ದಾವಣಗೆರೆ: ನಗರದ ನಿಟುವಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈಗ ಗಣಿತ ‘ಕಬ್ಬಿಣದ ಕಡಲೆ’ ಅಲ್ಲ. ಇದಕ್ಕೆ ಕಾರಣ ಪಾಠೋಪಕರಣಗಳ ಮೂಲಕ ಗಣಿತ ಕಲಿಕೆ ಸರಳಗೊಳಿಸಲು ಅದೇ ವಿಷಯದ ಶಿಕ್ಷಕ ಕೆ.ಟಿ. ಜಯಪ್ಪ ಅವರು ಗಣಿತ ಪ್ರಯೋಗಾಲಯ ಆರಂಭಿಸಿರುವುದು.
ಒಟ್ಟು ₹ 3 ಲಕ್ಷ ವೆಚ್ಚದಲ್ಲಿ ಪ್ರಯೋಗಾಲಯ ಆರಂಭಿಸಿದ್ದು, ಶಿಕ್ಷಕ ಜಯಪ್ಪ ಅವರು ಪಾಠೋಪಕರಣಗಳನ್ನು ಸಿದ್ಧಪಡಿಸಲು ಸ್ವತಃ ₹ 1.25 ಲಕ್ಷ ಖರ್ಚು ಮಾಡಿದ್ದಾರೆ. ನಗರದ ಎ.ಕೆ. ಫೌಂಡೇಷನ್‌ನ ಕೆ.ಬಿ. ಕೊಟ್ರೇಶ್ ಸಹ ₹ 1.25 ಲಕ್ಷ ಮೌಲ್ಯದ ಪೀಠೋಪಕರಣ ಕೊಡುಗೆಯಾಗಿ ನೀಡಿದ್ದಾರೆ. ಉದ್ಯಮಿ ಚಂದ್ರಣ್ಣ, ಮಾಜಿ ಮೇಯರ್ ಉಮಾ ಪ್ರಕಾಶ್ ಅವರೂ ಈ ಕಾರ್ಯಕ್ಕೆ ಸಹಾಯಹಸ್ತ ಚಾಚಿರುವುದು ವಿದ್ಯಾರ್ಥಿಗಳಿಗೆ ನೆರವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೂರ್ಯನತ್ತ ಕಳುಹಿಸಿರುವ ‘ಆದಿತ್ಯ’ ಉಪಗ್ರಹ ಮತ್ತು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿರುವ ಲ್ಯಾಂಡರ್ ‘ವಿಕ್ರಂ’ ಹೆಸರನ್ನು ಬಳಸಿ ‘ವಿಕ್ರಂ-ಆದಿತ್ಯ’ ಎಂಬ ಹೆಸರಿನ ಗಣಿತ ಪ್ರಯೋಗಾಲಯ ಪ್ರಾರಂಭಿಸಲಾಗಿದೆ.
ಪ್ರಯೋಗಾಲಯದಲ್ಲಿ ಖ್ಯಾತ ಗಣಿತಜ್ಞರ ಹೆಸರು, ಅವರ ಸಾಧನೆಯ ಮಾಹಿತಿ ಒಳಗೊಂಡ ಫಲಕಗಳು, ಪಠ್ಯಕ್ರಮದ ಪ್ರಮೇಯಗಳು, ಸೂತ್ರಗಳು, ಗಣಿತದ ನಿಯಮಗಳ ಮಾದರಿಗಳು, ವೃತ್ತಗಳು, ತ್ರಿಭುಜ, ಪೂರಕ ಮತ್ತು ಪರಿಪೂರಕ ಕೋನಗಳು, ವರ್ಗ ಸಂಖ್ಯೆ, ಘನಾಕೃತಿಗಳ ಪಾಠೋಪಕರಣಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ.
‘ಸರ್ಕಾರಿ ಶಾಲೆಗಳಿಗೆ ಬಡವರು, ಕೂಲಿಕಾರ್ಮಿಕರ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಮನೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣವಾಗಲೀ, ಹೇಳಿಕೊಡುವವರಾಗಲೀ ಇರುವುದು ವಿರಳ. ಪಾಠೋಪಕರಣಗಳ ಸಹಾಯದಿಂದ ಗಣಿತ ಕಲಿಕೆಯನ್ನು ಸುಲಭಗೊಳಿಸಬೇಕು ಎಂಬ ಆಶಯವನ್ನು ಬಹಳ ದಿನಗಳಿಂದ ಹೊಂದಿದ್ದೆ. ಅದು ಈಗ ಸಾಕಾರಗೊಂಡಿದೆ’ ಎಂದು ಶಿಕ್ಷಕ ಜಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯಾವುದೇ ವಿಷಯವನ್ನು ಮೌಖಿಕಕ್ಕಿಂತಲೂ, ಪ್ರಾಯೋಗಿಕವಾಗಿ ಕಲಿಸಿದಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಪ್ರಯೋಗಾಲಯಕ್ಕೆ ಬಂದಾಗ ಪಾಠೋಪಕರಣಗಳನ್ನು ನೋಡುತ್ತಾರೆ. ಪದೇಪದೇ ವೀಕ್ಷಿಸುವುದರಿಂದ ಪಠ್ಯಕ್ರಮವನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಪ್ರಯೋಗಾಲಯದ ಹೊರಭಾಗದಲ್ಲಿ 1ರಿಂದ 20ರವರೆಗೆ ಮಗ್ಗಿಗಳನ್ನು ಬಣ್ಣದಲ್ಲಿ ಬರೆಯಿಸುವ ಯೋಜನೆ ಇದೆ. ಡಿಜಿಟಲ್ ಬೋರ್ಡ್ ಅಳವಡಿಸಲು ಲಯನ್ಸ್ ಸಂಸ್ಥೆ ಸೇರಿ ಹಲವು ದಾನಿಗಳು ನೆರವು ನೀಡುವ ಭರವಸೆ ನೀಡಿದ್ದಾರೆ. ಮುಖ್ಯಶಿಕ್ಷಕ ಎಂ.ಸುರೇಶ್ ಅವರು ನಮ್ಮ ಎಲ್ಲ ಕೆಲಸಗಳಿಗೂ ಒತ್ತಾಸೆಯಾಗಿ ನಿಂತಿದ್ದಾರೆ’ ಎಂದು ಅವರು ವಿವರಿಸಿದರು.
ಪ್ರಯೋಗಾಲಯದಿಂದ ಗಣಿತಜ್ಞರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಗೋಲಿಗಳ ಸಹಾಯದಿಂದ ಕೂಡುವುದು, ಕಳೆಯುವುದನ್ನು ಸುಲಭವಾಗಿ ಅರ್ಥಮಾಡಿಕೊಂಡೆ ಎಂದು 9ನೇ ತರಗತಿ ವಿದ್ಯಾರ್ಥಿನಿ ಚಂದನ ಕೆ.ಎಲ್. ತಿಳಿಸಿದಳು.
ನಿಟುವಳ್ಳಿ ಶಾಲೆಯ ಶಿಕ್ಷಕರು ಸ್ವಯಂಪ್ರೇರಿತ ಹಾಗೂ ದಾನಿಗಳ ಸಹಕಾರದಿಂದ ಹಲವು ಚಟುವಟಿಕೆಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಅವರ ನಡೆ ಇತರರಿಗೆ ಮಾದರಿಯಾಗಲಿ ಎಂದು ದಾವಣಗೆರೆ ಡಿಡಿಪಿಐ ಜಿ.ಕೊಟ್ರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
'ಎರಡು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ’
ನಾನು ಈ ಹಿಂದೆ ಕೆಲಸ ಮಾಡಿದ್ದ ಎರಡು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಆರಂಭಿಸಿದ್ದೆ. ಆ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಸಾಧ್ಯವಾಗಿತ್ತು. ಕಳೆದ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಗೆ ಶೇ 75.5 ಫಲಿತಾಂಶ ಬಂದಿದೆ. ಈ ವರ್ಷ 54 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಫಲಿತಾಂಶದಲ್ಲಿ ಸುಧಾರಣೆ ತರಲು ಪ್ರಯೋಗಾಲಯ ಸಹಕಾರಿಯಾಗಲಿದೆ ಎಂಬ ವಿಶ್ವಾಸವಿದೆ. ಶಿಕ್ಷಕ ಕೆ.ಟಿ. ಜಯಪ್ಪ ಅವರು ಸ್ವಯಂ ಆಸಕ್ತಿಯಿಂದ ಪ್ರಯೋಗಾಲಯ ಆರಂಭಿಸಿದ್ದಾರೆ. ಎಂ.ಸುರೇಶ್ ಮುಖ್ಯಶಿಕ್ಷಕ ಸರ್ಕಾರಿ ಪ್ರೌಢಶಾಲೆ (ಆರ್‌ಎಮ್‌ಎಸ್‌ಎ) ನಿಟುವಳ್ಳಿ
ಶಾಲೆಗೆ ಭೇಟಿ ನೀಡಿದ್ದ ಸಂದರ್ಭ ಶಿಕ್ಷಕರ ಕಾರ್ಯ ಚಟುವಟಿಕೆ ನೋಡಿ ಸಂತೋಷವಾಯಿತು. ಬಡಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಲಿ ಎಂದು ಕೈಲಾದ ನೆರವು ನೀಡಿದ್ದೇನೆ.ಕೆ.ಬಿ.ಕೊಟ್ರೇಶ್, ಅಧ್ಯಕ್ಷರು, ಎ.ಕೆ.ಫೌಂಡೇಷನ್
ಗಣಿತ ಪಠ್ಯದಲ್ಲಿ ಬರುವ ವೃತ್ತಗಳ ಮೂಲ ಪರಿಕಲ್ಪನೆಗಳು ಪ್ರಮೇಯ ಸೂತ್ರಗಳನ್ನು ಪಾಠೋಪಕರಣಗಳ ಸಹಾಯದಿಂದ ಸುಲಭವಾಗಿ ಮನದಟ್ಟು ಮಾಡಿಕೊಂಡಿರುವೆ.ಯಶುವರ್ಧನ್ ಆರ್., ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.