ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆ ಇಲ್ಲದ ಕೆರೆ ಏರಿ: ಅಪಾಯಕ್ಕೆ ರಹದಾರಿ

ಜಿಲ್ಲೆಯಲ್ಲಿವೆ ಅಪಾಯಕಾರಿ ಮಾರ್ಗಗಳು: ತಡೆಗೋಡೆ ನಿರ್ಮಿಸಲು ಒತ್ತಾಯ
Last Updated 5 ಡಿಸೆಂಬರ್ 2022, 4:49 IST
ಅಕ್ಷರ ಗಾತ್ರ

ದಾವಣಗೆರೆ: ತಡೆಗೋಡೆ ಇಲ್ಲದಕೆರೆಗಳ ಏರಿಗಳು. ಕೆರೆ ದಂಡೆಯ ಮೇಲೆ ಅಪಾಯಕಾರಿ ತಿರುವುಗಳು, ಸೂಚನಾ ಫಲಕ ಇಲ್ಲದ ರಸ್ತೆಗಳು. ಇವು ಜಿಲ್ಲೆಯ ಹಲವೆಡೆ ತುಂಬಿತುಳುಕುತ್ತಿರುವ ಕೆರೆಗಳ ಏರಿಯ ಮಾರ್ಗಗಳಲ್ಲಿ ಕಾಣಸಿಗುವ ಚಿತ್ರಣ.

ಜಿಲ್ಲೆಯಲ್ಲಿರುವ ಹಲವು ಕೆರೆಗಳ ಏರಿಗೆ ತಡೆಗೋಡೆ ಇಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ದೊಡ್ಡ ದೊಡ್ಡ ಕೆರೆಗಳ ಬಳಿಯ ರಸ್ತೆಗಳ ಬದಿ ತಡೆಗೋಡೆಯೇ ಇಲ್ಲ. ಪ್ರಮುಖ ಮಾರ್ಗಗಳಲ್ಲಿಯೇ ಇಂತಹ ಸ್ಥಿತಿ ಇದೆ. ಇನ್ನು ಗ್ರಾಮೀಣ ರಸ್ತೆಗಳ ಕೆರೆ ಏರಿಗಳ ಸ್ಥಿತಿ ಹೇಳತೀರದು.

ಜಗಳೂರು, ಹರಿಹರ, ಚನ್ನಗಿರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಕೆರೆಗಳ ಮಾರ್ಗದ ಬಹುತೇಕ ಕಡೆ ತಡೆಗೋಡೆ ಇಲ್ಲ.

2017–2020ರ ಅವಧಿಯಲ್ಲಿ ಜಿಲ್ಲೆಯಾದ್ಯಂತ ಇರುವ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಒಟ್ಟು 946 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ತಡೆಗೋಡೆ ಇಲ್ಲದ ಕೆರೆ ಏರಿಗಳಲ್ಲಿ ನಡೆದ ಅಪಘಾತ ಪ್ರಕರಣಗಳೂ ಸೇರಿವೆ.

ಕೆರೆಗಳಿಗೆ ತಡೆಗೋಡೆ ಇಲ್ಲದ ಅಪಘಾತ ಪ್ರಕರಣಗಳನ್ನು ಆಧರಿಸಿ ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಗಳು ಕೆಲ ಅಪಘಾತ ವಲಯಗಳನ್ನೂ ಗುರುತು ಮಾಡಿವೆ.

ಮಲೇಬೆನ್ನೂರಿನ ಕೋಮಾರನಹಳ್ಳಿಯಿಂದ ಕೋಮಾರನಹಳ್ಳಿ ಕಣಿವೆ, ಚನ್ನಗಿರಿಯ ಬೆಂಕಿಕೆರೆ ಕಣಿವೆಯಿಂದ ಕರಿಯಮ್ಮನ ದೇವಾಲಯ ಮಾರ್ಗವನ್ನು ಅಪಘಾತ ವಲಯಗಳೆಂದು ಗುರುತಿಸಲಾಗಿದೆ. ಕೋಮಾರನಹಳ್ಳಿ ಕೆರೆ ಹಾಗೂ ಬೆಂಕಿಕೆರೆ ಮಾರ್ಗದಲ್ಲಿ ತಡೆಗೋಡೆ ಇಲ್ಲದಿರುವುದು ಗಮನಾರ್ಹ.

ಜಿಲ್ಲೆಯ ಪ್ರಮುಖ ಕೆರೆಗಳಾದ ಬಾತಿ ಕೆರೆ,ಹದಡಿ, ಕೊಡಗನೂರು, ಅಣಜಿ ಕೆರೆ, ಬೆಂಕಿಕೆರೆ ಮಾರ್ಗದಲ್ಲಿ ತಡೆಗೋಡೆಯೇ ಇಲ್ಲ. ಇದರಿಂದ ಇಲ್ಲಿ ಅಪಘಾತ ಸಂಭವಿಸುತ್ತಿವೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಅರಭಾವಿ– ಚಳ್ಳಕೆರೆ ರಾಜ್ಯ ಹೆದ್ದಾರಿ ಹಾದುಹೋಗುವ ಜಗಳೂರು ಕೆರೆಗೆ ತಡೆಗೋಡೆಯೇ ಇಲ್ಲ. ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಕೆರೆಗೂ ತಡೆಗೋಡೆ ನಿರ್ಮಿಸಿಲ್ಲ. ಕೊಂಡಜ್ಜಿ ಕೆರೆಗೆ ತಡೆಗೋಡೆ ಸಮರ್ಪಕವಾಗಿಲ್ಲ.

75 ಎಕರೆ ವಿಸ್ತೀರ್ಣ ಹೊಂದಿರುವ ಬಾತಿ ಕೆರೆಗೂ ಸಮರ್ಪಕ ತಡೆಗೋಡೆ ಇಲ್ಲ. ಇತ್ತೀಚೆಗೆ ರಸ್ತೆಯನ್ನುಒಂದು ಬದಿಯಲ್ಲಿ ವಿಸ್ತರಿಸಲಾಗಿದೆ. ದಾವಣಗೆರೆ– ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ದಿಂದ ಕೆರೆ ಅಭಿವೃದ್ಧಿಪಡಿಸಿ ಉದ್ಯಾನ, ಪ್ರವಾಸಿ ತಾಣವಾಗಿಸುವ ಯೋಜನೆ ರೂಪಿಸಲಾಗಿದ್ದು, ಸುಸಜ್ಜಿತ ತಡೆಗೋಡೆ ನಿರ್ಮಿಸಲಾಗುವುದು ಎಂಬುದು ಅಧಿಕಾರಿಗಳ ಹೇಳಿಕೆ.

‘ಹದಡಿ ಕೆರೆ ಹಾಗೂ ಅಣಜಿ ಕೆರೆ ಮಾರ್ಗ ಅಪಾಯಕಾರಿಯಾಗಿದೆ. ಇಲ್ಲಿ ವಾಹನ ದಟ್ಟಣೆ ಹೆಚ್ಚು. ಕೆರೆಗಳಿಗೆ ತಡೆಗೋಡೆ ಇಲ್ಲದ ಕಾರಣ ಅಪಾಯ ಹೆಚ್ಚು. ಈ ಮಾರ್ಗದಲ್ಲಿ ವಾಹನ ಓಡಿಸಲು ಭಯವಾಗುತ್ತದೆ. ಅಧಿಕಾರಿಗಳು ತಡೆಗೋಡೆ ನಿರ್ಮಿಸಿದರೆ ಹೆಚ್ಚಿನ ಅಪಾಯ ತಪ್ಪಿಸಬಹುದು’ ಎನ್ನುತ್ತಾರೆ ಪ್ರವಾಸಿ ವಾಹನ ಚಾಲಕ ಪ್ರವೀಣ್‌ಕುಮಾರ್‌.

‘ಕೆರೆಗಳಿಗೆ ಸಮರ್ಪಕ ತಡೆಗೋಡೆ ನಿರ್ಮಿಸಬೇಕು. ಒಂದೇ ಬಾರಿಗೆ ಕಾಮಗಾರಿ ಕೈಗೊಳ್ಳದೇ ಒಮ್ಮೆ ಒಂದು, ಇನ್ನೊಮ್ಮೆ ಒಂದು ಕಾಮಗಾರಿ ಮಾಡುವ ಕಾರಣ ಸಮಸ್ಯೆಯಾಗುತ್ತಿದೆ. ಕೆಲವು ಕೆರೆ ಮಾರ್ಗಗಳಲ್ಲಿ ಬೀದಿ ದೀಪಗಳೇ ಇಲ್ಲ. ವಾಹನ ಸವಾರರು ವೇಗವಾಗಿ ಬಂದರೆ ಕೆರೆಗೆ ಬೀಳುವ ಅಪಾಯ ಇದೆ. ಇಂತಹ ಮಾರ್ಗಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಬೀದಿ ದೀಪಗಳನ್ನು ಅಳವಡಿಸಬೇಕು’ ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌.

***

ಅನುದಾನ ಬಂದ ಕೂಡಲೇ ಕಾಮಗಾರಿ

ಹದಡಿ ಕೆರೆ, ಕೊಡಗನೂರು ಕೆರೆಗಳಲ್ಲಿ ಮಳೆಗಾಲದಲ್ಲಿ ಕೆರೆ ಏರಿ ಬಿರುಕು ಬಿಟ್ಟ ಕಾರಣ ತಡೆಗೋಡೆ ತೆಗೆಯಲಾಗಿದೆ. ಈ ಕೆರೆಗಳು ಹಾಗೂ ಅಣಜಿ ಕೆರೆ ಸೇರಿದಂತೆ ಎಲ್ಲ ಕೆರೆಗಳಿಗೂ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ತಡೆಗೋಡೆ ನಿರ್ಮಿಸುವ ಸಂಬಂಧ ಕ್ರಿಯಾಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಜಿ. ನರೇಂದ್ರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

***

ರಸ್ತೆ ವಿಸ್ತರಣೆ ಮಾಡಲಿ

‘ಬಾತಿ ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಹೋರಾಟ ಮಾಡಿದ್ದೇವೆ. ಕೆರೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆಯೂ ಒತ್ತಾಯಿಸಿದ್ದೆವು. ಆದರೂ ಪ್ರಯೋಜನವಾಗಿಲ್ಲ. ರಾತ್ರಿ ಹೊತ್ತು ಕೆಲವರು ಬಿದ್ದು ಗಾಯಗೊಂಡಿದ್ದಾರೆ. ಕೆರೆಯನ್ನು ಪ್ರವಾಸಿ ತಾಣವಾಗಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಅಪಘಾತ ತಡೆಗೆ ಸಮರ್ಪಕ ತಡೆಗೋಡೆ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ವಾಸು.

ಅಣಜಿ ಕೆರೆಗೆ ತಡೆಗೋಡೆ ಇಲ್ಲ. ತಡೆಗೋಡೆ ಕಾಮಗಾರಿಗೂ ಮುನ್ನ ರಸ್ತೆ ವಿಸ್ತರಿಸಬೇಕು. ಇಲ್ಲದಿದ್ದರೆ ಹಲವು ವಾಹನಗಳು ಕೆರೆಗೆ ಬೀಳುವ ಅಪಾಯ ಇದೆ. ನಗರದ ಟಿವಿ ಸ್ಷೇಷನ್‌ ಕೆರೆ ಮಾರ್ಗವನ್ನೂ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು.

***

ಕೆರೆ ಮಾರ್ಗ ವಿಸ್ತರಣೆ

ಚನ್ನಗಿರಿ: ತಾಲ್ಲೂಕಿನಲ್ಲಿ ಕೆರೆಯ ಏರಿಗಳ ಮೇಲೆ ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿಗಳಿವೆ. 50 ವರ್ಷಗಳ ಹಿಂದೆ ನಿರ್ಮಿಸಿರುವ ಕೆರೆಗಳ ಏರಿ ಕಿರಿದಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕೆರೆ ಮಾರ್ಗಗಳಲ್ಲಿ ತಡೆಗೋಡೆ ಇಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿವೆ.

ಹಿರೇಮಳಲಿ-ಮುದಿಗೆರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆರೆಯ ಏರಿ ಕಿರಿದಾಗಿದೆ. ಕಳೆದ ವರ್ಷ ಕೆರೆಯ ಏರಿ ಬಿರುಕು ಬಿಟ್ಟಿದೆ. ಕೆರೆಯ ಏರಿ ವಿಸ್ತರಿಸಿ, ಸುತ್ತಲೂ ತಡೆಗೋಡೆ ನಿರ್ಮಿಸುವಂತೆ ಸರ್ಕಾರವನ್ನು ಕೋರಿದರೂ ಪ್ರಯೋಜನವಾಗಿಲ್ಲ ಎಂದು ‌ಮುದಿಗೆರೆ ಗ್ರಾಮದ ಎಂ.ಎಸ್. ಸತೀಶ್ ದೂರಿದರು.

ಹಿರೇಕೋಗಲೂರು ಕೆರೆಯ ಏರಿ ವಿಸ್ತರಣಾ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆ ಈ ಕೆರೆಯಲ್ಲಿ ವಾಹನಗಳು ಉರುಳಿ ಬಿದ್ದ ಉದಾಹರಣೆಗಳಿವೆ. ಲೋಕೋಪಯೋಗಿ ಇಲಾಖೆಯ ರಸ್ತೆ ಸುರಕ್ಷತಾ ವಲಯ ಯೋಜನೆ ಅಡಿಯಲ್ಲಿ ₹ 6 ಕೋಟಿ ವೆಚ್ಚದಲ್ಲಿ ಕೆರೆ ಮಾರ್ಗಗಳ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ. ಚಿಕ್ಕಬೆನ್ನೂರು, ಗೊಲ್ಲರಹಳ್ಳಿ, ದೋಣಿಹಳ್ಳಿ, ಬಿಲ್ಲಹಳ್ಳಿ ಕೆರೆಯ ಏರಿಗಳನ್ನು ವಿಸ್ತರಿಸಲಾಗಿದೆ. ದೇವರ ಹಳ್ಳಿ ಕೆರೆಯ ಏರಿ ವಿಸ್ತರಣಾ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ ಎಂದು
ಇಲಾಖೆಯ ಸಹಾಯಕ ನಿರ್ದೇಶಕ ಧಿಕಾರಿ ರವಿಕುಮಾರ್ ತಿಳಿಸಿದರು.

ಮುದಿಗೆರೆ, ಹಿರೇಮಳಲಿ, ತಾವರೆಕೆರೆ ಹಾಗೂ ಉಬ್ರಾಣಿ ಗ್ರಾಮಗಳ ಕೆರೆ ಏರಿ ವಿಸ್ತರಣಾ ಕಾರ್ಯಕ್ಕೆ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

***

ಶಿಥಿಲಗೊಂಡ ಕೆರೆ ತಡೆಗೋಡೆ

ನ್ಯಾಮತಿ:ತಾಲ್ಲೂಕಿನ ಬಹುತೇಕ ಕೆರೆಗಳು ಗ್ರಾಮಗಳ ಹೊರವಲಯದಲ್ಲಿ ಇವೆ. ಕೆಲವು ಕೆರೆ ಮಾರ್ಗಗಳಲ್ಲಿ ರಾಜ್ಯ, ಜಿಲ್ಲಾ ಹೆದ್ದಾರಿಗಳು ಹಾದು ಹೋಗಿವೆ. ಕೆಲವು ಕೆರೆಗಳ ತಡೆಗೋಡೆ ಶಿಥಿಲಗೊಂಡಿವೆ. ಕೆಲವು ಕೆರೆಗಳಿಗೆ ತಡೆಗೋಡೆಯೇ ಇಲ್ಲ.

ತಾಲ್ಲೂಕಿನ ಚೀಲೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚು. ಹೆದ್ದಾರಿಯ ಒಂದು ಬದಿ ರಾಮನಕೆರೆ ಇದ್ದು, ಇನ್ನೊಂದು ಬದಿ ತೋಟಗಳು ಇವೆ. ಈಗಿರುವ ತಡೆಗೋಡೆಗಳು ಸಮರ್ಪಕವಾಗಿಲ್ಲ. ಸುಸಜ್ಜಿತ ತಡೆಗೋಡೆ ನಿರ್ಮಿಸಿ, ಎಚ್ಚರಿಕೆ ಫಲಕ ಅಳವಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಬೆಳಗುತ್ತಿ ಹೋಬಳಿಯ ಬೆಳಗುತ್ತಿ– ಗುಡ್ಡೇಹಳ್ಳಿ ಮಾರ್ಗದ ಹಿರೇಕೆರೆ, ಇಸ್ಲಾಪುರ-ರಾಮೇಶ್ವರ-ಬಿದರಹಳ್ಳಿ ಮಾರ್ಗದ ಬಾಳೆಕಟ್ಟೆ ಕೆರೆ ಹಾಗೂ ಬೆಳಗುತ್ತಿ–ತೀರ್ಥರಾಂಪುರ ಕೆರೆಗೆ ತಡೆಗೋಡೆಗಳಿಲ್ಲ. ಸವಳಂಗ– ಶಿಕಾರಿಪುರ ರಸ್ತೆಯಲ್ಲಿನ ಮಾಚಿಗೊಂಡನಹಳ್ಳಿ ಕೆರೆಯ ರಸ್ತೆ ತಿರುವಿನಿಂದ ಕೂಡಿದ್ದು, ತಡೆಗೋಡೆ ದುರಸ್ತಿಗೊಳಿಸಬೇಕಿದೆ.

ಈಚೆಗೆ ಸುರಿದ ಮಳೆಯಿಂದ ನ್ಯಾಮತಿ ಹೊರವಲಯದ ಕುಮಟಾ-ಕಾರಮಡಗಿ ಹೆದ್ದಾರಿಯ ಬನಾಪುರ ಹಳ್ಳದ ಸೇತುವೆಯ ಮೇಲೆ ನೀರು ಹರಿದು, ತಡೆಗೋಡೆ ಮತ್ತು ಸೇತುವೆ ಕುಸಿದಿದೆ. 4 ತಿಂಗಳಾದರೂ ಅಧಿಕಾರಿಗಳು ದುರಸ್ತಿಗೆ ಗಮನಹರಿಸಿಲ್ಲ ಎಂದು ದೂರುತ್ತಾರೆ ಸಾಮಾಜಿಕ ಕಾರ್ಯಕರ್ತ ಪುರುವಂತರ ಪರಮೇಶ್ವರಪ್ಪ.

ತಾಲ್ಲೂಕು ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿನ ಕೆರೆಗಳಿಗೆ ತಡೆಗೋಡೆ ನಿರ್ಮಿಸಬೇಕು. ಕೆರೆಗಳ ವಿಸ್ತೀರ್ಣ ಮತ್ತು ಗ್ರಾಮ ಪಂಚಾಯಿತಿ ವಿವರಗಳ ಸೂಚನಾ ಫಲಕ ಅಳವಡಿಸಬೇಕು. ಅಪಾಯಕಾರಿ ತಿರುವು, ಕೆರೆ ಏರಿಗಳ ಬಗ್ಗೆಯೂ ಫಲಕ ಅಳವಡಿಸಬೇಕು ಎಂದು ಮಲ್ಲಿಗೇನಹಳ್ಳಿ ಜಿ.ಎಚ್. ಪರಮೇಶ್ವರಪ್ಪ, ಬಹುಜನ ಸಂಘಟನೆಯ ಎಚ್. ಸುನೀಲ ಒತ್ತಾಯಿಸುತ್ತಾರೆ.

***

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ

ಮಾಯಕೊಂಡ: ಸಮೀಪದ ಕೊಡಗನೂರು ಕೆರೆ ದಾವಣಗೆರೆ ತಾಲ್ಲೂಕಿನಲ್ಲಿ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದು, ಬಹು ವರ್ಷಗಳ ನಂತರ ಈ ಬಾರಿ ಭರ್ತಿಯಾಗಿದೆ.

ಹೊಳಲ್ಕೆರೆ- ದಾವಣಗೆರೆ ಮಾರ್ಗದ ಮುಖ್ಯರಸ್ತೆಯಲ್ಲಿ ಕೆರೆ ಇದ್ದು, ಕೆಲ ದಿನಗಳ ಹಿಂದೆ ಏರಿಯ ರಸ್ತೆಯಲ್ಲಿ ಬಿರುಕು ಬಿಟ್ಟುಕುಸಿತ ಕಂಡಿತ್ತು. ಏರಿಯ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕಾರಣ ತಡೆಗೋಡೆ ತೆಗೆಯಲಾಗಿದೆ.

ಮೂರು ತಿಂಗಳು ಕಳೆದರೂ ಕಾಮಗಾರಿ ಮುಗಿದಿಲ್ಲ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ. ಸಮರ್ಪಕ ತಡೆಗೋಡೆ ನಿರ್ಮಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

***

ಅಪಾಯ ಆಹ್ವಾನಿಸುವ ಕೆರೆ ಏರಿ

ಮಲೇಬೆನ್ನೂರು:ಹೋಬಳಿ ವ್ಯಾಪ್ತಿಯ ಕೆರೆಯ ಬದಿ ತಡೆಗೋಡೆ ಇಲ್ಲ. ಕೋಮಾರನಹಳ್ಳಿ, ಹೆಳವನಕಟ್ಟೆ ಕೆರೆ ಏರಿಗಳು ಅಪಾಯ ಆಹ್ವಾನಿಸುತ್ತಿವೆ.

ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕೆರೆ ಭಾಗದ ಒಂದು ಭಾಗಕ್ಕೆ ತಡಗೋಡೆ ನಿರ್ಮಿಸಿಲ್ಲ. ಈ ಹೆದ್ದಾರಿಯಲ್ಲಿ ವಾಹನಗಳ ಭರಾಟೆ ಹೆಚ್ಚು. 2 ವರ್ಷಗಳಿಂದ ಉತ್ತಮ ಮಳೆಯಾದ ಕಾರಣ 97 ಎಕರೆ ವಿಸ್ತೀರ್ಣದ ಕೆರೆ ಕೋಡಿ ಬಿದ್ದಿದೆ.

ರಸ್ತೆಯಲ್ಲಿ ತಿರುವು ಇರುವ ಕಾರಣ ಅಪಘಾತಗಳು ಇಲ್ಲಿ ಹೆಚ್ಚು. ಹಿಂದೊಮ್ಮೆ ಅಪಘಾತದಲ್ಲಿ ಟ್ರ್ಯಾಕ್ಟರ್, ಖಾಸಗಿ ಬಸ್, ಕಾರು, ಎಮ್ಮೆ, ಹಸು, ಎತ್ತಿನಬಂಡಿ 40 ಅಡಿ ಆಳದ ಕೆರೆಯ ಕೆಳಭಾಗಕ್ಕೆ ಬಿದ್ದಿದ್ದವು.

ಲೋಕೋಪಯೋಗಿ ಇಲಾಖೆ ಕೆರೆ ಏರಿಗೆ ತಡೆಗೋಡೆ, ಲೋಹದ ಪಟ್ಟಿ ಅಳವಡಿಸಬೇಕಕು ಎಂದು ಕೋಮಾರನಹಳ್ಳಿ, ದಿಬ್ಬದಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಕೆರೆಗೆ ತಡೆಗೋಡೆ, ಲೋಹದ ಪಟ್ಟಿ ಅಳವಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವವೂ ಇದೆ’ ಎಂದುಲೋಕೋಪಯೋಗಿ ಇಲಾಖೆಎಇಇಶಿವಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT