ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿನಿಲಯಕ್ಕೆ ಹೆಚ್ಚಿನ ಅನುದಾನ: ಮಲ್ಲಿಕಾರ್ಜುನ್ ಭರವಸೆ

Published 5 ಮಾರ್ಚ್ 2024, 5:23 IST
Last Updated 5 ಮಾರ್ಚ್ 2024, 5:23 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಎವಿಕೆ ಕಾಲೇಜು ರಸ್ತೆಯಲ್ಲಿನ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಶಾಲೆ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಸಂಘದ ಆವರಣದಲ್ಲಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯಕ್ಕೂ ಪೂರ್ವದಲ್ಲೇ ಗಾಂಧೀಜಿಯವರು ದಾವಣಗೆರೆಗೆ ಭೇಟಿ ನೀಡಿದಾಗ ಈ ಶಾಲೆಗೆ ಅವರು ಅಡಿಗಲ್ಲು ಹಾಕಿದ್ದರು. ಇಂತಹ ಇತಿಹಾಸವಿರುವ ಶಾಲೆಗೆ ₹92 ಲಕ್ಷವನ್ನು ಮೊದಲ ಅನುದಾನವಾಗಿ ನೀಡಿದ್ದೇನೆ. ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನಕ್ಕಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದ್ದು, ಮಾರ್ಚ್ ಮುಗಿದ ಬಳಿಕ ಅವರನ್ನು ಭೇಟಿ ಮಾಡೋಣ’ ಎಂದು ವಿದ್ಯಾಸಂಸ್ಥೆಯ ಮುಖಂಡರಿಗೆ ತಿಳಿಸಿದರು.

‘ಈ ಸಂಸ್ಥೆಯಲ್ಲಿ ಕಾಲೇಜು ಆಗಬೇಕಿತ್ತು ಆದರೆ ಆಗಿಲ್ಲ. ಶಾಲಾ–ಕಾಲೇಜುಗಳಲ್ಲಿ ಶೇ 80ರಷ್ಟು ಸಿಬ್ಬಂದಿ ಕೊರತೆಯಾಗಿದೆ. ಶಿಕ್ಷಕರು, ಸಿಬ್ಬಂದಿ ಕ್ಲರ್ಕ್ ಸಹ ಇಲ್ಲ. ಈ ನಿಟ್ಟಿನಲ್ಲಿ ನೇಮಕ ಮಾಡಲು ಮುಖ್ಯಮಂತ್ರಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಚಿವ ಸಂಪುಟದಲ್ಲೂ ಚರ್ಚೆ ಆಗಿದೆ. ರಾಜ್ಯವ್ಯಾಪಿ ನೇಮಕವಾದಾಗ ಈ ಶಾಲೆಗೂ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘1934ರಲ್ಲಿ ಗಾಂಧೀಜಿ ಅವರು ದಾವಣಗೆರೆಗೆ ಭೇಟಿ ನೀಡಿದ್ದ ಸಂದರ್ಭ ಗಾಂಧೀಜಿಯವರು ಪೌರಾಯುಕ್ತರನ್ನು ಕರೆಸಿ ಜಾಗವನ್ನು ಗುರುತಿಸಿ ಅಂದು ಶಾಲೆಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಶಾಲೆಯಲ್ಲಿ 5 ಕೊಠಡಿ ಹಾಗೂ ಒಂದು ಅಡುಗೆ ಕೊಠಡಿ ನಿರ್ಮಾಣಕ್ಕೆ ₹ 92 ಲಕ್ಷವನ್ನು ಶಾಸಕರ ಅನುದಾನದಿಂದ ನೀಡಲಾಗಿದೆ. ಹಾಸ್ಟೆಲ್ ನಿರ್ಮಾಣಕ್ಕೆ ₹ 3 ಕೋಟಿ ಅಗತ್ಯವಿದ್ದು, ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಲಾಗುವುದು’ ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್‌.ಎಂ. ಹನುಮಂತಪ್ಪ ಹಾಗೂ ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಸದಸ್ಯರಾದ ಎ.ನಾಗರಾಜ್, ಗಡಿಗುಡಾಳ್ ಮಂಜುನಾಥ್, ಮುಖಂಡರಾದ ಎಲ್.ಎಂ.ಎಚ್. ಸಾಗರ್, ಕೆ.ಚಂದ್ರಣ್ಣ, ಈಶ್ವರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT