ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮರ್ಥವಾಗಿ ಕೆಲಸ ಮಾಡಿ, ಟೀಕೆಗೆ ತಕ್ಕ ಉತ್ತರ ನೀಡುವೆ: ಗಾಯತ್ರಿ ಸಿದ್ದೇಶ್ವರ

ಮಾದಮುತ್ತೇನಹಳ್ಳಿಯಿಂದ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ
Published 1 ಏಪ್ರಿಲ್ 2024, 7:18 IST
Last Updated 1 ಏಪ್ರಿಲ್ 2024, 7:18 IST
ಅಕ್ಷರ ಗಾತ್ರ

ಜಗಳೂರು: ‘ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರ ಬಗ್ಗೆ ಕೀಳಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ನನ್ನನ್ನು ಗೆಲ್ಲಿಸಿದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮೂಲಕ ಅವರ ಟೀಕೆಗೆ ಉತ್ತರ ನೀಡುತ್ತೇನೆ’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ತಾಲ್ಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಸಾಕಷ್ಟು ಮಹಿಳೆಯರು ಅಡುಗೆಮನೆಯಿಂದ ಹಿಡಿದು ರಾಜಕೀಯ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅಂತೆಯೇ ನಾನೂ ಅಡುಗೆ ಮಾಡಿ ಕಾರ್ಯಕರ್ತರಿಗೆ ಊಟ ಬಡಿಸಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಪ್ರಚಾರಕ್ಕೆ ಬಂದಿರುವೆ. 30 ವರ್ಷ ರಾಜಕೀಯ ಅನುಭವ ಹೊಂದಿದ ನಾನು ಸಿಕ್ಕ ಅವಕಾಶವನ್ನು ಚುನಾವಣೆಯಲ್ಲಿ ಸಮರ್ಥವಾಗಿ ನಿಭಾಯಿಸುವೆ. ಉಜ್ವಲ ಯೋಜನೆಯ ಮೂಲಕ ಅಡುಗೆಮನೆಯನ್ನು ಕಟ್ಟಿಗೆಯ ಹೊಗೆ ಮುಕ್ತಗೊಳಿಸಿರುವುದು ಮಹಿಳೆಯರ ಬಗ್ಗೆ ಪ್ರಧಾನಿ ಮೋದಿ ಹೊಂದಿರುವ ಕಾಳಜಿಗೆ ಸಾಕ್ಷಿ’ ಎಂದರು.

‘ಪ್ರಧಾನಿ ಮೋದಿ ಅವರ ಸಂಕಲ್ಪದಂತೆ ಈ ಬಾರಿ ದೇಶವ್ಯಾಪಿ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಸೀಟುಗಳ ಗೆಲುವು ನಿಶ್ಚಿತ. ನನ್ನ ಆಡಳಿತಾವಧಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸಹಾಯ ಹಸ್ತದಿಂದ ಸಾಕಾರಗೊಂಡಿರುವ ಭದ್ರಾ ಮೇಲ್ದಂಡೆ ಮತ್ತು 57 ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿಗಳು ಪೂರ್ಣಗೊಂಡು ಬರದ ನಾಡು ಹಸಿರುನಾಡಾಗುವುದು ಖಚಿತ’ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

‘ಕ್ಷೇತ್ರದಲ್ಲಿ ಎಸ್.ವಿ. ರಾಮಚಂದ್ರ ಮತ್ತು ನಾನು ರಸ್ತೆ, ಕುಡಿಯುವ ನೀರು ಸೇರಿದಂತೆ ಸಾಕಷ್ಟು ಮೂಲಸೌಕರ್ಯ ಒದಗಿಸಿದ್ದೇವೆ. ಇದೀಗ ಜೋಡೆತ್ತಿನಂತೆ ನಾವು ಒಂದಾಗಿದ್ದು, ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಸದಾ‌ ಸಂಪರ್ಕಕ್ಕೆ‌ ಸಿಗುವ ನೇರ ಸ್ವಭಾವದ ಗಾಯತ್ರಿ ಸಿದ್ದೇಶ್ವರ ಅವರ ಗೆಲುವಿನ‌ ರಥ ಎಳೆಯೋಣ’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

‘ಕಾಂಗ್ರೆಸ್ ಪಕ್ಷದ ಈಗಿನ ಅಭ್ಯರ್ಥಿಯ ಕುಟುಂಬದವರು ನೇರವಾಗಿ ಆಗಲಿ ಅಥವಾ ಫೋನ್ ಸಂಪರ್ಕಕ್ಕಾಗಲೀ ಸಿಗುವುದೇ ಇಲ್ಲ. ಆದರೆ ನಾವು ಹಾಗಲ್ಲ’ ಎಂದರು.

ಇದೇ ವೇಳೆ ಈಶಾನ್ಯ ದಿಕ್ಕಿನ ಮಾದಮುತ್ತೇನಹಳ್ಳಿ ಗ್ರಾಮದ ಚಿಕ್ಕಣ್ಣನ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ನಂತರ ಅಣಬೂರು, ಹನುಮಂತಾಪುರ, ದೊಣೆಹಳ್ಳಿ, ಹಿರೇಮಲ್ಲನಹೊಳೆ, ಮುಸ್ಟೂರು, ಕಲ್ಲೇದೇವರಪುರ, ತೋರಣಗಟ್ಟೆ, ಬಿದರಕೆರೆ ಗ್ರಾಮ ಪಂಚಾಯಿತಿಗಳಲ್ಲಿ  ಚುನಾವಣೆ ಪ್ರಚಾರ ನಡೆಸಲಾಯಿತು.

ಜಗಳೂರು ತಾಲ್ಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಚುನಾವಣಾ ಪ್ರಚಾರದ ಉದ್ಘಾಟನಾ ಸಭೆಯಲ್ಲಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮಾತನಾಡಿದರು. ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಎಚ್.ಪಿ. ರಾಜೇಶ್ ಇದ್ದರು.
ಜಗಳೂರು ತಾಲ್ಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಚುನಾವಣಾ ಪ್ರಚಾರದ ಉದ್ಘಾಟನಾ ಸಭೆಯಲ್ಲಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮಾತನಾಡಿದರು. ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಎಚ್.ಪಿ. ರಾಜೇಶ್ ಇದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಮುಖಂಡರಾದ ಇಂದಿರಾ ರಾಮಚಂದ್ರ, ಜಿ.ಎಸ್. ಅನಿತ್ ಕುಮಾರ್, ಶಾಂತಕುಮಾರಿ ಶಶಿಧರ, ಸೊಕ್ಕೆ ನಾಗರಾಜ್, ಜಯಲಕ್ಷ್ಮಿ ಮಹೇಶ್, ಎಸ್.ಕೆ. ಮಂಜುನಾಥ್, ಸವಿತಾ ಕಲ್ಲೇಶ್, ಯರಬಳ್ಳಿ ಸಿದ್ದಪ್ಪ, ಕಾನನಕಟ್ಟೆ ತಿಪ್ಪೇಸ್ವಾಮಿ, ಜೆ.ವಿ. ನಾಗರಾಜ್, ಸ್ವಾತಿ ತಿಪ್ಪೇಸ್ವಾಮಿ, ಎ.ಎಂ. ಮರುಳಾರಾಧ್ಯ, ಬಿಸ್ತುವಳ್ಳಿ ಬಾಬು, ನಿವೃತ್ತ ಡಿವೈಎಸ್‌ಪಿ ಕಲ್ಲೇಶಪ್ಪ, ಪುರುಷೋತ್ತಮನಾಯ್ಕ, ದ್ಯಾಮನಗೌಡ, ಇಂದ್ರೇಶ್, ಅರವಿಂದ ಪಾಟೀಲ್, ಎನ್.ಎಸ್. ರಾಜು, ಭೈರೇಶ್, ಅಮರೇಂದ್ರಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT