ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಬಿಟ್ಟು ಸುಳ್ಳು ಹೇಳಿ ಮತಯಾಚನೆ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

Published 5 ಮೇ 2024, 7:09 IST
Last Updated 5 ಮೇ 2024, 7:09 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಯಾಚಿಸುವುದನ್ನು ಬಿಟ್ಟು ಸುಳ್ಳುಗಳನ್ನು ಹೇಳಿ 3ನೇ ಬಾರಿಗೆ ಪ್ರಧಾನಿ ಆಗಲು ಹೊರಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿಪರ ಆಯೋಜಿಸಿದ್ದ ‘ಪ್ರಜಾಧ್ವನಿ–2’ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘10 ವರ್ಷಗಳ ಅವಧಿಯಲ್ಲಿ ರೈತರು, ಹಿಂದುಳಿದವರು, ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಏನು ಸಹಾಯ ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ಇಟ್ಟು ಮತ ಕೇಳಬೇಕು. ದೇಶ ಹಾಗೂ ಕರ್ನಾಟಕ ರಾಜ್ಯವನ್ನು ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸಿದ್ದಾರಾ? ಈಡೇರಿಸಿದ್ದರೆ ಅದನ್ನು ಘೋಷಿಸಬೇಕು’ ಎಂದು ಸವಾಲು ಹಾಕಿದರು.

‘ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರ ಮಾಡಿ ಹಣವನ್ನು ವಿದೇಶದಲ್ಲಿ ಇಟ್ಟಿದ್ದು, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಆ ಹಣವನ್ನು ತಂದು ಪ್ರತಿಯೊಬ್ಬರ ಖಾತೆಗಳಿಗೆ ₹15 ಲಕ್ಷ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ 10 ವರ್ಷಗಳಾದರೂ ₹15 ಹಾಕಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಈ ವೇಳೆಗಾಗಲೇ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಉದ್ಯೋಗ ಕೇಳಲು ಹೋದರೆ ಪಕೋಡಾ ಮಾರಿ ಎಂದು ಹೇಳಿದ್ದಾರೆ.‌ ಈ ದೇಶದ ಯುವಕ–ಯುವತಿಯರು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಮರುಳಾಗಿ ‘ಮೋದಿ ಮೋದಿ ಎನ್ನುತ್ತಿದ್ದಾರೆ. ಯುವಕರಿಗೆ ಮೋದಿ ಭ್ರಮೆ ಹುಟ್ಟಿಸಿ ದ್ರೋಹ ಮಾಡಿದರು’ ಎಂದು ಟೀಕಿಸಿದರು.

‘ರೈತರ ಸಾಲ ಮನ್ನಾ ಆಯಿತಾ? ಸ್ವಾಮಿನಾಥನ್ ವರದಿ ಜಾರಿ ಮಾಡಿದರಾ, ಬೆಂಬಲ ಬೆಲೆ ಖಾತ್ರಿಯಾಯಿತಾ ಎಂದು ಪ್ರಶ್ನಿಸಿದ ಅವರು, ಆಹಾರ ಪದಾರ್ಥಗಳು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಡೀಸೆಲ್ ಬೆಲೆ 2014ರಲ್ಲಿ ₹48 ಇದ್ದಿದ್ದು ಈಗ ₹90–₹95 ಆಗಿದೆ. ಪೆಟ್ರೋಲ್ ಬೆಲೆ ₹ 70 ಇದ್ದಿದ್ದು, ಪ್ರಸ್ತುತ ₹100–₹105 ದಾಟಿದೆ. ಅಡುಗೆ ಅನಿಲದ ಬೆಲೆ ₹ 414ರಿಂದ ₹ 950ಕ್ಕೆ ಏರಿದೆ. ಮೋದಿ ಆಡಳಿತದ ಅವಧಿಯಲ್ಲಿ ಬೆಲೆ ಏರಿಕೆಯಾಯಿತೇ ಹೊರತು ಇಳಿಯಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರವಾಸ ಮಾಡಿದ ವೇಳೆ ಜನರಿಗೆ ನೀಡಿದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ ವರ್ಷವೇ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ‘ಶಕ್ತಿ’ ಯೋಜನೆಯಡಿ ಈವರೆಗೆ 200 ಕೋಟಿ ಹೆಚ್ಚು ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅರಸೀಕೆರೆಯಲ್ಲಿ ಮಹಿಳೆಯೊಬ್ಬರು ಸಂಚರಿಸಿದ ಬಸ್ ಟಿಕೆಟ್‌ ಅನ್ನು ಸೇರಿಸಿ ಹಾರ ಮಾಡಿ ಹಾಕಲು ಬಂದಿದ್ದರು. ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ’ ಎಂದರು.

‘ಅನ್ನಭಾಗ್ಯ’ ಯೋಜನೆಗೆ ಕೇಂದ್ರದವರು ಅಕ್ಕಿ ಕೊಡುವುದಾಗಿ ಭರವಸೆ ನೀಡಿ ಆ ಬಳಿಕ ಕೊಡಲಿಲ್ಲ. ಅಕ್ಕಿ ಕೊಟ್ಟರೆ ಬಡವರು ಕಾಂಗ್ರೆಸ್‌ ಪರ ನಿಲ್ಲುತ್ತಾರೆ ಎಂಬ ಕಾರಣದಿಂದ ಕೇಂದ್ರದವರು ದ್ರೋಹ ಮಾಡಿದರು. ಅಕ್ಕಿ ಬದಲು ಹಣವನ್ನೇ ನೀಡಿದೆವು. ‘ಗೃಹಲಕ್ಷ್ಮಿ’ ಯೋಜನೆಯಡಿ 1.20 ಕೋಟಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹2000 ನೀಡುತ್ತಿದ್ದು, ಈಗಾಗಲೇ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಹಣ ಜಮಾ ಆಗಿದೆ. ಮೇ ತಿಂಗಳ ಹಣ ಶೀಘ್ರ ಬರಲಿದೆ’ ಎಂದು ಭರವಸೆ ನೀಡಿದರು.

‘ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡಿದ್ದಾರಾ? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ರಾಜ್ಯದ 27.20 ಲಕ್ಷ ರೈತರ ₹ 8,165 ಕೋಟಿ ಮನ್ನಾ ಆಯಿತು. ಆದರೆ ಬಿಜೆಪಿ ಆಡಳಿತದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದಾಗ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎಂದು ಹೇಳಿದರು. ಇಂತಹವರಿಗೆ ಮತ ನೀಡಬೇಕಾ’ ಎಂದು ಪ್ರಶ್ನಿಸಿದರು.

‘ರಾಜ್ಯದಂತೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ, ನಿರೊದ್ಯೋಗಿ ಯುವಕನಿಗೆ ಅಪ್ರೆಂಟಿಸ್ ಶಿಪ್‌ಗೆ ₹ 1 ಲಕ್ಷ, ಆರೋಗ್ಯ ವಿಮೆಗೆ ₹ 25 ಲಕ್ಷ ನೀಡಲಾಗುವುದು. ಜಾತಿ ಗಣತಿ, ರೈತರ ಸಾಲ ಸಂಪೂರ್ಣ ಮನ್ನಾ, ಸ್ವಾಮಿನಾಥನ್ ವರದಿ ಜಾರಿ ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆ ಖಾತ್ರಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ದಾವಣಗೆರೆ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಸೇರಿದ್ದ ಜನಸ್ತೊಮ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ದಾವಣಗೆರೆ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಸೇರಿದ್ದ ಜನಸ್ತೊಮ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ದಾವಣಗೆರೆ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಸೇರಿದ್ದ ಜನಸ್ತೊಮ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ದಾವಣಗೆರೆ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಸೇರಿದ್ದ ಜನಸ್ತೊಮ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ಉಪಮುಖ್ಯಮಂತ್ರ ಡಿ.ಕೆ.ಶಿವಕುಮಾರ್ ಅವರು ಎಂಬಿಎ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಬಂದು ಇಳಿದಾಗ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸ್ವಾಗತಿಸಿದರು. ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದರು.
ಉಪಮುಖ್ಯಮಂತ್ರ ಡಿ.ಕೆ.ಶಿವಕುಮಾರ್ ಅವರು ಎಂಬಿಎ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಬಂದು ಇಳಿದಾಗ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸ್ವಾಗತಿಸಿದರು. ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದರು.
ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ
ದಾವಣಗೆರೆಯಲ್ಲಿ ‘ಇಂಡಿಯಾ’ ಹಾಗೂ ‘ಎನ್‌ಡಿಒ’ ಒಕ್ಕೂಟಗಳ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿಯೊಬ್ಬರು ಕಣಕ್ಕೆ ಇಳಿದಿದ್ದು ಅವರಿಗೆ ಮತ ನೀಡಬಾರದು. ಅವರಿಗೆ ಮತ ನೀಡಿದರೆ ಬಿಜೆಪಿಗೆ ವೋಟ್ ಹಾಕಿದಂತೆ ಎಂದು ಸಿದ್ದರಾಮಯ್ಯ ಹೇಳಿದರು. ‘ನನ್ನ ಮೇಲೆ ಪ್ರೀತಿ ಗೌರವ ಅಭಿಮಾನ ಇದ್ದರೆ. ನಾನೇ ಈ ಚುನಾವಣೆಯಲ್ಲ ಸ್ಪರ್ಧೆ ಮಾಡಿದ್ದೇನೆ ಎಂದುಕೊಳ್ಳಿ. ದಯಮಾಡಿ ಯಾವ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬಾರದು. ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು. ಅವರನ್ನು ಲೋಕಸಭೆಗೆ ಕಳುಹಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಾನೇ ಗೆದ್ದಂತೆ’ ಎಂದು ಹೇಳಿದರು. 
ಕಾಣಿಸಿಕೊಳ್ಳದ ಕಾಂಗ್ರೆಸ್ ಅಭ್ಯರ್ಥಿ
‘ಪ್ರಜಾಧ್ವನಿ–2’ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಗೈರು ಹಾಜರಾಗಿದ್ದರು. ಸಮಾವೇಶದಲ್ಲಿ ಎಲ್ಲಿಯೂ ಅಭ್ಯರ್ಥಿಯ ಭಾವಚಿತ್ರ ಕಾಣಿಸಿಕೊಂಡಿಲ್ಲ. ನಾಯಕರು ಅವರ ಹೆಸರನ್ನು ಹೇಳದೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು. ಸಮಾವೇಶದಲ್ಲಿ ಅಭ್ಯರ್ಥಿ ಹಾಜರಾದರೆ ಖರ್ಚು ವೆಚ್ಚವೆಲ್ಲಾ ಆ ಅಭ್ಯರ್ಥಿಯ ಲೆಕ್ಕಕ್ಕೆ ಹೋಗುತ್ತದೆ ಎಂಬ ಕಾರಣದಿಂದ ಅವರನ್ನು ಸಮಾವೇಶಕ್ಕೆ ಕರೆತಂದಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತದೆ. ‘ಮಾರ್ಗಸೂಚಿ ಪ್ರಕಾರ ಅಭ್ಯರ್ಥಿ ಗೈರು ಹಾಜರಾಗಿ ಭಾವಚಿತ್ರ ಇಲ್ಲದೇ ಇರುವುದರಿಂದ ಅವರ ಹೆಸರಿಗೆ ಖರ್ಚುವೆಚ್ಚ ಬೀಳುವುದಿಲ್ಲ. ಬದಲಾಗಿ ಪಕ್ಷಕ್ಕೆ ಬೀಳುತ್ತದೆ. ಪ್ರತಿಯೊಂದು ವೆಚ್ಚವನ್ನು ವಿಡಿಯೊ ಸರ್ವೆಲೆನ್ಸ್ ತಂಡದಿಂದ ಎಕ್ಸ್‌ಪೆಂಡಿಚರ್ ಅಬ್ಸರ್‌ವರ್‌ ಅವರು ಪರಿಶೀಲಿಸಿ ಖರ್ಚು ವೆಚ್ಚದ ಲೆಕ್ಕವನ್ನು ಅಭ್ಯರ್ಥಿಗೆ ಸಲ್ಲಿಸಲಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT