ಹರಿಹರದಲ್ಲಿ ಮೆಡಿಕಲ್ ಕಾಲೇಜು ಕಷ್ಟ: ಸಚಿವ ಬೈರತಿ ಬಸವರಾಜ

ಹರಿಹರ: ‘ಇಂಡಿಯನ್ ಮೆಡಿಕಲ್ ಕೌನ್ಸಿಲ್ (ಐಎಂಸಿ) ನಿಯಮಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇರುವುದರಿಂದ ಹರಿಹರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡುವುದು ಕಷ್ಟ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.
ಕಾಗಿನೆಲೆಯ ಬೆಳ್ಳೊಡಿ ಶಾಖಾ ಮಠದಲ್ಲಿ ತಾಲ್ಲೂಕಿನ ವಿವಿಧ ಮಠದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಮೆಡಿಕಲ್ ಕಾಲೇಜು ಸ್ಥಾಪಿಸಲು ಕನಿಷ್ಠ 1000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹಲವು ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿರಬೇಕು. ಆ ಆಸ್ಪತ್ರೆಯಲ್ಲಿ ಎಲ್ಲಾ ವಿಧವಾದ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಸೌಲಭ್ಯಗಳಿರಬೇಕು. ಐಎಂಸಿ ನಿಯಮ ಬಿಗಿಯಾಗಿವೆ. ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಮುಖ್ಯಮಂತ್ರಿಗೆ ಒತ್ತಡವನ್ನು ಹೇರುತ್ತಿದ್ದೇವೆ. ಜಿಲ್ಲೆಯಲ್ಲಿ ಒಂದು ಮೆಡಿಕಲ್ ಕಾಲೇಜು ಆರಂಭಗೊಳ್ಳಬೇಕು. ಜನರಿಗೆ ಹೊರೆಯಾಗಬಾರದು ಎಂಬ ಉದ್ದೇಶ ನಮಗಿದೆ’ ಎಂದು ಹೇಳಿದರು.
‘ಈಗ ರಾಜ್ಯದಲ್ಲಿ ಸರ್ಕಾರ ಆರಂಭಿಸುವ ಸರ್ಕಾರಿ ಮೆಡಿಕಲ್ ಕಾಲೇಜುಗಳು ಖಾಸಗಿ ಸಹಭಾಗಿತ್ವದಲ್ಲಿ ಇರುತ್ತವೆ. ಒಂದು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಕನಿಷ್ಠ ₹ 400 ಕೋಟಿ ಬಂಡವಾಳ ಹೂಡಬೇಕಾಗುತ್ತದೆ. ಈಗಾಗಲೇ ಚಿತ್ರದುರ್ಗದಲ್ಲಿ ಮಂಜೂರಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬಂಡವಾಳ ಹೂಡುವವರ ಕೊರತೆ ಎದುರಾಗಿದೆ’ ಎಂದು ಸಚಿವರು ಹೇಳಿದರು.
ಈಗಾಗಲೇ ಜಿಲ್ಲೆಯ ಸಿಜಿ ಆಸ್ಪತ್ರೆಗೆ ಜಯದೇವ ಹೃದ್ರಾಲಯದ ಘಟಕ ಆಸ್ಪತ್ರೆಯಾಗಿ 50 ಹಾಸಿಗೆಗೆ ಶಿಫಾರಸ್ಸು ಮಾಡಲಾಗಿದೆ. ಇದರ ಜೊತೆಗೆ ಇನ್ನೂ 50 ಹಾಸಿಗೆಯ ಘಟಕವನ್ನು ಹರಿಹರಕ್ಕೆ ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಹೋರಾಟ ಸಮಿತಿಯ ಪರವಾಗಿ ಶಿವಪ್ರಕಾಶ್ ಶಾಸ್ತ್ರಿ ಮಾತನಾಡಿ, ‘ಕಿರ್ಲೋಸ್ಕರ್ ಕಾರ್ಖಾನೆ ಮುಚ್ಚಿದ ನಂತರ ಹರಿಹರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಬೆಳೆಯುವ ಸಾಮರ್ಥ್ಯ ಇರುವ ಹರಿಹರಕ್ಕೆ ಒಂದು ಚಿಮ್ಮುವ ಹಲಗೆಯ ಅಗತ್ಯವಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಹರಿಹರದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದು ತಿಳಿಸಿದರು.
ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ನಂದಿಗುಡಿ ಮಠದ ವೃಷಭಪುರಿ ಸ್ವಾಮೀಜಿ, ವೇಮನ ಮಠದ ವೇಮಾನಾನಂದ ಸ್ವಾಮೀಜಿ, ಮೌಲಾನ ಷಂಶುದ್ದಿನ್, ಆಂಥೋನಿ ಪೀಟರ್, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ, ಹೋರಾಟಗಾರರಾದ ಎಚ್.ಕೆ. ಕೊಟ್ರಪ್ಪ, ಎಚ್.ನಿಜಗುಣ, ಎಂ.ನಾಗೇಂದ್ರಪ್ಪ, ಶ್ರೀನಿವಾಸ್, ಬಿ.ಕೆ ಸೈಯದ್ ರೆಹಮಾನ್, ಬಿ.ರೇವಣಸಿದ್ದಪ್ಪ, ಸಿ.ಎನ್ ಹುಲಿಗೇಶ್, ಪೂಜಾರ್ ಚಂದ್ರಶೇಖರ್, ಬೆಳ್ಳೂಡಿ ರಾಮಚಮದ್ರಪ್ಪ, ನಾಗರಾಜ್ ಮೆಹರ್ವಾಡೆ, ಮರಿಯೋಜಿರಾವ್, ಕೃಷ್ಣಮೂರ್ತಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.