ಜಗಳೂರು: ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಿಸಿಕೊಡಲು ಹಳೆಯ ಶಾಲಾ ಕಟ್ಟಡವನ್ನು ನಾಲ್ಕು ವರ್ಷಗಳ ಕೆಳಗೆ ನೆಲಸಮ ಮಾಡಿದ್ದು, ಇದುವರೆಗೂ ಹೊಸ ಕಟ್ಟಡ ನಿರ್ಮಾಣವಾಗದ ಕಾರಣ ನೂರಾರು ವಿದ್ಯಾರ್ಥಿಗಳು ಬಯಲಲ್ಲೇ ಪಾಠ ಕೇಳಬೇಕಾದ ಸ್ಥಿತಿ ಇದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ತಮ್ಮ ಹುಟ್ಟೂರಾದ ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿದ್ದರು. ಯಾವುದೇ ಪೂರ್ವ ತಯಾರಿ, ಅನುದಾನದ ಲಭ್ಯತೆ ಖಾತರಿಪಡಿಸಿಕೊಳ್ಳದೆ ಮೂರೂವರೆ ವರ್ಷಗಳ ಹಿಂದೆ ಏಕಾಏಕಿ ದಶಕಗಳಷ್ಟು ಹಳೆಯದಾದ ಶಾಲಾ ಕಟ್ಟಡವನ್ನು ನೆಲಸಮಗೊಳಿಸಿದ್ದರು. ನೂತನ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್. ಪರಿಣಾಮವಾಗಿ ಮಕ್ಕಳು ತೊಂದರೆಗೆ ಸಿಲುಕಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.
ಈ ಕುರಿತು ಗ್ರಾಮಸ್ಥರು ಹಾಗೂ ಪಾಲಕರು, ಎನ್. ರವಿಕುಮಾರ್, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಿ, ಮಕ್ಕಳ ಪಾಠಕ್ಕೆ ಅವಕಾಶ ಮಾಡಿಕೊಡದಿದ್ದರೆ ಎನ್. ರವಿಕುಮಾರ್ ಅವರ ಮನೆ ಹಾಗೂ ಸಂಬಂಧಪಟ್ಟ ಇಲಾಖೆ ಎದುರು ಮಕ್ಕಳ ಜತೆಗೂಡಿ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಎನ್. ರವಿಕುಮಾರ್ ಅವರ ಗ್ರಾಮದಲ್ಲಿರುವ ಮನೆ ಅತ್ಯಂತ ವಿಶಾಲವಾಗಿದ್ದು, ಶಾಲಾ ಕಟ್ಟಡ ಕಾಮಗಾರಿ ಮುಗಿಯುವವರೆಗೆ ಮಕ್ಕಳಿಗೆ ಪಾಠ ಮಾಡಲು ಮನೆಯನ್ನು ಬಿಟ್ಟು ಕೊಡಲಿ ಎಂದು ಗ್ರಾಮದ ಮುಖಂಡರು ಒತ್ತಾಯಿಸಿದರು.
ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಈರಮ್ಮ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಟಿ. ವೆಂಕಟೇಶ್, ಮುಖಂಡರಾದ ರವಿ ಯು.ಸಿ. ಹುಚ್ಚಂಗಿಪುರ, ನಿಂಗರಾಜ್, ತಿಮ್ಮೇಶ್, ವೀರೇಶ್, ಗುರಪ್ಪ, ವೆಂಕಟೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಹುಚ್ಚಂಗಿಪುರ ಶಾಲೆಯ ವಿದ್ಯಾರ್ಥಿಗಳು ಮಳೆಯ ಕಾರಣ ಕಟ್ಟಡವೊಂದರ ಮೆಟ್ಟಿಲ ಸಂದಿಯಲ್ಲಿ ಕುಳಿತು ಪಾಠ ಕೇಳುತ್ತಿರುವುದು