ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು

ಸಿಎಸ್‌ಆರ್‌ ಅನುದಾನದಲ್ಲಿ ನೀಡಿದ ಪೀಠೋಪಕರಣ ವೀಕ್ಷಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ
Last Updated 28 ಜನವರಿ 2020, 15:25 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬ ಅಪೇಕ್ಷೆ ಇದೆ. ಮುಂದಿನ ಬಜೆಟ್‌ನಲ್ಲಿ ಇದನ್ನು ಘೋಷಿಸಲು ಒತ್ತಡ ತರಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಸಂಸದರ ಶಿಫಾರಸ್ಸಿನ ಮೇರೆಗೆ ಬೆಂಗಳೂರು ಬನ್ನೇರುಘಟ್ಟದ ಅಪೊಲೋ ಹಾಸ್ಪಿಟಲ್‌ ಎಂಟರ್‌ಪ್ರೈಸಸ್‌ನವರು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ನೀಡಿದ ₹ 15 ಲಕ್ಷ ವೆಚ್ಚದ ಪೀಠೋಪಕರಣಗಳನ್ನು ಚಿಗಟೇರಿ ಆಸ್ಪತ್ರೆಗೆ ನೀಡಲಾಗಿದ್ದು, ಅವುಗಳನ್ನು ವೀಕ್ಷಿಸಿ, ವಾರ್ಡ್‌ಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.

ಆಸ್ಪತ್ರೆಯು 30 ಎಕರೆ ಜಮೀನು ಹೊಂದಿದೆ. ಈ ಜಮೀನಿನಲ್ಲಿ ಬೋಧನಾ ಕೊಠಡಿಗಳನ್ನು ಎಲ್ಲಿ ನಿರ್ಮಿಸುವುದು ಎಂದು ನಿರ್ಧರಿಸಬೇಕು ಎಂದು ಜಿಲ್ಲಾ ಸರ್ಜನ್‌ಗೆ ಸೂಚನೆ ನೀಡಿದರು.

ಐಸಿಯು, ಜನರಲ್‌ ವಾರ್ಡ್‌ಗಳನ್ನು ವೀಕ್ಷಣೆ ಮಾಡಿದಾಗ ಆಸ್ಪತ್ರೆಯು ಹಿಂದಿಗಿಂತ ಸುಧಾರಣೆಯಾಗಿರುವುದು ಕಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

₹ 7.5 ಕೋಟಿಯಲ್ಲಿ ಆಸ್ಪತ್ರೆಯ ಎರಡು ಘಟಕಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿವೆ. ಉಳಿದ ಕಡೆ ಸುಣ್ಣಬಣ್ಣ ಇಲ್ಲದೇ ಸಿಮೆಂಟ್‌ ಬೀಳುತ್ತಿದೆ. ದುರಸ್ತಿಯ ಅಗತ್ಯ ಇದೆ. ದುರಸ್ತಿ ಮಾಡಲು, ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು, ಸಿಬ್ಬಂದಿ ಕೊರತೆ ನೀಗಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಆರೋಗ್ಯ ಮಂತ್ರಿ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

₹ 11.71 ಲಕ್ಷದಲ್ಲಿ ಕೆರೆಗಳ ಅಭಿವೃದ್ಧಿ: ದೂಡಾ ಮೂಲಕ ಬಾತಿ ಕೆರೆಯನ್ನು ₹ 7.32 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ₹ 1.58 ಕೋಟಿಯಲ್ಲಿ ಟಿ.ವಿ. ಸ್ಟೇಷನ್‌ ಕೆರೆ, ₹ 2.15 ಲೋಟಿಯಲ್ಲಿ ಆವರಗೆರೆ ಕೆರೆ, ₹ 31 ಲಕ್ಷದಲ್ಲಿ ನಾಗನೂರು ಕೆರೆ ಹಾಗೂ ₹ 35 ಲಕ್ಷದಲ್ಲಿ ಹೊನ್ನೂರು ಕೆರೆ ಅಭಿವೃದ್ಧಿ ಮಾಡಲು ಯೋಜನೆ ತಯಾರಿಸಲಾಗಿದೆ. ಎಲ್ಲ ಕೆರೆಗಳನ್ನು ಪ್ರವಾಸಿ ಕೇಂದ್ರಗಳಾಗಿ ಪರಿವರ್ತಿಸುವುದು ಇದರ ಉದ್ದೇಶ ಎಂದು ಮಾಹಿತಿ ನೀಡಿದರು.

ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಹನಗವಾಡಿ ವೀರೇಶ್‌, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಶಾಸಕ ಬಿ.ಪಿ. ಹರೀಶ್‌, ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ. ನಾಗರಾಜ್‌ ಅವರೂ ಇದ್ದರು.

‘ವಿಧಾನ ಪರಿಷತ್ತಿಗೆ ನಾಲ್ವರು ಆಕಾಂಕ್ಷಿಗಳು’
ಮುಂದೆ ಬರಲಿರುವ ವಿಧಾನ ಪರಿಷತ್ತಿನ ಚುನಾವಣೆಗೆ ಸದ್ಯಕ್ಕೆ ಡಾ. ಮಂಜುನಾಥ ಗೌಡ, ಜಯಪ್ರಕಾಶ್‌ ಕೊಂಡಜ್ಜಿ, ಸುರೇಶ್‌, ಎಚ್‌.ಎನ್. ಶಿವಕುಮಾರ್ ಆಕಾಂಕ್ಷಿಗಳಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಯಶವಂತರಾವ್‌ ಜಾಧವ್‌ ಅವರನ್ನು ವಿಧಾನಸಭೆಗೆ ಕಳುಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿಮಾನ ನಿಲ್ದಾಣ ಮಾಡಲಾಗುವುದು ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದೆ. ರಾಜ್ಯ ಸರ್ಕಾರ ಭೂಮಿ ಸ್ವಾಧೀನ ಪಡಿಸಿ ನೀಡಿದರೆ ವಿಮಾಣ ನಿಲ್ದಾಣ ಮಂಜೂರು ಮಾಡಿಸುತ್ತಿದ್ದೆ. ಹಿಂದಿನ ಸರ್ಕಾರ ಸ್ಪಂದಿಸಲಿಲ್ಲ. ಈಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದಿದ್ದು, 1,000 ಎಕರೆ ಭೂಮಿ ಸ್ವಾಧೀನಪಡಿಸಿ ನೀಡಿದರೆ ವಿಮಾನ ನಿಲ್ದಾಣ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT