ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕನ್ನಡ ಸಮ್ಮೇಳನ: ಮಾರ್ಚ್‌ನಲ್ಲಿ ಸಿಎಂ ಭೇಟಿ

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಭರವಸೆ
Published 30 ಜುಲೈ 2023, 15:13 IST
Last Updated 30 ಜುಲೈ 2023, 15:13 IST
ಅಕ್ಷರ ಗಾತ್ರ

ದಾವಣಗೆರೆ: ‘ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ಶಿಸ್ತುಬದ್ಧವಾಗಿ ನಡೆಸಲು ಸಂಪೂರ್ಣವಾಗಿ ಸಹಕಾರ ನೀಡಲಿದ್ದು, ಮುಂದಿನ ವರ್ಷ ಮಾರ್ಚ್‌ ತಿಂಗಳ ಬಜೆಟ್‌ನಲ್ಲಿ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಮತಿ ಗೌರಮ್ಮ ಪಿ.ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್‌ವತಿಯಿಂದ ಸ್ಥಾಪಿಸಿರುವ ‘ಮಹಲಿಂಗರಂಗ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸುವ ಸಂಬಂಧ 2017ರಲ್ಲಿ ₹20 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಯಿತು. ಕಾರಣಾಂತರಗಳಿಂದ ಸಮ್ಮೇಳನ ರದ್ದಾಯಿತು. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸರಿದೂಗಿಸುತ್ತಿರುವುದರಿಂದ ಇಂದಿನ ಸಂದರ್ಭದಲ್ಲಿ ಅನುದಾನ ಸಿಗುವುದು ಕಷ್ಟ. ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ಹೊರಟು ಮುಖ್ಯಮಂತ್ರಿಗಳನ್ನು ಭೇಟಿ ಮಾಡೋಣ. ಅವರು ಸಾಹಿತ್ಯಾಸಕ್ತರು, ಅವರು ಹಣ ನೀಡುವ ಭರವಸೆ ನನಗಿದೆ’ ಎಂದು ತಿಳಿಸಿದರು.

‘ಫೇಸ್‌ಬುಕ್ ಕಾಲದಲ್ಲಿ ಈ ಕ್ಷಣದ ನೆನಪುಗಳು ಮಾಸಿಹೋಗುವ ಈ ಕಾಲದಲ್ಲಿ ಬದುಕು ನೆನಪಿನ ಆಧಾರದಲ್ಲಿ ಹೋಗುತ್ತದೆ. 16ನೇ ಶತಮಾನದ ನೆನಪಿನ ಶಕ್ತಿ ಸಮಾಜದ ಕಳಕಳಿ. ಕನ್ನಡದ ಭಾಷೆ ಅದ್ಭುತ ಮಾದರಿ ಅದನ್ನು ಕೈಬಿಡುವಂತಿಲ್ಲ’ ಎಂದು ಹಿರಿಯ ನಟ ರಂಗಕರ್ಮಿ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.

‘ಭವಿಷ್ಯದ ಕನ್ನಡ ಲೋಕಕ್ಕೆ, ಸಾರಸ್ವತ ಲೋಕಕ್ಕೆ ಕೊಡುಗೆ ನೀಡಲು ಬಹುಮುಖಿ ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ಭವಿಷ್ಯದ ಕನ್ನಡ ಕಟ್ಟುವ ಪೀಳಿಗೆ ಸೃಷ್ಟಿಯಾಗುವುದೇ ಇಂತಹ ವೇದಿಕೆಗಳಲ್ಲಿ. ಸೌಹಾರ್ದ, ಸಹೃದಯ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಪ್ರೀತಿ, ವಿಶ್ವಾಸ, ಹುಟ್ಟುಹಾಕುವಲ್ಲಿ ಮಹಲಿಂಗರಂಗ ‌ಅವರ ಹೆಸರಿನಲ್ಲಿ ಪ್ರಶಸ್ತಿ ‌ಪ್ರದಾನ ಸಮಾರಂಭ ಉತ್ತಮ ಕಾರ್ಯವಾಗಿದೆ’ ಎಂದರು.

‘ಸ್ವಸ್ಥ ಸಮಾಜ ಕ್ರೋಡೀಕರಣಕ್ಕೆ ಸಾಂಸ್ಕೃತಿಕ ಸಮಾಜದಲ್ಲಿರುವ ಪಕ್ಷಾತೀತರು ಜಾತ್ಯತೀತರು ಬೇಕು. ಕಲಾವಿದನಿಗೆ ಮಾತ್ರ ಯಾವುದೇ ಜಾತಿ ಇಲ್ಲ’ ಎಂದರು.

‘ಬಾ.ಮಾ. ಬಸವರಾಜಯ್ಯ ಧಾರವಾಡದ ಚಂಪಾ ಅವರ ರೀತಿ ದಾವಣಗೆರೆಯ ಬಾಮಾ ಆಗಿದ್ದಾರೆ. ಪತ್ರಕರ್ತರಾಗಿದ್ದುಕೊಂಡೆ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರು. ರಂಗಕರ್ಮಿಯಾಗಿದ್ದವರು. ರಾಜಕೀಯದಲ್ಲೂ ಸಾಧನೆ ಮಾಡಿದ್ದಾರೆ. ಬಡವರ, ಶೋಷಿತರಪರ ಹೋರಾಟ ಮಾಡಿದ್ದಾರೆ. ಕೆ.ಎನ್. ಸ್ವಾಮಿಯವರೂ ಉತ್ತಮ ಸಾಹಿತಿ ಹಾಗೂ‌ ಹಲವಾರು ಕವಿ ಮನಸ್ಸುಗಳನ್ನು ಕಟ್ಟಿ ಬೆಳೆಸಿದವರು’ ಎಂದು ಪತ್ರಕರ್ತ ಬಿ.ಎನ್‌. ಮಲ್ಲೇಶ್ ಅಭಿನಂದನಾ ನುಡಿಗಳಲ್ಲಿ ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಜಿಲ್ಲೆಯಲ್ಲಿ 3ನೇ ವಿಶ್ವಕನ್ನಡ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT