ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಎಂಬತ್ತಾದರೂ ಬತ್ತದ ಜೀವನೋತ್ಸಾಹ: ಮಾಸ್ಟರ್ ಅಥ್ಲೀಟ್‌ ಗುರುಶಾಂತಪ್ಪ ಸಂದರ್ಶನ

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಹೆಜ್ಜೆ ಗುರುತು ಮೂಡಿಸಿರುವ ದಾವಣಗೆರೆಯ ಗುರುಶಾಂತಪ್ಪ
Published : 18 ಫೆಬ್ರುವರಿ 2025, 6:54 IST
Last Updated : 18 ಫೆಬ್ರುವರಿ 2025, 6:54 IST
ಫಾಲೋ ಮಾಡಿ
Comments
ಪ್ರ

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಪಯಣ ಶುರುವಾಗಿದ್ದು ಹೇಗೆ?

ಶಾಲಾ ದಿನಗಳಲ್ಲಿ ವಾಲಿಬಾಲ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌ ಆಡುತ್ತಿದ್ದೆ. ಕಾಲೇಜು ಸೇರಿದ ಮೇಲೆ ಕುಸ್ತಿ ಮತ್ತು ವಾಲಿಬಾಲ್‌ನತ್ತ ಗಮನಹರಿಸಿದೆ. ಪಿಯುಸಿ ನಂತರ ಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿತ್ತು. ಚನ್ನಗಿರಿ ಹಾಗೂ ಹೊನ್ನಾಳಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದೆ. ನ್ಯಾಮತಿಯ ಕಂಚುಗಾರನಹಳ್ಳಿಯಲ್ಲಿ ಜಮೀನು ಇತ್ತು. ಅಲ್ಲಿ 15 ವರ್ಷ ಕೃಷಿ ಮಾಡಿದೆ. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ದಾವಣಗೆರೆಗೆ ಬಂದ ನಂತರ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ತೊಡಗಿಕೊಂಡೆ.

2011ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸಲ ಪಾಲ್ಗೊಂಡಿದ್ದೆ. 2014ರಲ್ಲಿ ಶ್ರೀಲಂಕಾ, ನಂತರ ಮಲೇಷ್ಯಾ, ಥಾಯ್ಲೆಂಡ್‌ ಹೀಗೆ ನಾನಾ ದೇಶಗಳಿಗೂ ಹೋಗಿದ್ದೇನೆ. ಕೇರಳದಲ್ಲಿ ನಡೆದಿದ್ದ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 65 ಕೆ.ಜಿ ವಿಭಾಗದಲ್ಲಿ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ 70ನೇ ವಯಸ್ಸಿನಲ್ಲಿ 2 ಕೆ.ಜಿ. ತೂಕ ಇಳಿಸಿದ್ದೆ.  

ಪ್ರ

ಈ ವಯಸ್ಸಿನಲ್ಲೂ ಫಿಟ್‌ನೆಸ್‌ ಹೇಗೆ ಕಾಪಾಡಿಕೊಳ್ಳುತ್ತೀರಿ?

ನಿತ್ಯ ಬೆಳಿಗ್ಗೆ 4.30ರಿಂದ 7.30ರವರೆಗೆ ಕುಂದವಾಡ ಕೆರೆ ಬಳಿ ವಾಕಿಂಗ್‌ ಮಾಡುತ್ತೇನೆ. ರಾತ್ರಿ ಬಾದಾಮಿ, ಉತ್ತುತ್ತಿ, ಗೋಡಂಬಿ ಹಾಗೂ ದ್ರಾಕ್ಷಿ ನೆನೆಯಲು ಇಟ್ಟು, ವಾಕಿಂಗ್‌ನಿಂದ ಬಂದ ನಂತರ ಅದನ್ನೆಲ್ಲಾ ರುಬ್ಬಿ ಕುಡಿಯುತ್ತೇನೆ. 11 ಗಂಟೆಗೆ ಉಪಾಹಾರ, ಮಧ್ಯಾಹ್ನ 3 ಗಂಟೆಗೆ ಊಟ, ಸಂಜೆ ಕಾಫಿ. ರಾತ್ರಿ 9ರ ಸುಮಾರಿಗೆ ಊಟ ಮುಗಿಸಿ 11 ಗಂಟೆಗೆ ಮಲಗುತ್ತೇನೆ.  ಈ ದಿನಚರಿಯನ್ನು ಪಾಲಿಸಿಕೊಂಡು ಬಂದಿದ್ದೇನೆ.

ಗರಡಿ ಮನೆಯಲ್ಲಿ ಕಸರತ್ತು ನಡೆಸುತ್ತಿದ್ದ ದಿನಗಳಲ್ಲಿ ಪೌಷ್ಠಿಕ ಆಹಾರ ಸೇವಿಸುತ್ತಿದ್ದೆ. ನ್ಯಾಮತಿಯಲ್ಲಿದ್ದಾಗ ಹೊಲದಲ್ಲಿನ ಹಾಲು ತುಂಬಿದ ಗೋದಿ ತೆನೆಗಳನ್ನು ತಿನ್ನುವ ಅಭ್ಯಾಸ ಇತ್ತು. ಹೀಗೆ ತಿಂದಿ ಬೆಳೆದಿರುವುದರಿಂದ ಈಗಲೂ ಗಟ್ಟಿಮುಟ್ಟಾಗಿದ್ದೇನೆ.

ಪ್ರ

ಪ್ರತಿ ದಿನ ವಾಕಿಂಗ್‌ ಜೊತೆ ಅಭ್ಯಾಸವನ್ನೂ ಮಾಡುವುದರಿಂದ ದೇಹ ತುಂಬಾ ದಣಿಯುವುದಿಲ್ಲವೇ?

ಎಷ್ಟೇ ಕಸರತ್ತು ನಡೆಸಿದರೂ ಆಯಾಸ ಆಗೋದಿಲ್ಲ. ಮೂರು ವರ್ಷಗಳ ಹಿಂದೆ ನಾವು ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದೆವು. ಒಂದು ದಿನ 45 ಕಿ.ಮೀ. ನಡೆದು ಹೋಗಬೇಕಿತ್ತು. ಜೊತೆಗೆ ಬಂದವರೆಲ್ಲಾ ಸುಸ್ತಾಗಿ ಮಲಗಿದ್ದರು. ನಾನು ಬೆಳಿಗ್ಗೆ 1.30ಕ್ಕೆ ಎದ್ದು ಏಕಾಂಗಿಯಾಗಿ ನಡೆದು ತಿರುಪತಿ ತಲುಪಿದ್ದೆ. ಬದುಕಲ್ಲಿ ಸಾಕಷ್ಟು ಹಣ ಕಳೆದುಕೊಂಡಿರಬಹುದು. ಆದರೆ ಉತ್ಸಾಹ ಯಾವತ್ತೂ ಕಳೆದುಕೊಂಡಿಲ್ಲ.

ಪ್ರ

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಕಷ್ಟು ಹಣ ಬೇಕು. ಅದನ್ನೆಲ್ಲಾ ಹೇಗೆ ಹೊಂದಿಸುತ್ತೀರಿ?

ದಾವಣಗೆರೆಯಲ್ಲಿ ದಾನಿಗಳಿಗೆ ಕೊರತೆ ಇಲ್ಲ. ನಾನು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಗೊತ್ತಾದ ಕೂಡಲೇ ₹10,000, ₹20,000 ಹೀಗೆ ಧಾರಾಳವಾಗಿ ನೆರವು ಕೊಡುತ್ತಾರೆ. ಪಾಲಿಕೆಯಿಂದಲೂ ₹10,000 ಸಿಗುತ್ತದೆ. ದಾನಿಗಳ ಸಹಕಾರ ಇಲ್ಲದೇ ಹೋಗಿದ್ದರೆ ಇಷ್ಟೆಲ್ಲಾ ಸಾಧನೆ ಮಾಡಲು ಆಗುತ್ತಲೇ ಇರಲಿಲ್ಲ. 

ಪ್ರ

ಕುಟುಂಬದ ಬಗ್ಗೆ ಹೇಳಿ?

ಮೂರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳು. ದೊಡ್ಡ ಮಗ ಕೆಲ ವರ್ಷಗಳ ಹಿಂದೆ ತೀರಿಕೊಂಡ. 6 ಜನ ಮೊಮ್ಮಕ್ಕಳು ಇದ್ದಾರೆ. ಮರಿ ಮಕ್ಕಳನ್ನೂ ನೋಡುತ್ತೇನೆಂಬ ವಿಶ್ವಾಸ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT