ಸೋಮವಾರ, ಜುಲೈ 4, 2022
22 °C
ಲೀಡ್‌ ಬ್ಯಾಂಕ್‌ನಿಂದ ಸಾಲ ಸಂಪರ್ಕ ಕಾರ್ಯಕ್ರಮ

ಸಾಲ ದುರ್ಬಳಕೆಯಿಂದ ಹದಗೆಡಲಿದೆ ಆರ್ಥಿಕ ಸ್ಥಿತಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಸಾಲ ತೆಗೆದುಕೊಳ್ಳುವಾಗ ಇರುವ ಹುರುಪು, ಹುಮ್ಮಸ್ಸು ಸಾಲ ತೀರಿಸುವಾಗ ಇರುವುದಿಲ್ಲ. ಸಾಲ ಪಡೆದುಕೊಳ್ಳುವವರ ಪೈಕಿ ಯಾರು ಅದರ ಸದ್ಬಳಕೆ ಮಾಡಿಕೊಂಡು ತೀರಿಸುತ್ತಾರೋ ಅವರು ಉನ್ನತ ಮಟ್ಟದಲ್ಲಿ ಬೆಳೆಯುತ್ತಾರೆ. ಸಾಲದ ಉದ್ದೇಶ ಮರೆತು ಹಣ ವ್ಯಯ ಮಾಡುತ್ತಾರೋ ಅವರು ದಿವಾಳಿಯಾಗುವ ಜೊತೆಗೆ ಕುಟುಂಬ ಮತ್ತು ದೇಶದ ಸ್ಥಿತಿಯನ್ನೂ ಹದಗೆಡಿಸುತ್ತಾರೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

ಸ್ವಾಂತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ, ಜಿಲ್ಲಾ ಮಟ್ಟದ ಲೀಡ್ ಬ್ಯಾಂಕ್ ಕಚೇರಿ ಸಹಯೋಗದಲ್ಲ್ಲಿ ನಗರದ ತೊಗಟವೀರ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಆರ್ಥಿಕ ಪರಿಸ್ಥಿತಿ ಕೋವಿಡ್ ಸಂಕಷ್ಟದ ಬಳಿಕ ಇತ್ತೀಚೆಗೆ ಸುಧಾರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾಗರಿಕರೂ ಸಹಕಾರ ನೀಡಬೇಕು. ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮರುಪಾವತಿಸಬೇಕು. ದೇಶದ ಅಭಿವೃದ್ಧಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜವಾಬ್ದಾರಿಯೂ ಆಗಿದೆ. ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ₹ 250 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್‌, ‘ಸಾಲ ಪಡೆದು ಸಾವನ್ನಪ್ಪಿದರೆ ಅದು ಅವರ ಮಕ್ಕಳಿಗೆ ಮುಂದುವರಿಯುವ ಪದ್ಧತಿ ಪಾರಂಪರಿಕವಾಗಿ ಬಂದಿದ್ದರಿಂದ ರೈತರು ಸಾಲದಲ್ಲೇ ಹುಟ್ಟಿ, ಬೆಳೆದು, ಸಾವನ್ನಪ್ಪುತ್ತಿದ್ದಾರೆ. ಆರ್ಥಿಕ ಸುಧಾರಣೆಯೊಂದಿಗೆ ಬ್ಯಾಂಕ್‌ಗಳ ಸುಧಾರಣೆ ಕುರಿತು ಹೆಚ್ಚು ಚರ್ಚೆಗಳಾಗುತ್ತಿದ್ದು, ಸಾಕಷ್ಟು ಸುಧಾರಣೆಯಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಬ್ಯಾಂಕ್‌ಗಳ ಕೊಡುಗೆ ಅಪಾರವಾಗಿದೆ’ ಎಂದರು.

‘ಭಾರತದಲ್ಲಿ ಶತಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಅನೇಕರಿಗೆ ಬ್ಯಾಂಕಿನಿಂದ ಸಾಲ ಸಿಗದ ಸ್ಥಿತಿ ಇದೆ. ಅಮೆರಿಕದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ರೀಚ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಷ್ಟ್ರ ಮತ್ತು ಸ್ಥಳೀಯ ಮಟ್ಟದಲ್ಲಿ ಬದಲಾವಣೆ ತರುವ ಮೂಲಕ ಸಾಮಾನ್ಯ ಜನರಿಗೆ ಸಾಲ ನೀಡಲು ಅನುಕೂಲವಾಗುವ ಎಲ್ಲಾ ಪ್ರಯತ್ನಗಳ ಕುರಿತು ಹಿರಿಯ ತಜ್ಞರೊಂದಿಗೆ ಚರ್ಚಿಸಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ನಮ್ಮ ದೇಶದಲ್ಲೂ ಕಟ್ಟ ಕಡೆಯ ವ್ಯಕ್ತಿಗೂ ಸಾಲ ಕೊಡುವಲ್ಲಿ ಎಲ್ಲಾ ಬ್ಯಾಂಕ್‌ಗಳು ಪ್ರಯತ್ನಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ಎಚ್.ರಘುರಾಜ, ‘ಗ್ರಾಹಕರಿಗೆ ಬ್ಯಾಂಕಿನಲ್ಲಿರುವ ಸಾಲಸೌಲಭ್ಯ, ಸರ್ಕಾರಿ ಯೋಜನೆಗಳಿಗೆ ದೊರೆಯುವ ಸಾಲಗಳ ಮಾಹಿತಿ ತಿಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳು, ವಿವಿಧ ಸ್ವಯಂ ಉದ್ಯೋಗಾಧಾರಿತ ತರಬೇತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂಧಕ ನಾಗೇಶ್ ಪ್ರಭು, ‘ಕಾನೂನು ಬದ್ಧವಾಗಿ ಮಾಡುವ ಎಲ್ಲಾ ಚಟುವಟಿಕೆಗಳಿಗೆ ಹಾಗೂ ಮೂಲಸೌಲಭ್ಯಗಳಿಗೆ ಸಾಲ ನೀಡಲಾಗುವುದು. ಸಾರ್ವಜನಿಕರು ಸಾಲವನ್ನು ಮರುಪಾವತಿಸುವ ಮೂಲಕ ಎಲ್ಲಾ ಬ್ಯಾಂಕ್‌ಗಳನ್ನು ಬೆಳೆಸಬೇಕು’ ಎಂದರು.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಯೂನಿಯನ್ ಬ್ಯಾಂಕ್, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ ಸೇರಿ ಹಲವು ಬ್ಯಾಂಕ್‌ಗಳ ಮಳಿಗೆಗಳನ್ನು ತೆರೆದು ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.

ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಉದ್ದಿಮೆದಾರರು, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ, ಕೆನರಾ ಎಂಎಸ್ಎಂಇ ಸಾಲ, ಮುದ್ರಾ ಸಾಲ, ಪಿಎಂಇಜಿಪಿ ಸಾಲ, ವಾಹನ ಸಾಲ, ಗೃಹ ಸಾಲ ಸೇರಿ ಇತರೆ ಸಾಲಗಳ ಮಂಜೂರಾತಿ ಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ನಬಾರ್ಡ್‌ನ ಡಿಡಿಎಂ ವಿ.ರವೀಂದ್ರ, ಡಿಸಿಸಿ ಬ್ಯಾಂಕ್ ಸಿಇಒ ತಾವರ‍್ಯ ನಾಯ್ಕ, ಲೀಡ್ ಬ್ಯಾಂಕ್ ಕಚೇರಿ ವಿಭಾಗೀಯ ಪ್ರಬಂಧಕ ಸುಶೃತ್‌ ಡಿ.ಶಾಸ್ತ್ರಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಕೆ.ರಾಘವೇಂದ್ರ ನಾಯರಿ, ಗಣೇಶ್ ರಾವ್, ಎನ್.ರಾಮಮೂರ್ತಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು