 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ₹ 69 ಲಕ್ಷ ಪರಿಹಾರ ಕಲ್ಪಿಸಲಾಯಿತು. ಹಣ ವಸೂಲಾತಿಯ 18 ಪ್ರಕರಣಗಳಲ್ಲಿ ₹ 53 ಲಕ್ಷ ಪರಿಹಾರ ನೀಡಲು ತಿಳಿಸಲಾಯಿತು.

ಮೋಟರ್‌ ವಾಹನ ಕಾಯ್ದೆಯಡಿ 51 ಪ್ರಕರಣಗಳನ್ನು ಬಗೆಹರಿಸಿ, ₹ 1.47 ಕೋಟಿ ಪರಿಹಾರವನ್ನು ಕೊಡಿಸಲಾಯಿತು. ಕಾರ್ಮಿಕರ ಸಮಸ್ಯೆ, ಮರಳು ಅಕ್ರಮ ಸಾಗಾಟ, ಪಾಲುದಾರಿಕೆ ಸಮಸ್ಯೆ, ಸಿವಿಲ್‌ ವ್ಯಾಜ್ಯಗಳು, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಹೀಗೆ ನಾನಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT