ಭಾನುವಾರ, ಮೇ 22, 2022
28 °C
ಈಶ್ವರಪ್ಪ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಡೆಸಿದ ಪ್ರತಿಭಟನೆಯಲ್ಲಿ ಸತೀಶ್‌ ಜಾರಕಿಹೊಳಿ

ದಾವಣಗೆರೆ | ಬಡವರನ್ನು ಬದುಕಲು ಬಿಡದ ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವ್ಯಾಪಾರಿ ಬುದ್ಧಿಯ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಬಡವರು, ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದವರನ್ನು ಬದುಕಲು ಬಿಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣ ಆರೋಪಿ ಕೆ.ಎಸ್‌. ಈಶ್ವರಪ್ಪ ಅವರನ್ನು ಬಂಧಿಸಲು ಆಗ್ರಹಿಸಿ, ಶೇ 40 ಕಮಿಷನ್‌ ಸರ್ಕಾರ ಎಂದು ಖಂಡಿಸಿ ಜಯದೇವ ಸರ್ಕಲ್‌ನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ನಾನು ಗುಜರಾತಿ. ನನ್ನರಕ್ತದಲ್ಲಿ ವ್ಯಾಪಾರ ಬುದ್ಧಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದಾಗ ಹೇಳಿದ್ದರು. ಅದನ್ನು ಅವರು ತಮ್ಮ ಆಡಳಿತದಲ್ಲಿ ಸಾಬೀತು ಮಾಡಿ ಜನರಿಗೆ ಸಂಕಷ್ಟ ತಂದಿದ್ದಾರೆ’ ಎಂದು ಟೀಕಿಸಿದರು.

ಉಜ್ವಲ ಯೋಜನೆಯಡಿ ಅಡುಗೆ ಅನಿಲ ನೀಡಿ ಬಳಿಕ ಸಬ್ಸಿಡಿ ತೆಗೆದು ಹಾಕಿದ್ದಾರೆ. ಅಡುಗೆ ಅನಿಲದ ದರ ₹ 400 ಇದ್ದಿದ್ದು ₹ 1009 ಆಗಿದೆ. ಈ ಮೂಲಕ ಈ ಯೋಜನೆಯಲ್ಲಿ ಮೋದಿ ಸರ್ಕಾರ ಲಾಭ ಗಳಿಸಿದೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳಿ ಮತ ಪಡೆಯುತ್ತಾರೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ‘ನಾನು ತಿನ್ನೊಲ್ಲ, ಬೇರಿವರಿಗೂ ತಿನ್ನಲು ಬಿಡಲ್ಲ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ಹೇಳಿ ಮನವಿ ಸಲ್ಲಿಸಿದರೂ ಯಾವದೇ ಕ್ರಮ ಕೈಗೊಂಡಿಲ್ಲ. ಅವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಅದರ ಪರಿಣಾಮ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಶಾಸಕ ಎಸ್. ರಾಮಪ್ಪ, ‘ಬಿಜೆಪಿ ಸರ್ಕಾರ ಹಿಂದೂ-ಮುಸ್ಲಿಮರ ಮಧ್ಯೆ ಜಗಳ ಹಚ್ಚಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ. ಹಿಂದೂ, ಮುಸ್ಲಿಂ ಹತ್ಯೆಯಾದರೂ ಬಿಜೆಪಿ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಬಡ ಕುಟುಂಬದ ಯುವಕರು ಬಿಜೆಪಿ ಸೇರುವ ಮುಂಚೆ ಒಮ್ಮೆ ಯೋಚನೆ ಮಾಡಬೇಕು’ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಶೇ.40 ರಷ್ಟು ಕಮಿಷನ್ ದಂಧೆ ನಡೆಯುತ್ತಿದ್ದರೆ, ಹೊನ್ನಾಳಿಯಲ್ಲಿ ಶೇ 45ರಿಂದ 50ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದಕ್ಕೆ ಶಾಸಕ ರೇಣುಕಾಚಾರ್ಯ ಕಾರಣ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದರು.

‘ನನ್ನ ಹುಟ್ಟೂರಾದ ಬಿದಿರಕೆರೆ ಅಭಿವೃದ್ಧಿ ಆಗಿದೆ. ಜಗಳೂರು ಶಾಸಕರ ತೇವಲಿಗೆ ಬಲಿಯಾಗಿ ಜಿಲ್ಲಾಧಿಕಾರಿಗಳ ನಡೆ ಜನರ ಕಡೆ ಕಾರ್ಯಕ್ರಮವನ್ನು ಬಿದಿರಕೆರೆಯಲ್ಲಿ ನಡೆಸಲಾಗುತ್ತಿದೆ. ಇದರ ಬದಲು ಕುಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆ ಆಲಿಸಬೇಕಿತ್ತು. ಜಿಲ್ಲಾಧಿಕಾರಿಯೇ ಶಾಸಕರ ಹೊಗಳು ಭಟರಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಡಾ.ಎಂ.ಸಿ. ಮೋದಿ ವೃತ್ತದಿಂದ ಜಯದೇವ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಈಶ್ವರಪ್ಪ ಮತ್ತು ಇನ್ನಿಬ್ಬರು ಸಂತೋಷ್‌ ಪಾಟೀಲ ಆತ್ಮಹತ್ಯೆಗೆ ಕಾರಣ ಎಂದು ಕಾಂಗ್ರೆಸ್ ದೂರು ನೀಡಿದ್ದಲ್ಲ. ಸಂತೋಷ್‌ರ ಪತ್ನಿ ಮತ್ತು ಸಹೋದರ ದೂರು ನೀಡಿರುವುದು. ಹಾಗಾಗಿ ಮೊದಲ ಆರೋಪಿ ಕೆ.ಎಸ್‌. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು.  ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ₹ 1 ಕೋಟಿ ಪರಿಹಾರ ಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್, ಮುಖಂಡರಾದ ನಾಗರತ್ನಮ್ಮ ಮಲ್ಲೇಶಪ್ಪ, ಜಯದೇವ ನಾಯ್ಕ, ಕೆ.ಎಸ್. ಬಸವಂತಪ್ಪ, ಬಿ.ಎಚ್. ವೀರಭದ್ರಪ್ಪ, ದುಗ್ಗಪ್ಪ ಮಾತನಾಡಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಆಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಮಂಜುನಾಥ ಗಡಿಗುಡಾಳ್, ಎ. ನಾಗರಾಜ್, ಎಲ್.ಎಂ.ಎಚ್. ಸಾಗರ್, ಎಸ್. ಮಲ್ಲಿಕಾರ್ಜುನ, ಡಾ. ವೈ. ರಾಮಪ್ಪ, ಹೊದಿಗೆರೆ ರಮೇಶ್, ಲಿಂಗರಾಜ್, ದಾಕ್ಷಾಯಣಮ್ಮ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.