ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್‌ ಝೋನ್‌ ಸಂಪೂರ್ಣ ಸೀಲ್‌ಡೌನ್‌ಗೆ ಸೂಚನೆ

ನಗರದಿಂದ ಹಳ್ಳಿಗೆ ಹೋಗಲು ಅವಕಾಶವಿಲ್ಲ: ಸಚಿವ ಬೈರತಿ ಬಸವರಾಜ
Last Updated 5 ಮೇ 2020, 12:37 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾ ಸೋಂಕು ಕಾಣಿಸಿಕೊಂಡ ಪ್ರದೇಶವನ್ನು ರೆಡ್‌ ಝೋನ್‌ ಮಾಡಿ, ಆ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಬೇಕು. ಯಾವುದೇ ಕಾರಣಕ್ಕೂ ಅಲ್ಲಿ ಜನ ಓಡಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ನಗರದಿಂದ ಹಳ್ಳಿಗೆ ಯಾರೂ ಹೋಗುದಂತೆ ನಿರ್ಬಂಧ ಹೇರಬೇಕು. ಅದೇ ರೀತಿ ಗ್ರಾಮೀಣ ಭಾಗದ ನಾಗರಿಕರೂ ದಾವಣಗೆರೆ ನಗರವನ್ನು ಪ್ರವೇಶಿಸುವುದನ್ನು ತಡೆಯಬೇಕು ಎಂದು ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ. ಕೊರೊನಾ ಕಡಿಮೆಯಾಗುವವರೆಗೂ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೂ ನಿರ್ಬಂಧ ಹೇರಿದ್ದೇವೆ’ ಎಂದು ತಿಳಿಸಿದರು.

‘ದಾವಣಗೆರೆಯಲ್ಲಿ ಇದುವರೆಗೆ 32 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಸಂಬಂಧಿಗಳ ಮಾದರಿಗಳ ವರದಿ ಇನ್ನೂ ಬರಬೇಕಾಗಿದೆ. ಇನ್ನಷ್ಟು ಪ್ರಕರಣಗಳು ಕಂಡುಬರಬಹುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ’ ಎಂದರು.

‘ಕಳೆದ ಬಾರಿ ನಾನು ಬಂದಿದ್ದಾಗ ಹೊಸ ಪ್ರಕರಣ ಕಾಣಿಸಿಕೊಳ್ಳದೇ ಇರುವುದರಿಂದ ಜಿಲ್ಲೆಯನ್ನು ಗ್ರೀನ್‌ ಝೋನ್‌ಗೆ ಸೇರಿಸಬೇಕು ಎಂದು ನಾಗರಿಕರು ಮನವಿ ಮಾಡಿದ್ದರು. ಆದರೆ, ನಂತರ ಏಕಾಏಕಿ ಹಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಆಘಾತವನ್ನು ಉಂಟುಮಾಡಿದೆ. ಜಿಲ್ಲಾಧಿಕಾರಿ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ದಿನನಿತ್ಯದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇನೆ’ ಎಂದು ಸಚಿವರು ಹೇಳಿದರು.

‘ಜಿಲ್ಲಾಡಳಿತ ನೀಡಿರುವ ಸೂಚನೆಯನ್ನು ಜನ ಕಟ್ಟುನಿಟ್ಟಿನಿಂದ ಪಾಲಿಸಬೇಕು. ಸುಳ್ಳು ಸುದ್ದಿಗೆ ಕಿವಿಗೊಡಬಾರದು. ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡುವುದನ್ನು ನಿಲ್ಲಿಸಬೇಕು. ಮಕ್ಕಳು ಮತ್ತು ವೃದ್ಧರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಬಂದಾಗ ಅವರಿಗೆ ಸರಿಯಾಗಿ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಸಚಿವರು ಮನವಿ ಮಾಡಿದರು.

‘ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಗರ್ಭಿಣಿಯರು ಸ್ಕ್ಯಾನಿಂಗ್‌ಗೆ ಕೋವಿಡ್‌ ರೋಗಿಗಳಿರುವ ಪಕ್ಕದ ಸಿ.ಜಿ ಆಸ್ಪತ್ರೆಗೆ ಬರಬೇಕಾಗುತ್ತಿದ್ದು, ಸೋಂಕು ಹರಡುವ ಭೀತಿ ಇದೆ’ ಎಂದು ಸಚಿವರ ಗಮನಕ್ಕೆ ತಂದಾಗ, ‘ಈ ಬಗ್ಗೆ ಜಿಲ್ಲಾ ಸರ್ಜನ್‌ ಜೊತೆಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

‘ಕೋವಿಡ್‌ ರೋಗಿಗಳನ್ನು ಕೇವಲ ಸಿ.ಜಿ. ಆಸ್ಪತ್ರೆಯಲ್ಲಿ ಮಾತ್ರ ಏಕೆ ದಾಖಲಿಸಿಕೊಳ್ಳಲಾಗುತ್ತಿದೆ’ ಎಂಬ ಪ್ರಶ್ನೆಗೆ, ‘ಜಿಲ್ಲೆಯಲ್ಲಿ 28 ಕೋವಿಡ್‌ ರೋಗಿಗಳು ಮಾತ್ರ ಇದ್ದಾರೆ. ನಮ್ಮಲ್ಲಿ 110 ಬೆಡ್‌ಗಳ ಸಾಮರ್ಥ್ಯವಿದೆ. ಹೆಚ್ಚಿನ ರೋಗಿಗಳು ಕಂಡು ಬಂದರೆ ಎಸ್‌.ಎಸ್‌. ಆಸ್ಪತ್ರೆ ಜೊತೆಗೆ ಬಾಪೂಜಿ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ದಾಖಲಿಸಿಕೊಳ್ಳಲಾಗುವುದು’ ಎಂದು ಉತ್ತರಿಸಿದರು.

ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಟೈಫಂಡ್‌ ಸಿಗದಿರುವುದರಿಂದ ಮೌನ ಪ್ರತಿಭಟನೆ ನಡೆಸಿರುವ ಕುರಿತು ಗಮನ ಸೆಳೆದಾಗ, ‘ಇದು ಸರ್ಕಾರದ ಗಮನಕ್ಕೆ ಬಂದಿದೆ. ಆಡಳಿತ ಮಂಡಳಿಯೇ ವಿದ್ಯಾರ್ಥಿಗಳಿಗೆ ಸ್ಟೈಫಂಡ್‌ ಭರಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

‘ದಾವಣಗೆರೆ ನಗರದ ಜನರ ಆರೋಗ್ಯ ತಪಾಸಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸೂಚಿಸಿದ್ದೇನೆ. ಈಗಾಗಲೇ 63 ಸಾವಿರ ಜನರನ್ನು ಸಮೀಕ್ಷೆ ಮಾಡಲಾಗಿದೆ. ಯಾರಲ್ಲೂ ಕೋವಿಡ್‌ ರೋಗ ಲಕ್ಷಣ ಇರುವುದಿಲ್ಲ. ಇನ್ನೂ ರ‍್ಯಾಂಡಮ್‌ ಆಗಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ. ಎಸ್‌.ಎಸ್‌. ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಆರಂಭಿಸುತ್ತಿದ್ದಂತೆ ಎಲ್ಲಾ ತಾಲ್ಲೂಕುಗಳ ಜನರ ಪರೀಕ್ಷೆಗೂ ಒತ್ತು ನೀಡಲಾಗುವುದು’ ಎಂದು ಹೇಳಿದರು.

ಕ್ವಾರಂಟೈನ್‌ನಲ್ಲಿರುವವರನ್ನು ಸಂಬಂಧಿಕರು ಭೇಟಿ ಮಾಡುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದಾಗ, ‘ಕ್ವಾರಂಟೈನ್‌ನಲ್ಲಿರುವರಿಗೆ ಅಗತ್ಯವಿರುವ ಸೌಲಭ್ಯಗಳನ್ನೂ ಸರ್ಕಾರವೇ ಪೂರೈಸುತ್ತಿದೆ. ಊಟವನ್ನೂ ಸರ್ಕಾರವೇ ಒದಗಿಸುತ್ತದೆ. ಸರ್ಕಾರದ ಕಾನೂನನ್ನು ಎಲ್ಲರೂ ಪಾಲಿಸಲೇಬೇಕು’ ಎಂದು ತಿಳಿಸಿದರು.

‘ಮದ್ಯ ಖರೀದಿಗೆ ಹಳ್ಳಿಗೆ ಹೋಗುವುದನ್ನು ತಡೆಯಲು ಸೂಚಿಸಿದ್ದೇನೆ. ಅಂಗಡಿ ಮಾಲೀಕರು ನಿಯಮ ಪಾಲಿಸದೇ ಇದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ. ರವೀಂದ್ರನಾಥ, ಪ್ರೊ. ಎನ್‌. ಲಿಂಗಣ್ಣ, ಎಸ್‌.ವಿ. ರಾಮಚಂದ್ರ, ಮೇಯರ್‌ ಬಿ.ಜಿ. ಅಜಯಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಾ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಎಸ್‌.ಎಸ್‌. ಆಸ್ಪತ್ರೆಯಲ್ಲಿ ಕೊರೊನಾ ಲ್ಯಾಬ್‌

‘ನಗರದ ಎಸ್‌.ಎಸ್‌. ಆಸ್ಪತ್ರೆಗೆ ಎನ್‌.ಎ.ಬಿ.ಎಲ್‌. ಅಧಿಕಾರಿಗಳು ಬುಧವಾರ ಬಂದು ಪರಿಶೀಲಿಸಲಿದ್ದು, ಎರಡು–ಮೂರು ದಿನಗಳಲ್ಲೇ ಅಲ್ಲಿ ಕೊರೊನಾ ಪರೀಕ್ಷೆ ಪ್ರಯೋಗಾಲಯವನ್ನು ಆರಂಭಿಸಲಾಗುವುದು’ ಎಂದು ಬೈರತಿ ಬಸವರಾಜ ತಿಳಿಸಿದರು.

‘ಕೊರೊನಾ ಪರೀಕ್ಷೆಗೆ ಒಂದು ಪ್ರಯೋಗಾಲಯವನ್ನು ಸ್ಥಾಪಿಸಬೇಕು ಎಂದು ನಾವು ಚರ್ಚಿಸುತ್ತಿರುವಾಗಲೇ ದಾವಣಗೆರೆ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಒಳಗೊಳ್ಳುವಂತೆ ಲ್ಯಾಬ್‌ ಸ್ಥಾಪಿಸಲು ಕೇಂದ್ರ ಸರ್ಕಾರವೇ ಪ್ರಸ್ತಾವ ಇಟ್ಟಿದೆ. ಹೀಗಾಗಿ ಲ್ಯಾಬ್‌ ಆರಂಭಿಸಲು ವಿಳಂಬವಾಗಿದೆ. ದಾವಣಗೆರೆ ಜಿಲ್ಲೆಗೆ ಶಾಶ್ವತ ಆಸ್ತಿಯನ್ನಾಗಿ ಮಾಡಲು ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲೂ ಪ್ರಯೋಗಾಲಯ ಆರಂಭಿಸಲು ₹ 74 ಲಕ್ಷದ ಯೋಜನೆಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿ ಕಳುಹಿಸಿದ್ದಾರೆ. ಆಯುಕ್ತರು ಅನುಮೋದನೆ ನೀಡಿದ ಬಳಿಕ ಅಲ್ಲಿಯೂ ಆರಂಭಗೊಳ್ಳಲಿದೆ’ ಎಂದು ಸಚಿವರು ಮಾಹಿತಿ ನೀಡಿದರು.

ಆಕಸ್ಮಿಕವಾಗಿ ಬಂದ ಸೋಂಕು: ಬೈರತಿ

ದಾವಣಗೆರೆ: ‘ಸೋಂಕು ಆಕಸ್ಮಿಕವಾಗಿ ಕಾಣಿಸಿಕೊಂಡಿದೆ. ಇದನ್ನು ಯಾರೋ ಒಬ್ಬರು ತಂದಿದ್ದಲ್ಲ. ಇದು ತಿಳಿಯದೇ ಆಗಿರುವ ಕೆಲಸ. ಹೀಗಾಗಿ ಹೆಚ್ಚು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದೇನೆ’ ಎಂದು ಬೈರತಿ ಬಸವರಾಜ ಹೇಳಿದರು.

‘ಸೋಂಕು ಎಲ್ಲಿಂದ ಬಂತು ಎಂದು ಪತ್ತೆ ಮಾಡುವುದು ಕಷ್ಟದ ಕೆಲಸ. ಸೋಂಕಿತರೂ ಬಾಯಿ ಬಿಡಬೇಕು. ಈಗಾಗಲೇ ಸುಮಾರು 800 ಜನರನ್ನು ಕ್ವಾರಂಟೈನ್‌ನಲ್ಲಿ ಇಟ್ಟಿದ್ದೇವೆ. ನಾಳೆ ಅನಾಹುತ ಆಗಬಾರದು ಎಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ಸೋಂಕಿನ ಮೂಲದ ಕುರಿತ ಪ್ರಶ್ನೆಗೆ, ‘ಒಬ್ಬರು ಈರುಳ್ಳಿ ವ್ಯಾಪಾರಿ ಜೊತೆ ಬಾಗಲಕೋಟೆಯಿಂದ ಬಂದಾಗ ಸೋಂಕು ತಗುಲಿದೆ ಎಂಬ ಮಾಹಿತಿಯನ್ನು ಪೊಲೀಸ್‌ ವರಿಷ್ಠಾಧಿಕಾರಿ ಕಲೆ ಹಾಕಿದ್ದಾರೆ. ಇನ್ನೂ ನಾಲ್ಕು ಜನರ ವರದಿ ಬಂದಾಗ ಸೋಂಕು ಹೇಗೆ ತಗುಲಿತು ಎಂಬ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯ. ಸ್ಟಾಫ್‌ ನರ್ಸ್‌ನ ಕಡೆಯವರೂ ಬಾಗಲಕೋಟೆಗೆ ಹೋಗಿ ಬಂದಿದ್ದರು ಎಂಬ ಮಾಹಿತಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದರು.

‘ಜಿಲ್ಲಾಡಳಿತ ಹಳೆ ದಾವಣಗೆರೆ ಭಾಗದಲ್ಲಿ ಮೊದಲು ಸರಿಯಾಗಿ ನಿಗಾ ವಹಿಸಿಲ್ಲ. ಈಗ ಹೆಚ್ಚು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ’ ಎಂಬ ಪ್ರಶ್ನೆಗೆ, ‘ನಾನು ಉಸ್ತುವಾರಿ ಸಚಿವನಾದ ಬಳಿಕ 7ನೇ ಬಾರಿಗೆ ಜಿಲ್ಲೆಗೆ ಬರುತ್ತಿದ್ದೇನೆ. ಪ್ರತಿ ವಾರ ಜಿಲ್ಲೆಗೆ ಬಂದು ಹೋಗುತ್ತಿದ್ದೇನೆ. ಐದು ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಆಕಸ್ಮಿಕವಾಗಿ ಈ ವೈರಸ್‌ ಬಂದಿದೆ. ವೈರಸ್‌ ಕಣ್ಣಿಗೆ ಕಾಣಿಸಿಕೊಂಡಿದ್ದರೆ ಹೇಗಾದರೂ ಮಾಡಿ ತಡೆಗಟ್ಟಬಹುದಿತ್ತು. ಇದು ನಮ್ಮ ಕೈಯಲ್ಲಿ ಇಲ್ಲ. ಈಗ ಆಗಿ ಹೋಗಿದೆ. ಬೇರೆ ಕಡೆ ಹರಡದಂತೆ ತಡೆಯಬೇಕಾಗಿದೆ. ಕೆಲವು ಸಮುದಾಯದವರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದರಿಂದ ಜನ ಆತಂಕಗೊಂಡಿರಬಹುದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT