ಸೋಮವಾರ, ಸೆಪ್ಟೆಂಬರ್ 20, 2021
27 °C

ದಲ್ಲಾಳಿಗಳು ಸಮರ್ಪಕವಾಗಿ ತೆರಿಗೆ ಪಾವತಿಸಲಿ: ಬಾಲಕೃಷ್ಣನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಸುವ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಪ್ರಾಮಾಣಿಕವಾಗಿ ಆದಾಯ ತೆರಿಗೆ ಪಾವತಿಸಿ, ಸಮರ್ಪಕವಾಗಿ ರಿಟರ್ನ್‌ ಫೈಲ್‌ ಮಾಡಬೇಕು’ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌. ಬಾಲಕೃಷ್ಣನ್‌ ಮನವಿ ಮಾಡಿದರು.

ನಗರದ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿರುವ ಆದಾಯ ತೆರಿಗೆ ಇಲಾಖೆಯ ನಿವೇಶನದಲ್ಲಿ ಬುಧವಾರ ಸಸಿ ನೆಟ್ಟ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ದಾವಣಗೆರೆ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇಲ್ಲಿ ಕೃಷಿ ಆಧಾರಿತ ವ್ಯಾಪಾರಿಗಳು, ದಲ್ಲಾಳಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತೆರಿಗೆ ಪಾವತಿಸುವುದು ಪ್ರತಿಯೊಬ್ಬರ ಕರ್ತವ್ಯ. ಜೊತೆಗೆ ಇಂದಿನ ಆಧುನಿಕ ಆರ್ಥಿಕತೆಯ ಭಾಗವಾಗಿರುವ ಕ್ರೆಡಿಟ್‌ ಕಾರ್ಡ್‌, ಸಾಲ ಸೌಲಭ್ಯಗಳನ್ನು ಪಡೆಯಲು ತೆರಿಗೆ ಪಾವತಿಸಿ, ರಿಟರ್ನ್‌ ಫೈಲ್‌ ಮಾಡುವುದು ಅತ್ಯಗತ್ಯವಾಗಿದೆ. ಆರ್ಥಿಕ ಸದೃಢತೆಯನ್ನೂ ಇದು ಬಿಂಬಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಬೇಕು’ ಎಂದು ಹೇಳಿದರು.

‘ದಾವಣಗೆರೆ ಶೈಕ್ಷಣಿಕ ಕೇಂದ್ರವೂ ಆಗಿದೆ. ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮಾಡಿಕೊಳ್ಳಬೇಕು. ಆದರೆ, ಸಣ್ಣ ಶಾಲೆ– ಕಾಲೇಜುಗಳಲ್ಲಿ ಟಿಡಿಎಸ್‌ ಕಡಿತಗೊಳಿಸುತ್ತಿಲ್ಲ. ಸರಿಯಾದ ಸಮಯದಲ್ಲಿ ಟಿಡಿಎಸ್‌ ಹಣ ಪಾವತಿಸುತ್ತಿಲ್ಲ. ಈ ರೀತಿ ಮಾಡುವುದರಿಂದ ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ದಂಡ ಹಾಗೂ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಬಗ್ಗೆ ತಿಳಿವಳಿಕೆ ಮೂಡಿಸಲು ಆಗಾಗ ಕಾರ್ಯಾಗಾರವನ್ನೂ ನಡೆಸಲಾಗುವುದು’ ಎಂದು ಬಾಲಕೃಷ್ಣನ್‌ ತಿಳಿಸಿದರು.

‘ಇತ್ತೀಚೆಗೆ ಕರ್ನಾಟಕ–ಗೋವಾ ವಲಯಕ್ಕೆ ಸಂಬಂಧಿಸಿದಂತೆ www.incometaxbengaluru.org ಎಂಬ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲಾಗಿದೆ. ನಾಗರಿಕರು ಇದರಲ್ಲೇ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ಇಲಾಖೆಯ ಹೊಸ ಕಟ್ಟಡ ನಿರ್ಮಿಸಲು ಸಂಬಂಧಪಟ್ಟ ತಜ್ಞರಿಂದ ಎರಡು ತಿಂಗಳ ಒಳಗೆ ಸಮಗ್ರ ಯೋಜನೆ ರೂಪಿಸುತ್ತೇವೆ. ಮೂರ್ನಾಲ್ಕು ತಿಂಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ದಾವಣಗೆರೆಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಗೋಲಿ ಶ್ರೀನಿವಾಸ್‌ ರಾವ್‌, ಆದಾಯ ತೆರಿಗೆ ಆಯುಕ್ತ (ಆಡಳಿತ) ಬಿ.ಕೆ. ಸಿಂಗ್‌, ದಾವಣಗೆರೆ ವಲಯ–1ರ ಹೆಚ್ಚುವರಿ ಆಯುಕ್ತ ಡಾ. ಜಿ. ಮನೋಜ್‌ ಕುಮಾರ್‌, ವಲಯ–2ರ ಹೆಚ್ಚುವರಿ ಆಯುಕ್ತ ಸುನೀಲ್‌ ಕುಮಾರ್‌ ಅಗರವಾಲ್‌, ಆದಾಯ ತೆರಿಗೆ ಅಧಿಕಾರಿ ಎಸ್‌. ಭಾಸ್ಕರ್‌ ಅವರೂ ಇದ್ದರು.

‘ಐಟಿ ಇಲಾಖೆ ಸೇರಿ’

‘ಇಲಾಖೆಯಲ್ಲಿ ಶೇ 50ರಷ್ಟು ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 1,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದವರು ತೀರಾ ಕಡಿಮೆ ಪ್ರಮಾಣದಲ್ಲಿ ಇಲಾಖೆಗೆ ಸೇರುತ್ತಿದ್ದಾರೆ. ಇಲಾಖೆಗೆ ಸೇರಿ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಯುಪಿಎಸ್‌ಸಿ ಅಥವಾ ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆ ತೆಗೆದುಕೊಂಡು ಆದಾಯ ತೆರಿಗೆ ಇಲಾಖೆಗೆ ಸೇರಲು ಮುಂದೆ ಬರಬೇಕು’ ಎಂದು ಬಿ.ಆರ್‌. ಬಾಲಕೃಷ್ಣನ್‌ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು