ಮಂಗಳವಾರ, ಮಾರ್ಚ್ 2, 2021
31 °C
ಉತ್ತಮ ಪ್ರಜಾಕೀಯ ಪಕ್ಷದಿಂದ 28 ಕ್ಷೇತ್ರಗಳಲ್ಲೂ ಸ್ಪರ್ಧೆ: ಉಪೇಂದ್ರ

ಮಧ್ಯವರ್ತಿ ಇಲ್ಲದ ರಾಜಕೀಯ ವ್ಯವಸ್ಥೆ ಬರಲಿ: ಉಪೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮತದಾರರು ಮತ್ತು ಅಭ್ಯರ್ಥಿ ನಡುವೆ ಮಧ್ಯವರ್ತಿ ಇಲ್ಲದ ರಾಜಕೀಯ ವ್ಯವಸ್ಥೆ ಬರಬೇಕು. ಜಾತಿ–ಹಣಕ್ಕೆ ಮಹತ್ವ ನೀಡದೆ, ಸಮಾಜಕ್ಕಾಗಿ ಕೆಲಸ ಮಾಡುವ ಬಗ್ಗೆ ಅವರಲ್ಲಿರುವ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸ್ಪಷ್ಟಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು, ‘ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಜನರ ಸಹಭಾಗಿತ್ವವೂ ಮುಖ್ಯವಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಪ್ರಶ್ನಾವಳಿ ರೂಪಿಸಲಾಗಿದೆ. ಇದರಲ್ಲಿ ಉತ್ತಮವಾಗಿರುವವರ ವಿಚಾರವನ್ನು ಜನರ ಮುಂದಿಟ್ಟು ಚರ್ಚಿಸಿ, ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ನೀಡುವ ಪ್ರಣಾಳಿಕೆಯನ್ನು ಪರಿಷ್ಕರಿಸಿ ಪಕ್ಷದ ಪ್ರಣಾಳಿಕೆ ರೂಪಿಸಲಾಗುವುದು’ ಎಂದರು.

‘ಸೆಲೆಕ್ಷನ್‌ (ಆಯ್ಕೆ), ಎಲೆಕ್ಷನ್‌ (ಚುನಾವಣೆ), ಕರೆಕ್ಷನ್‌ (ತಿದ್ದುವುದು), ರಿಜೆಕ್ಷನ್‌ (ತಿರಸ್ಕರಿಸುವುದು), ಪ್ರಮೋಷನ್‌ (ಬಡ್ತಿ) ಎಂಬ ಪಂಚ ತತ್ವಗಳ ಅಡಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಯಾವ ರೀತಿ ಕೆಲಸ ಮಾಡುವ ದೂರದೃಷ್ಟಿ ಹೊಂದಿದ್ದಾನೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಬಳಿಕ ಅಭ್ಯರ್ಥಿ ನುಡಿದಂತೆ ನಡೆದುಕೊಳ್ಳದಿದ್ದರೆ, ಪಕ್ಷ ಹಾಗೂ ಜನರ ಮೂಲಕ ಅವರಿಗೆ ತಿಳಿಹೇಳಿ ತಿದ್ದುಕೊಳ್ಳಲು ಇನ್ನೊಂದು ಅವಕಾಶ ನೀಡಲಾಗುವುದು. ಆಗಲೂ ಸುಧಾರಿಸದಿದ್ದರೆ ಗೆದ್ದ ಅಭ್ಯರ್ಥಿಯನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು. ಚೆನ್ನಾಗಿ ಕೆಲಸ ಮಾಡಿದರೆ ಜನರೇ ಅವರನ್ನು ಮತ್ತೆ ಆಯ್ಕೆ ಮಾಡಿ ಪ್ರಮೋಷನ್‌ ಕೊಡುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಜನ ಭ್ರಷ್ಟರಾಗಿದ್ದಾರೆ ಎಂಬುದು ತಪ್ಪು. ನಾಯಕರು ಅವರನ್ನು ಭ್ರಷ್ಟರನ್ನಾಗಿ ಮಾಡಿದ್ದಾರೆ. ಶೇ 10ರಷ್ಟಾದರೂ ಜನ ಒಳ್ಳೆಯವರಿದ್ದಾರೆ. ಅವರನ್ನು ಯಾರಾದರೂ ಪ್ರತಿನಿಧಿಸುವುದು ಬೇಡವೇ? ಜನರೇ ಸರಿ ಇಲ್ಲ ಎಂಬುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ಏಕೆ ಇರಬೇಕು’ ಎಂದು ಪ್ರಶ್ನಿಸಿದರು.

‘ನಮ್ಮ ಪಕ್ಷದಿಂದ ಯಾವುದೇ ರೀತಿಯಲ್ಲಿ ಹಣ ಸಂಗ್ರಹಿಸುವುದಿಲ್ಲ. ಪಕ್ಷದ ಸಂಘಟನೆ ನಮಗೆ ಮುಖ್ಯವಲ್ಲ. ಜನರಲ್ಲಿರುವ ವಿಚಾರಗಳನ್ನು ಮುಂಚೂಣಿಯಲ್ಲಿಟ್ಟುಕೊಂಡು ಸ್ಪರ್ಧಿಸುತ್ತೇವೆ’ ಎಂದರು.

‘ಸದ್ಯ ಕೆಲವು ಸಿನಿಮಾಗಳ ಕೆಲಸವನ್ನು ಒಪ್ಪಿಕೊಂಡಿದ್ದೇನೆ. ಚುನಾವಣೆಗೆ ಸ್ಪರ್ಧಿಸುವುದಾದರೆ ಸಿನಿಮಾ ರಂಗವನ್ನು ಬಿಟ್ಟು ರಾಜಕೀಯ ರಂಗಕ್ಕೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದೇವರಾಜ ಅರಸು, ಬಿ.ಎಸ್‌.ಯಡಿಯೂರಪ್ಪ ಅವರಂಥವರು ಹೊಸ ಪಕ್ಷವನ್ನು ಕಟ್ಟಿದರೂ ಯಾವುದೇ ಪರಿಣಾಮ ಬೀರಿಲ್ಲ. ಇಂಥ ಸಂದರ್ಭದಲ್ಲಿ ನಿಮ್ಮದೂ ಅದೇ ಸ್ಥಿತಿ ಆಗುವುದಿಲ್ಲವೇ’ ಎಂಬ ಪ್ರಶ್ನೆಗೆ, ‘ಕೆಲವರು ನಮ್ಮನ್ನು ಯಾವುದೋ ಪಕ್ಷದ ‘ಬಿ’, ‘ಸಿ’ ತಂಡ ಎಂದು ಕರೆಯಬಹುದು. ನಮ್ಮಲ್ಲಿ ಅಮೆರಿಕದಂತೆ ಎರಡು ಪಕ್ಷಗಳ ವ್ಯವಸ್ಥೆ ಇಲ್ಲ. ಸಂವಿಧಾನ ಎಲ್ಲರಿಗೂ ಮುಕ್ತ ಅವಕಾಶ ನೀಡಿದೆ. ನಮ್ಮ ಪಕ್ಷ ಸ್ಪರ್ಧಿಸುವುದರಿಂದ ಮತ್ತೊಂದು ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಲೆಕ್ಕಹಾಕಿದರೆ ಮತ್ತೆ ಹಳೆಯ ರಾಜನೇ ಗೆಲ್ಲಬೇಕು ಎಂದುಕೊಂಡಂತಾಗುತ್ತದೆ. ನಮಗೆ ರಾಜನ ಗೆಲುವಿಗಿಂತ ಪ್ರಜೆಗಳ ಗೆಲುವು ಮುಖ್ಯ’ ಎಂದು ಉಪೇಂದ್ರ ಪ್ರತಿಪಾದಿಸಿದರು.

‘ಬಹುಮತ ಸಿಗುವವರೆಗೂ ಅಧಿಕಾರದಿಂದ ದೂರ’

‘ಪಕ್ಷಕ್ಕೆ ಬಹುಮತ ಸಿಗುವವರೆಗೂ ಅಧಿಕಾರದಿಂದ ದೂರ ಉಳಿಯುವ ಬಗ್ಗೆ ಪಕ್ಷ ನಿರ್ಧಾರ ಕೈಗೊಂಡಿದೆ’ ಎಂದು ಉಪೇಂದ್ರ ಸ್ಪಷ್ಟಪಡಿಸಿದರು.

‘ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ ನಿಮ್ಮ ಪಕ್ಷದ ಗೆದ್ದ ಅಭ್ಯರ್ಥಿಗಳು ಯಾವ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ’ ಎಂಬ ಪ್ರಶ್ನೆಗೆ, ‘ಸಮ್ಮಿಶ್ರ ಸರ್ಕಾರ ರಚಿಸುವಂತಹ ಸಂದರ್ಭ ಬಂದರೆ ನಮ್ಮ ಸಮಾಜಮುಖಿ ವಿಚಾರಗಳನ್ನು ಮುಂದಿಡುತ್ತೇವೆ. ಯಾವ ಪಕ್ಷ ಇದನ್ನು ಈಡೇರಿಸುವ ಬದ್ಧತೆಯನ್ನು ತೋರಿಸುತ್ತದೆಯೋ ಅವರಿಗೆ ಸರ್ಕಾರ ರಚಿಸಲು ಬಾಹ್ಯ ಬೆಂಬಲ ನೀಡುತ್ತೇವೆ. ಸರ್ಕಾರದ ಭಾಗವಾದರೆ ಅವರನ್ನು ಪ್ರಶ್ನಿಸಲು ಆಗುವುದಿಲ್ಲ. ಬಾಹ್ಯ ಬೆಂಬಲ ನೀಡಿದರೆ ವಿರೋಧ ಪಕ್ಷದಂತೆ ಸ್ವತಂತ್ರವಾಗಿದ್ದು, ಸಮಾಜಮುಖಿ ಕೆಲಸಗಳನ್ನು ಮಾಡಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು