ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: ದೇವರ ಗಣಮಗನ ಹತ್ಯೆ, ಐವರು ಆರೋಪಿಗಳ ಬಂಧನ

48 ಗಂಟೆಗಳೊಳಗೆ ಎಚ್.ಕೆ. ಕುಮಾರ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
Last Updated 26 ಮೇ 2022, 5:58 IST
ಅಕ್ಷರ ಗಾತ್ರ

ಹೊನ್ನಾಳಿ: ಇಲ್ಲಿಯ ದೊಡ್ಡಕೇರಿ ಬೀರಲಿಂಗೇಶ್ವರ ದೇವರ ಗಣಮಗ ಎಚ್.ಕೆ. ಕುಮಾರ್ ಅವರ ಕೊಲೆ ಪ್ರಕರಣ ನಡೆದ 48 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಸಿಪಿಐ ದೇವರಾಜ್ ಹಾಗೂ ತಂಡ ಯಶಸ್ವಿಯಾಗಿದೆ.

ಹೊನ್ನಾಳಿಯ ಬಿ.ಎಸ್. ಮೋಹನ್ ಸಣ್ಣರಾಯಪ್ಪ (28), ಹಾಸನದ ದಿನೇಶ್ ದೊರೆಸ್ವಾಮಿ (38), ಹರಿಹರ ತಾಲ್ಲೂಕಿನ ಹಿಂಡಸಘಟ್ಟ ಕ್ಯಾಂಪ್‌ನ ಕಾರ್ತಿಕ್‍ಕುಮಾರ್ ನಾಯ್ಕ (29), ಪರಮೇಶ್‍ ನಾಯ್ಕ (30), ಸುನೀಲ್ ನಾಯ್ಕ (24) ಅವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಮೋಟರ್ ಸೈಕಲ್, ಚಾಕು ಮತ್ತು ಕಂದ್ಲಿ ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊಲೆಯ ಹಿನ್ನೆಲೆ: ಆರೋಪಿಗಳಾದ ಹೊನ್ನಾಳಿಯ ಬಿ.ಎಸ್. ಮೋಹನ್, ಹಾಸನದ ದಿನೇಶ್ (ಕಡದಾರವಳ್ಳಿ ಗ್ರಾಮ, ಹಾಸನ ತಾಲ್ಲೂಕು) ಅವರು ಕುಮಾರ್ ಅವರೊಂದಿಗೆ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಈಚೆಗೆ ಹಣಕಾಸಿನ ವಿಚಾರದಲ್ಲಿ ವೈಷಮ್ಯ ಉಂಟಾಯಿತು ಎನ್ನಲಾಗಿದೆ. ಹೀಗಾಗಿ ಕುಮಾರ್ ಅವರು ಮೋಹನ್ ಮತ್ತು ದಿನೇಶ್ ಅವರ ಬಳಿ ರಿಯಲ್ ಎಸ್ಟೇಟ್‌ನಲ್ಲಿ ತಾವು ತೊಡಗಿಸಿದ್ದ ಹಣವನ್ನು (₹ 20 ಲಕ್ಷ ), ವಾಪಸ್‌ ನೀಡುವಂತೆ ಕೇಳಿದ್ದರು. ಆದರೆ ಈ ಹಣವನ್ನು ವಾಪಸ್‌ ಮಾಡದೇ ತಮ್ಮಲ್ಲಿಯೇ ಇಟ್ಟುಕೊಳ್ಳುವ ಉದ್ದೇಶದಿಂದ ಮತ್ತು ಇತರ ಹಣದ ವ್ಯವಹಾರವನ್ನು ಮುಚ್ಚಿ ಹಾಕುವ ದುರುದ್ದೇಶದಿಂದ ಮೋಹನ್ ಮತ್ತು ದಿನೇಶ್ ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

₹ 3 ಲಕ್ಷಕ್ಕೆ ಸುಪಾರಿ: ‘ಹೊನ್ನಾಳಿಯ ಮೋಹನ್ ಅವರು ತನಗೆ ಪರಿಚಯವಿದ್ದ ಹರಿಹರ ತಾಲ್ಲೂಕಿನ ಹಿಂಡಸಘಟ್ಟ ಕ್ಯಾಂಪ್‌ನ ಕಾರ್ತೀಕ್‍ಕುಮಾರ್ ನಾಯ್ಕ, ಪರಮೇಶ್ ನಾಯ್ಕ ಹಾಗೂ ಸುನೀಲ್ ನಾಯ್ಕ ಅವರಿಗೆ ₹ 3 ಲಕ್ಷಕ್ಕೆ ಸುಪಾರಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೇವಲ ₹ 2,000 ಮುಂಗಡ ನೀಡಿದ್ದಾರೆ. ಈ ಮೂರು ಜನರನ್ನು ಕೊಲೆ ನಡೆಯುವ ಒಂದು ದಿನ ಮುಂಚಿತವಾಗಿ ಹೊನ್ನಾಳಿಗೆ ಕರೆಸಿಕೊಂಡು ಒಳ ಸಂಚು ರೂಪಿಸಿದ್ದರು. ಮರಳಿ ನೀಡಬೇಕಾದ ಹಣವನ್ನು ಕೊಡುತ್ತೇವೆ ಅಂತ ನಂಬಿಸಿ ಕುಮಾರ ಅವರನ್ನು, ಕಾರಿನಲ್ಲಿ ಎಚ್. ಕಡೆದಕಟ್ಟೆ ಸಮೀಪದ ಟವರ್ ಬಳಿ ಇರುವ ಜಮೀನಿಗೆ ಕರೆಸಿಕೊಂಡಿದ್ದರು. ಇದಕ್ಕೂ ಮುಂಚಿತವಾಗಿ ಹೊಂಚು ಹಾಕಿ ಕುಳಿತಿದ್ದ ಮೂವರು ಪಾತಕಿಗಳು ಕುಮಾರ ಅವರ ಕುತ್ತಿಗೆಗೆ ಹಿಂದಿನಿಂದ ಟವೆಲ್ ಹಾಕಿ ಬಿಗಿದು ಕುತ್ತಿಗೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದು, ಕಂದ್ಲಿ (ಮಚ್ಚು)ಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ’ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ. ಇದು ಈವರೆಗಿನ ತನಿಖೆ ಮಾತ್ರವಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದೂ ಅವರು ತಿಳಿಸಿದರು.

ಈ ಕೊಲೆ ಪ್ರಕರಣವನ್ನು ಸಿಪಿಐ ದೇವರಾಜ್ ಅವರು ಕೊಲೆಯಾದ 48 ಗಂಟೆಗಳಲ್ಲಿಯೇ ತಮ್ಮ ತಾಂತ್ರಿಕ ಹಾಗೂ ಕೌಶಲದಿಂದ ಹಾಗೂ ಎಸ್‍ಐ ಬಸವನಗೌಡ ಬಿರಾದರ್ ಹಾಗೂ ಇತರ ಸಾಕ್ಷಿದಾರರ ತ್ವರಿತ ವಿಚಾರಣೆಯಿಂದ ಪತ್ತೆ ಹಚ್ಚಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್‍ಪಿ ರಾಮಗೊಂಡ ಬಿ. ಬಸರಗಿ ಹಾಗೂ ಚನ್ನಗಿರಿ ಡಿವೈಎಸ್‍ಪಿ ಡಾ. ಸಂತೋಷ್ ಅವರು ಮಾರ್ಗದರ್ಶನ ಮಾಡಿದ್ದರು.

ಎಸ್‍ಪಿಯವರಿಂದ ಶ್ಲಾಘನೆ, ಬಹುಮಾನ ಘೋಷಣೆ: ಸಿಪಿಐ ದೇವರಾಜ್ ಅವರೊಂದಿಗೆ ಎಸ್‍ಐ ಬಸವನಗೌಡ ಬಿರಾದರ್, ಎಎಸ್‍ಐ ಹರೀಶ್, ಪರುಶುರಾಮಪ್ಪ, ಮಾಲತೇಶಪ್ಪ, ಪೊಲೀಸ್ ಸಿಬ್ಬಂದಿಗಳಾದ ರಂಗನಾಥ್, ಧರ್ಮಪ್ಪ, ರಾಜು, ಮಂಜುನಾಥ್, ಮೌನೇಶ್, ಗಣೇಶ, ಜಗದೀಶ್, ಸುನೀಲ್ ಕುಮಾರ್, ಗಾಳಿ ಯೋಗೀಶ್, ಪ್ರಸನ್ನಕುಮಾರ್, ರಂಗನಾಥ್, ಜಗದೀಶ, ಹನುಮಂತಪ್ಪ, ಶಾಂತಕುಮಾರ್, ರಾಘವೇಂದ್ರ ಈ ತಂಡದಲ್ಲಿದ್ದರು. ಇವರಿಗೆ ಎಸ್‍ಪಿ ರಿಷ್ಯಂತ್ ಅವರು ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT