ಬುಧವಾರ, ಮೇ 25, 2022
29 °C
ತಾಲ್ಲೂಕು ಆಸ್ಪತ್ರೆಯಲ್ಲಿ ಭಾರಿ ಜನ ಸಂದಣಿ * ಹೆರಿಗೆಗೆ ಹೆಸರುವಾಸಿ

ಹರಿಹರಕ್ಕೆ ಬೇಕು ಪ್ರತ್ಯೇಕ ಮಹಿಳಾ ಆಸ್ಪತ್ರೆ

ಟಿ. ಇನಾಯತ್‌ ಉಲ್ಲಾ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಜನರಿಗೆ ತೀರ ಆಪ್ತವೂ ಆಗದೆ, ತೀರ ತಿರಸ್ಕೃತವೂ ಆಗದೆ ಮಧ್ಯಂತರ ಸ್ಥಾನದಲ್ಲಿದೆ. ಈ ಆಸ್ಪತ್ರೆಯ ಮೂಲ ಸಮಸ್ಯೆಯೆಂದರೆ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಗೆ ತಕ್ಕದಾಗಿ ಇಲ್ಲಿ ವ್ಯವಸ್ಥೆಗಳಿಲ್ಲದಿರುವುದು.

ಇದು ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದ್ದು, ಇನ್ನೂರು ಹಾಸಿಗೆ ಆಸ್ಪತ್ರೆಗೆ ಬರುವಷ್ಟು ರೋಗಿಗಳ ಒತ್ತಡ ಇಲ್ಲಿದೆ. ಒಂದು ತಿಂಗಳಲ್ಲಿ ಸರಾಸರಿ ಇಲ್ಲಿಗೆ ಬರುವ ಹೊರ ರೋಗಿಗಳ ಸಂಖ್ಯೆ 10 ಸಾವಿರವಾದರೆ ಒಳರೋಗಿಗಳ ಸಂಖ್ಯೆ ಒಂದು ಸಾವಿರ ದಾಟುತ್ತದೆ.

ಈ ಮುಂಚೆ ಸಣ್ಣ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ, ಸಿಜೇರಿಯನ್ ಹೆರಿಗೆ ಮಾಡಿಸಬೇಕೆಂದರೆ ಜನರು ದಾವಣಗೆರೆ ಕಡೆಗೆ ಮುಖ ಮಾಡಬೇಕಿತ್ತು. ಆದರೀಗ ಅರಿವಳಿಕೆ, ಶಸ್ತ್ರಚಿಕಿತ್ಸೆ, ಪ್ರಸೂತಿ, ಮೂಳೆ ತಜ್ಞ ವೈದ್ಯರು ಇಲ್ಲಿರುವುದರಿಂದ ಈಗ ಬೇರೆಡೆಗೆ ತೆರಳವುದು ತಪ್ಪಿದೆ.

ಹೆರಿಗೆಗೆ ಪ್ರಸಿದ್ಧ: ಇಲ್ಲಿ ಇಬ್ಬರು ಪ್ರಸೂತಿ ಮತ್ತು ಸ್ತ್ರೀರೋಗ, ಅರಿವಳಿಕೆ, ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಿರುವುದರಿಂದ ಸಹಜ ಹೆರಿಗೆ, ಸಿಜೇರಿಯನ್ ಅಗತ್ಯ ಇರುವ ಮಹಿಳೆಯರಿಗೆ ಉತ್ತಮ ಸೇವೆ ಸಿಗುತ್ತಿದೆ. ತಿಂಗಳಿಗೆ ಸರಾಸರಿ 180 ಹೆರಿಗೆ, 150 ಕೌಟುಂಬಿಕ ನಿಯಂತ್ರಣ ಶಸ್ತ್ರ ಚಿಕಿತ್ಸೆ ನಡೆಯುತ್ತಿವೆ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬೇಕು: ಜಿಲ್ಲೆಯ 2ನೇ ದೊಡ್ಡ ನಗರ ಹಾಗೂ ಬೇರೆ ಜಿಲ್ಲೆಯ ರಾಣೆಬೆನ್ನೂರು, ಹರಪನಹಳ್ಳಿ ತಾಲ್ಲೂಕಿನ ಹತ್ತಾರು ಗ್ರಾಮಗಳ ಜನ ಭೌಗೋಳಿಕವಾಗಿ ಹತ್ತಿರವೆಂದು ನಗರದ ಈ ಆಸ್ಪತ್ರೆ ಮೇಲೆ ನಿರ್ಭರವಾಗಿದ್ದಾರೆ.

ತಾಲ್ಲೂಕಿನ ಜೊತೆ ಬೇರೆ ತಾಲ್ಲೂಕಿನ ಜನರೂ ಇಲ್ಲಿಗೆ ಚಿಕಿತ್ಸೆಗೆ ಬರುವುದರಿಂದ 20 ಎಕರೆ ಜಾಗವಿರುವ ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕ 100 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಬೇಕಿದೆ. ಆಗ ಈಗಿರುವ ಆಸ್ಪತ್ರೆ ಮೇಲಿನ ಹೆಚ್ಚಿನ ಹೊಣೆ ನಿವಾರಣೆಯಾಗುತ್ತದೆ.

ಕೊರೊನಾ 2ನೇ ಅಲೆ ಸಂದರ್ಭದಲ್ಲಿ ಜಿ.ಎಂ. ಟ್ರಸ್ಟ್‌ನಿಂದ ನೀಡಿದ ಆಕ್ಸಿಜನ್ ಘಟಕವಿದೆ. ಒಂದು ನಿಮಿಷಕ್ಕೆ 333 ಲೀಟರ್‌ ಆಮ್ಲಜನಕ ತಯಾರಾಗುತ್ತದೆ.

ಇಲ್ಲಿನ ಕೆಲವು ವೈದ್ಯರು ಖಾಸಗಿ ಸೇವೆಗೆ ಆದ್ಯತೆ ನೀಡುತ್ತಾರೆ. ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಾರೆ. ಇದೇ ಆಸ್ಪತ್ರೆಯಲ್ಲಿಯೇ  ಉತ್ತಮ ಸೇವೆ ಪಡೆಯಬೇಕಿದ್ದರೆ ಹಣ ನೀಡುವುದು ಅನಿವಾರ್ಯವಾಗುತ್ತದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು