ಸೋಮವಾರ, ಮೇ 23, 2022
27 °C
ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ

ರಾಜಕೀಯ ದುರುದ್ದೇಶ ಇಲ್ಲ: ಶಾಸಕ ರಾಮಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ‘ಅಧಿಕಾರ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನರ ಒಳಿತಿಗಾಗಿ ಏನು ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ. ನಾನೊಬ್ಬ ಕೆಲಸಗಾರ. ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸಗಳು ಎಲ್ಲವನ್ನೂ ಹೇಳಬೇಕು ಎಂಬುದರಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ಎಸ್.ವಿ. ರಾಮಚಂದ್ರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿದರಕೆರೆ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು .

‘ಬಿದರಕೆರೆ ಗ್ರಾಮಕ್ಕೆ ತಲಾ ₹ 2 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಂಗಳಾಂತ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಸರ್ಕಾರದ ಸವಲತ್ತುಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಾಸಕರು ಹಾಗೂ ಸಂಸದರ ಸಂಪೂರ್ಣ ಸಹಕಾರದಿಂದ ಇನ್ನಷ್ಟು ಸ್ಫೂರ್ತಿ ಬಂದಿದೆ . ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ನನಗೆ ದಾವಣಗೆರೆ ಜಿಲ್ಲೆಯ ಪ್ರೀತಿ, ವಿಶ್ವಾಸ, ಕೆಲಸ ಮಾಡಿದ ಅನುಭವ ಯಾವ ಜಿಲ್ಲೆಯಲ್ಲಿಯೂ ದೊರೆತಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಚನ್ನಪ್ಪ, ‘ನಿವೇಶನರಹಿತರು 109 ಅರ್ಜಿಗಳನ್ನು ಸಲ್ಲಿಸಿದ್ದು, ನಿವೇಶನ ಕಲ್ಪಿಸಲು ಗ್ರಾಮದ ಸುತ್ತಮುತ್ತ ಗಾಮಠಾಣಾ ಅಥವಾ ಸರ್ಕಾರಿ ಭೂಮಿ ಲಭ್ಯತೆ ಇರುವುದಿಲ್ಲ. 300 ಜನರಿಗೆ ನಿವೇಶನ ನೀಡಲು 8 ಎಕರೆ ಜಮೀನು ಅಗತ್ಯವಿದ್ದು, ಖಾಸಗಿ ಜಮೀನು ಲಭ್ಯವಿದ್ದಲ್ಲಿ ವಸತಿ ನಿಗಮದಿಂದ ದುಪಟ್ಟು ಹಣ ಭರಿಸಿ ಖರೀದಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು .

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಮಾತನಾಡಿ, ‘3 ಜನ ಸಂಧ್ಯಾ ಸುರಕ್ಷಾ, 7 ಜನ ವೃದ್ಧಾಪ್ಯ, 3 ಜನರಿಗೆ ವಿಧವಾ ವೇತನ ಬಾಕಿಯಿದ್ದು ಅವರಿಗೆ ಮತ್ತು 95 ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳ ಮೆರವಣಿಗೆ ನಡೆಸಲಾಯಿತು.

ತಹಶೀಲ್ದಾರ್ ಜಿ. ಸಂತೋಷ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಮುನಿಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ರೇಷ್ಮಾ, ವಿಜಯಕುಮಾರ್‌, ವಾಜಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಇಒ ಲಕ್ಷ್ಮೀಪತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.