ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಇಂದಿನಿಂದ ಮನೆಯಿಂದಲೇ ಮತದಾನ

ಲೋಕಸಭಾ ಚುನಾವಣಾ ಅಭ್ಯರ್ಥಿಗಳು, ಪ್ರತಿನಿಧಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಸಭೆ
Published 25 ಏಪ್ರಿಲ್ 2024, 5:14 IST
Last Updated 25 ಏಪ್ರಿಲ್ 2024, 5:14 IST
ಅಕ್ಷರ ಗಾತ್ರ

ದಾವಣಗೆರೆ: ‘ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗವು ಏಪ್ರಿಲ್‌ 25 ರಿಂದ ಏ.27ರವರೆಗೆ ಅವಕಾಶ ಕಲ್ಪಿಸಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘804 ಜನ ಅಂಗವಿಕಲರು ಹಾಗೂ 85 ವರ್ಷ ಮೇಲ್ಪಟ್ಟ 1,458 ಮಂದಿ ಮನೆಯಿಂದಲೇ ಮತದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ. ಬಿಎಲ್‌ಒಗಳು ಈಗಾಗಲೇ ಇವರ ಮನೆಗಳಿಗೆ ತೆರಳಿ ನಮೂನೆ–12ಡಿ ಅಡಿಯಲ್ಲಿ ಘೋಷಣಾ ಪತ್ರ ಪಡೆದು ಇಆರ್‌ಒ ನೆಟ್‍ನಲ್ಲಿ ಹೆಸರುಗಳನ್ನು ನೋಂದಾಯಿಸಿದ್ದಾರೆ. ಮನೆಯಿಂದಲೇ ಮತದಾನ ಪ್ರಕ್ರಿಯೆ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಇದಕ್ಕಾಗಿ ಸೆಕ್ಟರ್‌ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮತದಾನ ಅಧಿಕಾರಿ, ಮೈಕ್ರೋ ಅಬ್ಸರ್ವರ್‌, ವಿಡಿಯೊಗ್ರಾಫರ್‌ ಮತ್ತು ಪೊಲೀಸ್‌ ಸಿಬ್ಬಂದಿಯನ್ನೊಳಗೊಂಡ ತಂಡಗಳನ್ನೂ ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಚುನಾವಣೆ ವೇಳೆ ಅಗತ್ಯ ಸೇವಾ ಇಲಾಖೆಯಲ್ಲಿ ಕೆಲಸ ಮಾಡುವವರು ಮತದಾನದಿಂದ ದೂರ ಉಳಿಯಬಾರದು. ಈ ಕಾರಣಕ್ಕೆ 16 ಇಲಾಖೆಗಳ ಒಟ್ಟು 915 ಮತದಾರರಿಗೆ ಮೇ 1 ರಿಂದ 3ರವರೆಗೆ ಸ್ಮಾರ್ಟ್‌ ಸಿಟಿ ಕಚೇರಿಯಲ್ಲಿ ಅಂಚೆ ಮೂಲಕ ಮತದಾನ ಮಾಡಲು ಸೌಲಭ್ಯ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದರು. 

‘ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,09, 244 ಮತದಾರರಿದ್ದಾರೆ. ಈ ಪೈಕಿ ಪುರುಷರ ಸಂಖ್ಯೆ 8,51,990. ಮಹಿಳೆಯರು 8,57,117 ಮಂದಿ ಇದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಪೈಕಿ 137 ಮಂದಿ ಮತ ಚಲಾವಣೆ ಮಾಡಲು ಅರ್ಹರಾಗಿದ್ದಾರೆ. ಕ್ಷೇತ್ರದಲ್ಲಿ ಪುರುಷರಿಗಿಂತಲೂ ಮಹಿಳಾ ಮತದಾರರೇ ಹೆಚ್ಚಿದ್ದಾರೆ’ ಎಂದೂ ಹೇಳಿದರು.  

‘30 ಮಂದಿ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಮತದಾನದ ದಿನ ಎರಡು ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಹೆಚ್ಚುವರಿ ಬ್ಯಾಲೆಟ್ ಯೂನಿಟ್‍ಗಳು ಬಂದಿವೆ. ಒಂದೆರಡು ದಿನಗಳಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಲಾಗುತ್ತದೆ. ರ‍್ಯಾಂಡಮೈಜೇಷನ್‌ ಮಾಡಿ ಆಯಾ ಕ್ಷೇತ್ರಗಳ ಸ್ಟ್ರಾಂಗ್ ರೂಂನಲ್ಲಿ ಇವಿಎಂ ದಾಸ್ತಾನು ಮಾಡಲಾಗುತ್ತದೆ’ ಎಂದು ತಿಳಿಸಿದರು.

ಮತದಾರರ ವಿವರಗಳನ್ನು ಅಭ್ಯರ್ಥಿಗಳಿಗೆ ನೀಡಲಾಯಿತು. ಮತಗಟ್ಟೆ ಮಟ್ಟದ ಏಜೆಂಟರ ಪಟ್ಟಿಯನ್ನು ನೀಡುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಯಿತು.

ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಎ.ಆರ್.ಓ.ಗಳಾದ ದುರ್ಗಾಶ್ರೀ ಎನ್., ರೇಣುಕಾ, ಭಾವನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT