ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಗಾಯತ್ರಿ ಪರ ಯದುವೀರ್‌ ಒಡೆಯರ್‌ ರೋಡ್‌ ಶೋ

Published 4 ಮೇ 2024, 5:35 IST
Last Updated 4 ಮೇ 2024, 5:35 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದರು.

ಯದುವೀರ್‌ ಒಡೆಯರ್ ಅವರನ್ನು ನೋಡಲು ಮಹಿಳೆಯರು, ಮಕ್ಕಳು, ಯುವಕರು ಜಮಾಯಿಸಿದ್ದರು. ಮೈಸೂರಿನ ಒಡೆಯರ್‌ ಬರುತ್ತಾರಂತೆ. ಯದುವೀರ್‌ ಅಂತೆ. ಅವರನ್ನು ಕಾಣಲು ಬಂದೆ ಎಂದು ಯುವಕರು, ಹಿರಿಯರು ಮಾತನಾಡುತ್ತಿದ್ದುದು ಕಂಡುಬಂತು. ಯದುವೀರ್‌ ಬರುತ್ತಿದ್ದಂತೆ ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದರು.

ರೋಡ್‌ ಶೋ ಉದ್ದಕ್ಕೂ ಹೂವಿನ ಮಳೆಗರೆದರು. ಮಹಿಳೆಯರು ಸ್ವಾಗತ ಕೋರಿದರು. ಕೆಲ ಮಹಿಳೆಯರು ಜಯಚಾಮರಾಜ ಒಡೆಯರ್‌ ಅವರ ಭಾವಚಿತ್ರ ಪ್ರದರ್ಶಿಸಿದರು.

ವಿಧಾನಸಭಾ ಕ್ಷೇತ್ರದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಯದುವೀರ್‌ ಒಡೆಯರ್ ಅವರು ಗಾಯತ್ರಿ ಸಿದ್ದೇಶ್ವರ ಅವರ ಪರ ಪ್ರಚಾರ ನಡೆಸಿದರು.

ನಗರದೇವತೆ ದುರ್ಗಾಂಬಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಭಗತ್ ಸಿಂಗ್ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೋಡ್ ಶೋಗೆ ಯದುವೀರ್‌ ಚಾಲನೆ ನೀಡಿದರು. ಭಗತ್‌ಸಿಂಗ್ ನಗರದ ಆಟೊ ನಿಲ್ದಾಣ, ನಿಟುವಳ್ಳಿ ರಸ್ತೆ, ಕೆಟಿಜೆ ನಗರ 17ನೇ ಕ್ರಾಸ್, ಕೆಟಿಜೆ ನಗರ 2ನೇ ಮೇನ್, ಶಿವಪ್ಪಯ್ಯ ಸರ್ಕಲ್‌ವರೆಗೆ ಬೆಳಿಗ್ಗೆ ರೋಡ್ ಶೋ ನಡೆಸಿದರು.

ಸಂಜೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗಾಂಧಿನಗರದಿಂದ ರೋಡ್‌ ಶೋ ನಡೆಸಿದರು. ವಿಠಲ ಮಂದಿರ, ಹಾಸಭಾವಿ ಸರ್ಕಲ್, ಚೌಕಿಪೇಟೆ, ಮಂಡಿಪೇಟೆ ಮಾರ್ಗವಾಗಿ ಗಡಿಯಾರ ಕಂಬದಲ್ಲಿ ರೋಡ್‌ ಶೋ ಸಮಾರೋಪಗೊಂಡಿತು.

ಶಿವಪ್ಪಯ್ಯ ವೃತ್ತದಲ್ಲಿ ಮಾತನಾಡಿದ ಯದುವೀರ್‌, ‘ಬೆಣ್ಣೆ ಮನಸ್ಸಿನಂತಹ ನಗರದ ಜನರು ಮತ್ತು ಮೈಸೂರು ಸಂಸ್ಥಾನದ ಅರಸರಿಗೂ ಅವಿನಾಭಾವ ಸಂಬಂಧವಿದೆ’ ಎಂದು ಸ್ಮರಿಸಿದರು.

‘ದೇಶದ ಸುರಕ್ಷತೆ, ಪರಂಪರೆ, ಮುಂದಿನ ಪೀಳಿಗೆಗಾಗಿ ಭಾರತೀಯರಾದ ನಾವು ಬಿಜೆಪಿ ಬೆಂಬಲಿಸಬೇಕು. ಅಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಅಂದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು. ನೀವೆಲ್ಲರೂ ಗಾಯತ್ರಿ ಸಿದ್ದೇಶ್ವರ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿ‌ದರು.

‘20 ವರ್ಷದಲ್ಲಿ ದಾವಣಗೆರೆ ‌ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಅದಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಕಾರಣ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಅನೇಕ ನಗರಗಳು ಸ್ಮಾರ್ಟ್ ಆಗಿವೆ. ಗ್ರಾಮೀಣ ಭಾಗಕ್ಕೆ ವಿದ್ಯುತ್, ಮನೆ ಮನೆಗೂ ಸಿಲಿಂಡರ್, ರೈಲ್ವೆ ಉನ್ನತೀಕರಣ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು’ ಎಂದು ಕೋರಿದರು.

‘ನಮ್ಮ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಿದ್ದೇಶ್ವರ ಅವರು ಇಲ್ಲಿ ನೋಡದ ಹಳ್ಳಿಗಳಿಲ್ಲ, ಹೋಗದ ರಸ್ತೆಗಳಿಲ್ಲ. ಕ್ಷೇತ್ರದ ಮತದಾರರು ನಮ್ಮ ಮೇಲೆ 6 ಬಾರಿ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಅವರ ಆಶೀರ್ವಾದ ಸಿಗಲಿದೆ’ ಎಂದು ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

‌‘ಕಾಂಗ್ರೆಸ್ ಅಭ್ಯರ್ಥಿಯ ಪತಿ ಜಿಲ್ಲಾ ಉಸ್ತುವಾರಿ ಸಚಿವರಾದರೂ ದಕ್ಷಿಣ ಭಾಗಕ್ಕೆ ಒಂದು ಸುಸಜ್ಜಿತವಾದ ಆಸ್ಪತ್ರೆ, ವಿದ್ಯಾಕೇಂದ್ರ, ಕೈಗಾರಿಕೆ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಅಧಿಕಾರ ಇದ್ದಾಗ ಏನೂ ಮಾಡಲು ಆಗದವರು ಈಗ ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಮುಖಂಡರಾದ ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್,  ಜಿ.ಎಸ್.ಅನಿತ್ ಕುಮಾರ್, ಎಂ.ಎಸ್. ವಿಠಲ್, ಯಶೋದಾ ಯಗ್ಗಪ್ಪ, ಎಸ್.ಟಿ.ವೀರೇಶ್, ಬಿ.ಜಿ. ಅಜಯ್‌ಕುಮಾರ್‌, ರಾಜನಹಳ್ಳಿ ಶಿವಕುಮಾರ್‌ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

ಭಾರತೀಯರ ಪರಂಪರೆ ಉಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಬರಬೇಕಾಯಿತು. ಶ್ರೀರಾಮ ಮಂದಿರಕ್ಕೆ ಬಾಲರಾಮ ಮೂರ್ತಿ ನಮ್ಮ ಮೈಸೂರಿನಿಂದ ನಮ್ಮ ರಾಜ್ಯದಿಂದ ಹೋಗಿರುವುದು ನಮ್ಮ ಹೆಮ್ಮೆ
ಯದುವೀರ್ ಒಡೆಯರ್ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ

ರೋಡ್‌ ಶೋಗೆ ಪ್ರತಿಭಟನೆಯ ಬಿಸಿ

ಗಾಂಧಿನಗರದಲ್ಲಿ ಯದುವೀರ್‌ ರೋಡ್‌ ಶೋದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗಾಂಧಿನಗರ ಸರ್ಕಲ್‌ ಬಳಿ ಯದುವೀರ್‌ ಬರುತ್ತಿದ್ದಂತೆ ಒಂದು ಬದಿಯಲ್ಲಿ ನಿಂತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ‘ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗುತ್ತಾ ಸರ್ಕಲ್‌ ಬಳಿ ಬರಲು ಮುಂದಾದರು. ಇದಕ್ಕೆ ಪ್ರತಿಯಾಗಿ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ’ಮೋದಿ’ ’ಮೋದಿ’ ’ಬಿಜೆಪಿಗೆ ಜೈ’ ಎಂದು ಕೂಗಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಬಂದ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಿ ಘೋಷಣೆ ಕೂಗದಂತೆ ತಡೆದರು. ಕಾರ್ಯಕರ್ತರಾದ ರಾಕೇಶ್‌ ಟಿ. ರಮೇಶ್‌ ರಾಕೇಶ್‌ ಜಿ. ಕುಮಾರ್‌ ಜಿ.ಡಿ. ದುರ್ಗೇಶ್ ಬೀರೇಶ್‌ ಗೌಡ ಅನಿಲ್‌ಕುಮಾರ್‌ ಗೋವಿಂನಾಕ್ಷಮ್ಮ ಬಿ.ಆರ್‌. ಮಂಜುನಾಥ್ ಇದ್ದರು.

ಬಿಜೆಪಿಯ ಕಾರ್ಯಕರ್ತ: ಯದುವೀರ್‌

‘ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿಯ ಕಾರಣ ಗಾಯತ್ರಿ ಸಿದ್ದೇಶ್ವರ ಪರ ಮತಯಾಚನೆಗೆ ಬಂದಿದ್ದೇನೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ’ ಎಂದು ಯದುವೀರ್‌ ಒಡೆಯರ್‌ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮೊದಲ ಹಂತದ 14 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ’ ಎಂದ ಅವರು ಪ್ರಜ್ವಲ್‌ ರೇವಣ್ಣ ಕುರಿತ ಪ್ರಶ್ನೆಗೆ ‘ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವರು ಉತ್ತರ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT