ಬುಧವಾರ, ಜನವರಿ 22, 2020
25 °C

ದವಾಖಾನೆಗೆ ಕೊಠಡಿ ನೀಡ್ರಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ:‘ದವಾಖಾನೆಗೆ ಕೊಠಡಿ ನೀಡಿ ಎಂದು ನಾನೇ ಖುದ್ದಾಗಿ ಹೇಳಿದ್ರೂ ಯಾಕೆ ಕೊಟ್ಟಿಲ್ಲ. ಕೊಡ್ರಿ. ಆರೋಗ್ಯ ಇಲಾಖೆಯವರು ಇವತ್ತೇ ಕೀ ಇಸ್ಕೊಳ್ಳಿ. ಬೇಕಿದ್ದರೆ ನಾನೇ ಬಂದು ನಿಂತುಕೊಳ್ಳುತ್ತೇನೆ’...

ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

‘ಭಾರತಿ ಕಾಲೊನಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಾವಸ್ಥೆಯಲ್ಲಿದೆ. ಸಮೀಪದ ತೋಟಗಾರಿಕೆ ಇಲಾಖೆಯ ಕಟ್ಟಡದ ಒಂದು ಕೊಠಡಿಗೆ ಸ್ಥಳಾಂತರಿಸುವ ಉದ್ದೇಶದಿಂದ ಒಂದು ಕೊಠಡಿಯನ್ನು ಬಿಟ್ಟುಕೊಡುವಂತೆ ಪತ್ರ ಬರೆಯಲಾಗಿತ್ತು. ಕಳೆದ ವಾರ ಸಮನ್ವಯ ಸಭೆಯಲ್ಲಿ ತಿಳಿಸಲಾಗಿತ್ತು. ಕೊಠಡಿ ಸಿಕ್ಕಿಲ್ಲ’ ಎಂದು ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ತಿಳಿಸಿದರು.

‘ಇಲಾಖೆಯ ಕೇಂದ್ರ ಕಚೇರಿಗೆ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬಂದ ನಂತರ ನೀಡಲಾಗುವುದು’ ಎಂದು ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನಾರ್ ಪ್ರತಿಕ್ರಿಯಿಸಿದಾಗ ಜಿಲ್ಲಾಧಿಕಾರಿ ಹರಿಹಾಯ್ದರು. ‘ಜಿಲ್ಲಾಧಿಕಾರಿ ಹೇಳಿದ ಮೇಲೆ ಮತ್ತೆ ಅನುಮತಿ ಬೇಕೇನ್ರಿ’ ಎಂದು ಪ್ರಶ್ನಿಸಿದರು. ಕೊಠಡಿ ನೀಡಲಾಗುವುದು ಎಂದು ಉಪ ನಿರ್ದೇಶಕರು ಒಪ್ಪಿಗೆ ಸೂಚಿಸಿದರು.

ಮಾತೃವಂದನ ಮತ್ತು ಮಾತೃಶ್ರೀ ಯೋಜನೆಗಳಡಿ ಫಲಾನುಭವಿಗಳ ಉಳಿತಾಯ ಖಾತೆ ತೆರೆಯಲು ಎಸ್‌ಬಿಐ ಸೇರಿದಂತೆ ಕೆಲವು ಬ್ಯಾಂಕುಗಳು ಫಲಾನುಭವಿಗಳ ಪ್ಯಾನ್ ಕಾರ್ಡ್ ಕೇಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ದೂರಿದರು. ಆರೋಗ್ಯ ಇಲಾಖೆ ಫಲಾನುಭವಿಗಳಿಗೆ ಶೂನ್ಯ ಉಳಿತಾಯ ಖಾತೆ ತೆರೆಯಲೂ ಕೂಡ ಇದೇ ಸಮಸ್ಯೆ ಎಂದು ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ ಧ್ವನಿಗೂಡಿಸಿದರು.

ಆ ಬ್ಯಾಂಕ್‌ಗೆ ಸರಿಯಾದ ನಿರ್ದೇಶನ ನೀಡುವಂತೆ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶ್ರುತ ಡಿ. ಶಾಸ್ತ್ರಿ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಗಾಜಿನ ಮನೆಗೆ ತಲುಪಲು ಸಮರ್ಪಕ ಸಂಪರ್ಕ ರಸ್ತೆ ಇಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳೂ ಸರಿಯಾಗಿ ಬರುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನಾರ್ ದೂರಿದರು. ರಸ್ತೆ ಸಂಪರ್ಕ ಪಾಲಿಕೆ ಸರಿಪಡಿಸಬೇಕು. ಕೆಎಸ್‌ಆರ್‌ಟಿಸಿ ಇನ್ನೊಂದೆರಡು ಟ್ರಿಪ್‌ ಹೆಚ್ಚು ಓಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ತ್ಯಾವಣಗಿಯಲ್ಲಿ ಪಶು ವೈದ್ಯ ಆಸ್ಪತ್ರೆಗೆ ಜಾಗ ಅಗತ್ಯ ಇದೆ ಎಂದು ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯಕ್ ಕೋರಿದರು.

ರೈಲ್ಚೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯು ಮೌಲ್ಯಮಾಪನವನ್ನು ಆದಷ್ಟು ಬೇಗ ಮಾಡಿಕೊಡಬೇಕು ಎಂದು ವಿಶೇಷ ಭೂಸ್ವಾನಾಧಿಕಾರಿ ರೇಷ್ಮಾ ಹಾನಗಲ್  ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ, ಸ್ಮಾರ್ಟ್‌ಸಿಟಿ ಯೋಜನೆಯ ಎಂ.ಡಿ. ರವೀಂದ್ರ ಮಲ್ಲಾಪುರ ಅವರೂ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು