ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮೋದಿ ಕಾರ್ಯಕ್ರಮದಿಂದ ಚುನಾವಣೆಗೆ ಹುಮ್ಮಸ್ಸು

ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
Last Updated 21 ಮಾರ್ಚ್ 2023, 5:02 IST
ಅಕ್ಷರ ಗಾತ್ರ

ದಾವಣಗೆರೆ: ‘ಮಾ. 25ರಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಸಮಾವೇಶ ರಾಜ್ಯದ ಐತಿಹಾಸಿಕ ಕಾರ್ಯಕ್ರಮ ಆಗಲಿದ್ದು, ವಿಧಾನಸಭಾ ಚುನಾವಣೆಗೆ ದೊಡ್ಡ ಟೇಕಾಫ್ ಸಿಗಲಿದೆ’ ಎಂದು ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪ್ರಧಾನಿ ಭೇಟಿ ನಿಮಿತ್ತ ಸೋಮವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅಂದು ನಡೆಯುವ ಸಮಾವೇಶದಲ್ಲಿ 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇಷ್ಟು ಜನರು ಮೋದಿ ಅವರನ್ನು ಹತ್ತಿರದಿಂದ ಕಂಡಾಗ ಅವರಲ್ಲಿ ಉತ್ಸಾಹ ಮೂಡುತ್ತದೆ. ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗಾಗಿ ಇನ್ನಷ್ಟು ಹುಮ್ಮಸ್ಸಿನಿಂದ ತೊಡಗಲಿದ್ದಾರೆ’ ಎಂದರು.

‘ಸಮಾವೇಶದಲ್ಲಿ ಮೋದಿ ಅವರು ಜನರ ಮಧ್ಯದಿಂದ ಬರಲಿದ್ದಾರೆ. ಈ ಪ್ರಯೋಗವನ್ನು ಗುಜರಾತ್‌ನಲ್ಲಿ ಪಕ್ಷದ ಆ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ಮಾಡಿದ್ದರು. ಆ ಪ್ರಯೋಗವನ್ನು ಇಲ್ಲಿ ಮಾಡುವ ಬಗ್ಗೆ ಅವರಿಂದ ಸಲಹೆ ಪಡೆಯುತ್ತಿದ್ದೇವೆ’ ಎಂದು ತಿಳಿಸಿದರು.

‘ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಕಾಂಗ್ರೆಸ್‌ ಪೊಳ್ಳು ಭರವಸೆ ನೀಡುತ್ತಿದ್ದು, ರಾಜ್ಯದ ಪ್ರತಿ ಕುಟುಂಬದ ಮಹಿಳೆಯರಿಗೆ ₹ 2,000 ಹಾಗೂ ಯುವಕರಿಗೆ ₹3,000 ಕೊಡಲು ಎಷ್ಟು ಸಾವಿರ ಕೋಟಿ ಬೇಕು’ ಎಂದು ಪ್ರಶ್ನಿಸಿದರು.

‘ರಾಜ್ಯದ ಈ ವರ್ಷದ ಬಜೆಟ್ ₹ 3 ಲಕ್ಷ ಕೋಟಿ. ಕಾಂಗ್ರೆಸ್ ಅದನ್ನೂ ಮೀರಿ ಘೋಷಣೆ ಮಾಡುತ್ತಿದೆ. 2000-2001ರಲ್ಲಿ ಇದೇ ಕಾಂಗ್ರೆಸ್ ಯುವಕರಿಗೆ ₹ 5,000 ನೀಡುವುದಾಗಿ ಘೋಷಣೆ ಮಾಡಿತ್ತು. ಅದು ಇದುವರೆಗೂ ಈಡೇರಿಲ್ಲ. ಸುಳ್ಳು ಭರವಸೆಯಿಂದ ಜನರನ್ನು ಮರುಳು ಮಾಡಬಹುದು ಎಂದುಕೊಂಡಿದೆ, ರಾಜ್ಯದ ಪ್ರಜ್ಞಾವಂತ ಜನರು ಇದನ್ನು ಒಪ್ಪುವುದಿಲ್ಲ’ ಎಂದರು.

ಸಮಾವೇಶದ ಯಶಸ್ಸಿಗೆ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಯಿತು. ಆಹಾರ, ವಸತಿ, ವಾಹನ ನಿಲುಗಡೆ ಇನ್ನಿತರ ವ್ಯವಸ್ಥೆಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್ ಮಾಂಡವೀಯ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಎನ್. ಲಿಂಗಣ್ಣ, ಗೂಳಿಹಟ್ಟಿ ಶೇಖರ್, ಕುಮಾರ್ ಬಂಗಾರಪ್ಪ, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT