ಸೋಮವಾರ, ಮೇ 23, 2022
24 °C
ಒಕ್ಕೂಟದ ಪ್ರತಿಭಟನೆ ಸುದ್ದಿ ಪ್ರಸಾರ ಮಾಡದೆ, ಬಿಜೆಪಿ ಸುದ್ದಿ ಮಾತ್ರ ಪ್ರಚಾರಕ್ಕೆ ಆಕ್ಷೇಪ

ಸಾಮಾಜಿಕ ಹೊಣೆಗಾರಿಕೆ ಮರೆತ ದೃಶ್ಯಮಾಧ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ನಾಲ್ಕೈದು ದಿನಗಳ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಸಂರಕ್ಷಣಾ ಒಕ್ಕೂಟವು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸುದ್ದಿಯನ್ನು ದೃಶ್ಯ ಮಾಧ್ಯಮಗಳು ಬಿತ್ತರಿಸಲಿಲ್ಲ. ಆದರೆ, ಅದೇ ಸಂದರ್ಭದಲ್ಲಿ ಬಿಜೆಪಿಯ ಎಸ್ಸಿ ಎಸ್ಟಿ ಪದಾಧಿಕಾರಿಗಳು ಮಾಡಿದ ಸುದ್ದಿಗೋಷ್ಠಿಯನ್ನು ಮಾತ್ರ ಬಿತ್ತರಿಸಿದವು.  ಇದರಿಂದಲೇ ದೃಶ್ಯಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಏನೆಂಬುದು ತಿಳಿಯುತ್ತದೆ ಎಂದು ಒಕ್ಕೂಟದ ಸಂಚಾಲಕ ಕೊಡತಾಳ್ ರುದ್ರೇಶ್ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೃಶ್ಯಮಾಧ್ಯಮಗಳು ಬಿಜೆಪಿ ಕೈಗೊಂಬೆಗಳಾಗಿವೆ. ಇವುಗಳಲ್ಲಿ ಬಹುತೇಕ ಮನುವಾದಿ ಸಂಘಟನೆಗಳಿಗೆ ಸೇರಿದ್ದಾಗಿವೆ. ಹೀಗಾಗಿ ಶೋಷಿತರ, ದಲಿತರ ಸುದ್ದಿಗಳನ್ನು ಅವರು ಬಿತ್ತರಿಸುವುದಿಲ್ಲ. ಪ್ರತಿಭಟನೆಯ ಸುದ್ದಿ ಮಾಡುವಂತೆ ದಾವಣಗೆರೆಗೆ ಹೋಗಿ ತಿಳಿಸಿ ಬಂದಿದ್ದರೂ, ನಮ್ಮ ಸುದ್ದಿಯನ್ನು ಕೈಬಿಡಲಾಗಿದೆ. ಆದರೆ, ಬಿಜೆಪಿಯ ಸುದ್ದಿಯನ್ನು ಪ್ರಸಾರ ಮಾಡಲಾಯಿತು. ಈ ಭಿನ್ನಾಭೇದ ಏಕೆ’ ಎಂದು ಅವರು ಪ್ರಶ್ನಿಸಿದರು.

‘ನಮ್ಮ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಕರೆದಿರುವ ನಮ್ಮ ರಕ್ತ ಸಂಬಂಧಿಗಳಿಗೆ ಹೋರಾಟದ ಅರಿವಿಲ್ಲ. ಸಂವಿಧಾನದ ಗಂಧಗಾಳಿಯೂ ಗೊತ್ತಿಲ್ಲ. ನಮ್ಮ ಸಮಾಜಕ್ಕೆ ಆಗುತ್ತಿರುವ ಅನಾಹುತಗಳ ಅರಿವಿಲ್ಲದ ಕೆಲ ತಿಳಿಗೇಡಿಗಳು ಮಾತ್ರ ಇಂತಹ ಮಾತುಗಳನ್ನು ಆಡಲು ಸಾಧ್ಯ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಾಸಕ ರೇಣುಕಾಚಾರ್ಯ ತಮ್ಮ ಹಿಂಬಾಲಕರನ್ನು ಮುಂದೆ ಬಿಟ್ಟು ತಮ್ಮನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಅವರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಕೆಲವರ ಕಣ್ಣಿಗೆ ಮಂಕುಬೂದಿ ಎರಚಿ ಸತ್ಯವನ್ನು ಸಮಾಧಿ ಮಾಡಲು ಸಾಧ್ಯವಿಲ್ಲ’ ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ನಾಗಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ 1980ರಲ್ಲಿಯೇ ದಲಿತ ಸಂಘರ್ಷ ಸಮಿತಿ ಹುಟ್ಟುಹಾಕಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸುವಷ್ಟು ಬೌದ್ಧಿಕ ದಿವಾಳಿತನ ನಮಗೆ ಇನ್ನೂ ಬಂದಿಲ್ಲ. ಬಿಜೆಪಿ ಪ್ರಾಯೋಜಿತ ಕೆಲ ದಲಿತರು ದಾರಕೇಶ್ವರಯ್ಯ ಮತ್ತು ಎಂ.ಪಿ. ರೇಣುಕಾಚಾರ್ಯ ಅವರ ನಿರ್ದೇಶನದಲ್ಲಿ ನಾಟಕ ಮಾಡುವ ಪಾತ್ರದಾರಿಗಳು’ ಎಂದು ಟೀಕಿಸಿದರು.

‘ಬಿಜೆಪಿಯ ಕೆಲ ಸಂಸದರು ಸಂವಿಧಾನ ಕಿತ್ತು ಹಾಕುತ್ತೇವೆ ಎಂದು ಹೇಳಿದಾಗ ಬಿಜೆಪಿಯಲ್ಲಿನ ದಲಿತರಿಗೆ ಸಿಟ್ಟು ಬರಲಿಲ್ಲ. ಬದಲಿಗೆ ದಲಿತರ ಮೀಸಲಾತಿ ಹಕ್ಕನ್ನು ಕಬಳಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ನಮ್ಮ ಮೇಲೆ ಸಿಟ್ಟು ಬಂದಿದೆ. ಈ ಸಿಟ್ಟು ಎಲ್ಲಿಂದ ಬಂತು’ ಎಂದು ಅವರು ಪ್ರಶ್ನಿಸಿದರು.

ಒಕ್ಕೂಟದ ಅಧ್ಯಕ್ಷ ಡಾ.ಈಶ್ವರನಾಯ್ಕ ಮಾತನಾಡಿ, ‘ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧದ ಪ್ರತಿಭಟನೆಗೆ ಬನ್ನಿ ಎಂದು ಸಿಕ್ಕವರಿಗೆಲ್ಲಾ ಕರಪತ್ರ ಕೊಟ್ಟಿದ್ದೇವೆ. ಸಿಗದವರನ್ನು ಹುಡುಕಿಕೊಂಡು ಹೋಗಿ ಕೊಡಲು ಇದೇನು ನಮ್ಮ ಮನೆಯ ಮದುವೆ ಕಾರ್ಯಕ್ರಮವೇ?. ನಿಜ ಹೇಳಬೇಕೆಂದರೆ ಇದಕ್ಕೆ ಯಾರ ಆಹ್ವಾನವೂ ಬೇಕಾಗಿಲ್ಲ. ಎಲ್ಲರೂ ಸ್ವಯಂ ತಿಳಿದುಕೊಂಡು ಭಾಗವಹಿಸುವಂತಹ ವಿಷಯ ಇದಾಗಿದೆ. ಇದನ್ನು ಯಾವುದೇ ಹೋರಾಟ ಮಾಡದ ಕೆಲ ದಲಿತರು ಅರ್ಥಮಾಡಿಕೊಳ್ಳಬೇಕಾಗಿತ್ತು. ಶಾಸಕ ಎಂ.ಪಿ. ರೇಣುಕಾಚಾರ್ಯ ವಂಚಿಸಿರುವುದು ಅವರ ಕಣ್ಣಿಗೆ ಕಾಣುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.