ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂಗಳಲ್ಲಿ ದುಡ್ಡಿಲ್ಲದೇ ಪರದಾಡಿದ ಜನ

Last Updated 9 ಮೇ 2019, 19:28 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಳಿದಾಸನಗರದಲ್ಲಿರುವ ಎಸ್‌ಬಿಐ ಎಟಿಎಂಗೆ ಹೋದೆ. ನೋ ಕ್ಯಾಶ್‌ ಎಂದು ಬಂತು. ಅಲ್ಲಿಂದ ಭಗಿರಥ ಸರ್ಕಲ್‌ ಕಡೆಗೆ ಬರುವಾಗ ಜಯನಗರ ಸಿ ಬ್ಲಾಕ್‌ನಲ್ಲಿರುವ ಕೆನರಾ ಎಟಿಎಂನಲ್ಲಿಯೂ ಇದೇ ಸಂದೇಶ ಬಂತು. ನಿಟುವಳ್ಳಿ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಎಸ್‌ಬಿಐ, ಕೆನರಾ ಬ್ಯಾಂಕ್‌ಗಳ ಎಟಿಎಂಗಳೂ ದುಡ್ಡಿಲ್ಲದೇ ಬಣಗುಟ್ಟುತ್ತಿದ್ದವು. ಇಎಸ್‌ಐ ಆಸ್ಪತ್ರೆ ಮುಂದೆ ಎಟಿಎಂ ಇದೆ ಎಂದು ಹೋದರೆ ಅಲ್ಲಿ ಶಟರ್‌ ಎಳೆದಿತ್ತು. ಕೊನೆಗೆ ಎಚ್‌ಕೆಆರ್‌ ಸರ್ಕಲ್‌ ಬಳಿ ಇರುವ ಎಸ್‌ಬಿಐ ಬ್ಯಾಂಕ್‌ ಬಳಿಯ ಎಟಿಎಂಗೆ ಹೋದೆ. ಅಲ್ಲಿ ಒಂದು ಮಶಿನ್‌ ಕೆಟ್ಟಿದ್ದರೂ ಇನ್ನೊಂದರಲ್ಲಿ ಹಣ ಬರುತ್ತಿತ್ತು. ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಆ ಸಾಲಿನಲ್ಲಿ ಸೇರಿಕೊಂಡು ಹಣ ಪಡೆದೆ. ₹ 5 ಸಾವಿರ ಪಡೆಯಲು ಎರಡು ಗಂಟೆ ಅಳೆಯಬೇಕಾಯಿತು’ ಎನ್ನುತ್ತಾರೆ ಕಾಳಿದಾಸನಗರದ ಸರಸ್ವತಿ ಬಡಾವಣೆಯ ಕಾಳಿಂಗರಾಜ್‌.

‘ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಮತ್ತು ಪಕ್ಕದಲ್ಲಿ ಮೂರ್ನಾಲ್ಕು ವಿವಿಧ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ದುಡ್ಡಿಲ್ಲ. ಹೇಗೂ ಮನೆಗೆ ಬರುವುದಲ್ವ ಎಂದು ಕೆಟಿಜೆ ನಗರಕ್ಕೆ ಬಂದೆ. ಸುತ್ತಲಿನ ಯಾವ ಎಟಿಎಂನಲ್ಲಿಯೂ ಹಣ ಪಡೆಯಲಾಗಲಿಲ್ಲ. ರಿಂಗ್‌ ರೋಡಿಗೆ ಹೋದರೂ ಪ್ರಯೋಜನವಾಗಿಲ್ಲ’ ಎಂದು ಕೆಟಿಜೆ ನಗರದ ವಸಂತ್‌ ಬುಧವಾರ ಬೆಳಿಗ್ಗೆಯೇ ಅಲೆದಾಡಿದ್ದನ್ನು ವಿವರಿಸಿದರು.

ಈ ಸಮಸ್ಯೆ ನಗರದ ಬಹುತೇಕ ಎಟಿಎಂಗಳಲ್ಲಿ ಮೂರು ದಿನಗಳಿಂದ ಉಂಟಾಗಿದೆ. ಕೆಲವು ಬ್ಯಾಂಕ್‌ನವರು ಹಣ ತುಂಬಿದರೂ ಕೆಲವೇ ಕ್ಷಣಗಳಲ್ಲಿ ಖಾಲಿ ಆಗಿ ಬಿಡುತ್ತಿದೆ. ಈ ಸಮಸ್ಯೆ ಬುಧವಾರ ತೀವ್ರವಾಗಿ ಕಾಡಿದೆ.

ಎಸ್‌ಬಿಐ ತುಂಬುತ್ತಿದೆ: ‘ಎಲ್ಲ ಬ್ಯಾಂಕ್‌ನವರು ಹಣ ತುಂಬಿಸಿದರೆ ನಮಗೆ ಸಮಸ್ಯೆಯಾಗಲ್ಲ. ಆದರೆ, ನಾವು ಮಾತ್ರ ತುಂಬಿಸುತ್ತಿರುವುದರಿಂದ ಒತ್ತಡ ಬೀಳುತ್ತಿದೆ. ಉಳಿದವರು ಸೀಮಿತ ಎಟಿಎಂಗಳಿಗೆ ಮಾತ್ರ ತುಂಬಿದ್ದರಿಂದ ಎಲ್ಲ ಬ್ಯಾಂಕ್‌ಗಳ ಗ್ರಾಹಕರು ನಮ್ಮ ಎಟಿಎಂಗೇ ಬರುವಂತಾಗಿದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಆದರೂ ಅದನ್ನು ನಿರ್ವಹಿಸಲು ಪ್ರಯತ್ನ ಪಡುತ್ತಿದ್ದೇವೆ. ಗುರುವಾರ ಮಧ್ಯಾಹ್ನವರೆಗೆ ಸ್ವಲ್ಪ ಹೆಚ್ಚು ಸಮಸ್ಯೆಯಾಗಿದೆ. ಮಧ್ಯಾಹ್ನದ ನಂತರ ಸಮಸ್ಯೆ ಸರಿಯಾಗಿದೆ’ ಎಂದು ಎಸ್‌ಬಿಐ ಎಟಿಎಂ ಸೆಲ್‌ ಮ್ಯಾನೇಜರ್‌ ಅಭಿಷೇಕ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇದಲ್ಲದೇ ಹಳೇ ಎಟಿಎಂಗಳಲ್ಲಿ ಕೆಲವು ತಾಂತ್ರಿಕ ದೋಷಗಳಿವೆ. ಅದಕ್ಕಾಗಿ ಅವುಗಳನ್ನು ಬದಲಾಯಿಸಿ ಹೊಸ ಎಟಿಎಂಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಒಮ್ಮೆಲೇ ಎಲ್ಲವನ್ನು ಬದಲಾಯಿಸಲು ಮುಂದಾದರೆ ಸಮಸ್ಯೆಯಾಗುತ್ತದೆ ಎಂದು ಒಂದೊಂದಾಗಿ ಬದಲಾಯಿಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಮೆಶಿನ್‌ ಸಮಸ್ಯೆ ಪರಿಹಾರಗೊಳ್ಳಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆ ಸರಿಯಾಗಲಿದೆ: ಒಂದು ಬ್ಯಾಂಕ್‌ನ ಕೆಲವು ಬ್ರಾಂಚ್‌ಗಳಲ್ಲಿ ಸ್ವಲ್ಪ ನಗದು ಕೊರತೆಯಾಗಿದೆ. ಆದರೆ, ಇದು ದೊಡ್ಡ ಸಮಸ್ಯೆಯಲ್ಲ. ಬ್ಯಾಂಕ್‌ಗಳಲ್ಲಿ ನಿಯಮಿತವಾಗಿ ನೆಟ್‌ವರ್ಕ್‌ ಅಪ್‌ಡೇಶನ್‌ ಇರುತ್ತದೆ. ಎರಡು ದಿನಗಳಿಂದ ಕೆಲವು ಬ್ಯಾಂಕ್‌ಗಳಲ್ಲಿ ಈ ಕೆಲಸ ಆಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಗುರುವಾರ ಸಂಜೆಯ ಒಳಗೆ ಈ ಎಲ್ಲ ಸಮಸ್ಯೆಗಳು ಸರಿಯಾಗಲಿವೆ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಎನ್‌.ಟಿ. ಯರ್ರಿಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT