ಶನಿವಾರ, ಆಗಸ್ಟ್ 13, 2022
23 °C
ವೈಷಮ್ಯಕ್ಕೆ ದಾರಿಯಾಗದೇ ಅಭಿವೃದ್ಧಿಗೆ ಮಾದರಿಯಾಗಲಿ: ಗ್ರಾಮಾಭಿವೃದ್ಧಿ ಚಿಂತಕರ ಅಭಿಮತ

ಪಕ್ಷ ರಹಿತ ಎಂಬ ರಾಜಕೀಯದ ಗ್ರಾಂ.ಪಂ ಚುನಾವಣೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿಕೇಂದ್ರೀಕರಣ ವ್ಯವಸ್ಥೆಯ ಕೊನೆಯ ಸ್ತರವಾಗಿರುವ ಗ್ರಾಮ ಪಂಚಾಯಿತಿಗೆ ಚುನಾವಣೆ ಘೋಷಣೆಯಾಗಿದೆ. ದೊಡ್ಡ ಚುನಾವಣೆಗಳು ಪಕ್ಷದ ನಾಯಕರದ್ದಾದರೆ, ಇದು ಪಕ್ಷದ ಕಾರ್ಯಕರ್ತರ ಚುನಾವಣೆ ಎಂದೇ ಪಕ್ಷಗಳು ಪರಿಗಣಿಸುತ್ತಿವೆ. ಹಾಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನೇ ಚುನಾವಣೆಗೆ ನಿಲ್ಲಿಸಲು ಪಕ್ಷಗಳು ತಯಾರಿ ನಡೆಸುತ್ತಿವೆ. ಇದರಿಂದಾಗಿ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತ ಎಂಬುದು ಬ್ಯಾಲೆಟ್‌ ಪೇಪರ್‌ಗಷ್ಟೇ ಸೀಮಿತವಾಗುತ್ತಿದೆ.

843 ಹಳ್ಳಿಗಳು ಇರುವ ಜಿಲ್ಲೆಯಲ್ಲಿ ಅವುಗಳನ್ನು 191 ಗ್ರಾಮ ಪಂಚಾಯಿತಿಗಳಾಗಿ ಮಾಡಲಾಗಿದೆ. ಈ 191 ಪಂಚಾಯಿತಿಗಳಿಗೂ ಚುನಾವಣೆ ಘೋಷಣೆಯಾಗಿತ್ತು. ಈ ನಡುವೆ ಹರಿಹರ ನಗರಸಭೆಗೆ ಗುತ್ತೂರು ಮತ್ತು ಬಕ್ಕಾಪುರ ಗ್ರಾಮಗಳನ್ನೊಳಗೊಂಡ ಗುತ್ತೂರು ಪಂಚಾಯಿತಿಯನ್ನು ಸೇರಿಸಿ ಡಿ. 2ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಹೊನ್ನಾಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಎಚ್‌. ಕಡದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನಾಯ್ಕನಹಳ್ಳಿ, ಹಿರೇಕಲ್ಮಠವನ್ನು ಸೇರಿಸಲಾಗಿದೆ. ಅಲ್ಲದೇ ಅರಬಗಟ್ಟೆ ಪಂಚಾಯಿತಿಯ ಒಂದು ಗ್ರಾಮವನ್ನು (ಮಲ್ಲದೇವರಕಟ್ಟೆ) ಕೂಡ ಸೇರ್ಪಡೆ ಮಾಡಲಾಗಿದೆ. ಹಾಗಾಗಿ 191ರ ಬದಲು 189 ಗ್ರಾಮ ಪಂಚಾಯಿತಿಗಳಿಗಷ್ಟೇ ಚುನಾವಣೆ ನಡೆಯಲಿದೆ.

ದಾವಣಗೆರೆ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಡಿ.22ಕ್ಕೆ ಮತದಾನ ನಡೆಯಲಿದೆ. ಹಾಗಾಗಿ ಈ ಮೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ. ಡಿ. 11ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಹರಿಹರ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕುಗಳಲ್ಲಿ ಡಿ.27ರಂದು ಚುನಾವಣೆ ನಡೆಯಲಿದೆ. ಅಲ್ಲಿ ಡಿ.11ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ನರೇಗಾ ಒಂದೇ ಸಾಕು: ಬೃಹತ್‌ ಯೋಜನೆಗಳು ಗ್ರಾಮ ಪಂಚಾಯಿತಿಯಿಂದ ಅನುಷ್ಠಾನ
ಗೊಳಿಸಲು ಅವಕಾಶಗಳು ಇರುವುದಿಲ್ಲ. ಅವುಗಳನ್ನು ಹೊರತುಪಡಿಸಿ ಒಂದು ಗ್ರಾಮಕ್ಕೆ ಬೇಕಾದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಲು ಮನಸ್ಸಿದ್ದರೆ, ಸರ್ಕಾರಕ್ಕೂ ಅನುದಾನ ಒದಗಿಸುವ ಇಚ್ಛಾಶಕ್ತಿ ಇದ್ದರೆ ನರೇಗಾ ಒಂದೇ ಯೋಜನೆಯಡಿ ಎಲ್ಲವನ್ನು ಮಾಡಬಹುದು ಎಂದು ರೈತ ಹೋರಾಟಗಾರ ತೇಜಸ್ವಿ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಎಂಬುದು ಅದ್ಭುತ ಪರಿಕಲ್ಪನೆ. ಆದರೆ ಅದು ಗುತ್ತಿಗೆದಾರರ ಕೈಗೆ ಸಿಕ್ಕಿ ನರಳುತ್ತಿದೆ. ಮಹಾತ್ಮ
ಗಾಂಧಿಯ ಹೆಸರು ಇದ್ದರೂ ಸತ್ಯ, ಪ್ರಾಮಾಣಿಕತೆಯಿಂದ ನಡೆಯುತ್ತಿಲ್ಲ. ಇಲ್ಲದೇ ಇದ್ದರೆ ಮಣ್ಣು ಪರೀಕ್ಷೆ, ಗ್ರಾಮೀಣ ರಸ್ತೆ ನಿರ್ಮಾಣ, ಕೆರೆ ಹೂಳೆತ್ತುವುದು, ಚರಂಡಿ ನಿರ್ಮಾಣ, ಬದು ನಿರ್ಮಾಣ ಸಹಿತ ಗ್ರಾಮದಲ್ಲಿ ಅಥವಾ ಅಕ್ಕಪಕ್ಕದ ಪಂಚಾಯಿತಿಗಳು ಒಟ್ಟು ಸೇರಿಕೊಂಡು ಗ್ರಾಮಕ್ಕೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳಬಹುದು. ಬೃಹತ್‌ ನೀರಾವರಿ ವ್ಯವಸ್ಥೆ, ವಿದ್ಯುತ್‌ ವ್ಯವಸ್ಥೆಗಳು ಮುಂತಾದ ದೊಡ್ಡ ಮಟ್ಟದ ಯೋಜನೆಗಳಿಗಷ್ಟೇ ಶಾಸಕರು, ಸಂಸದರನ್ನು ಅವಲಂಬಿಸಿದರೆ ಸಾಕಾಗುತ್ತದೆ. ಆದರೆ ಆ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಅದಕ್ಕಾಗಿ ನೂರಾರು ಯೋಜನೆಗಳನ್ನು ತರಲಾಗುತ್ತದೆ. ಗ್ರಾಮಾಭಿವೃದ್ಧಿ ಹೆಸರಲ್ಲಿ ಕೆಲವರಷ್ಟೇ ಉದ್ಧಾರವಾಗುತ್ತಾರೆ ಎಂದು ನೋವು ವ್ಯಕ್ತಪಡಿಸುತ್ತಾರೆ ಅವರು.

ಹಳ್ಳಿಗಳಲ್ಲಿ ಬಚ್ಚಲು ನೀರು ಹೋಗುವುದಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ಹಳೇ ಹಳ್ಳಿಗಳ ಬಗ್ಗೆ ಮಾತನಾಡುವುದೇ ಬೇಡ. ಹೊಸ ಹಳ್ಳಿಗಳಲ್ಲಾದರೂ ರಸ್ತೆ, ಚರಂಡಿ ಸರಿಯಿದೆಯೇ ಎಂದು ನೋಡಿದರೆ ಅದೂ ಇಲ್ಲ. ಬೀದಿದೀಪಗಳಿಲ್ಲ. ಇವೆಲ್ಲವನ್ನೂ ಉದ್ಯೋಗ ಖಾತ್ರಿಯಲ್ಲಿ ಮಾಡಬಹುದು. ಆದರೆ ಅಗತ್ಯ ಇರುವಲ್ಲಿ ಮಾಡದೇ ಎಲ್ಲೋ ಸುಲಭದಲ್ಲಿ ಆಗುವ ಕೆಲಸಗಳನ್ನು ಮಾಡಿ ನಾಲ್ಕು ಬುಟ್ಟಿ ಮಣ್ಣು ಹಾಕಿ ಬಿಡುತ್ತಿದ್ದಾರೆ ಎಂಬುದು ರೈತ ಮುಖಂಡ ಹೊನ್ನೂರು ಮುನಿಯಪ್ಪ ಅವರ ಅಭಿಪ್ರಾಯ.

ಆಮಿಷವಿಲ್ಲದ ಅವಿರೋಧ ಆಯ್ಕೆ ನಡೆಯಲಿ

ದೇವಸ್ಥಾನಕ್ಕೋ, ಇನ್ಯಾವುದಕ್ಕೋ ಹೆಚ್ಚು ಹಣ ನೀಡುವವರನ್ನು ಅವಿರೋಧ ಆಯ್ಕೆ ಮಾಡಿದರೆ ಗ್ರಾಮಕ್ಕೆ, ವಾರ್ಡ್‌ಗೆ ಒಳ್ಳೆಯದಾಗುವುದಿಲ್ಲ. ಈ ರೀತಿ ಆಯ್ಕೆ ಮಾಡಿದರೆ ಅವರು ಮುಂದೆ ಭ್ರಷ್ಟಾಚಾರ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಅದರ ಬದಲು ಖರ್ಚಿಲ್ಲದೇ ಅಭ್ಯರ್ಥಿ ಆಯ್ಕೆಯಾಗಬೇಕು. ಸರ್ಕಾರದಿಂದ ಬರುವ ಅನುದಾನವನ್ನು ಸ್ವಂತಕ್ಕೆ ಲಾಭ ಮಾಡಿಕೊಳ್ಳದೇ ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸುವವರನ್ನೇ ಆಯ್ಕೆ ಮಾಡಬೇಕು. ಒಂದು ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಅವರನ್ನು ಊರವರೆಲ್ಲ ಕೂರಿಸಿ ಮಾತನಾಡಿ ಯಾರು ಹೆಚ್ಚು ಅರ್ಹರು ಎಂಬುದನ್ನು ಕಂಡುಕೊಂಡು ಅವಿರೋಧ ಆಯ್ಕೆ ಮಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ ಎಂಬುದು ಚಿಂತಕ ತೇಜಸ್ವಿ ಪಟೇಲ್‌ ಅವರ ಸಲಹೆ.

ನೆಮ್ಮದಿ ಕೆಡಿಸುವ ಚುನಾವಣೆ

ಜನರು ನೆಮ್ಮದಿಯಾಗಿ ಜೀವನ ಸಾಗಿಸುತ್ತಿರುವ ಸಂದರ್ಭದಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆಗಳು ನೆಮ್ಮದಿಯನ್ನು ಹಾಳು ಮಾಡಿ ಬಿಡುತ್ತದೆ. ಎಂಎಲ್‌ಎ, ಎಂಪಿ ಚುನಾವಣೆಯಲ್ಲಾದರೆ ಅಷ್ಟು ವೈಷಮ್ಯ ಉಂಟಾಗುವುದಿಲ್ಲ. ಈ ಚುನಾವಣೆಯಲ್ಲಿ ಅಣ್ಣ–ತಮ್ಮಂದಿರು, ಸಂಬಂಧಿಕರು, ಅಕ್ಕಪಕ್ಕದವರು ಕಿತ್ತಾಡಿಕೊಳ್ಳುವಂತಾಗುತ್ತಿದೆ. ಹಾಗಾಗಿ ಪಕ್ಷ ರಹಿತ ಎನ್ನುವುದು ನಿಜಾರ್ಥದಲ್ಲಿ ಜಾರಿಯಾಗಬೇಕು. ತಮ್ಮ ಗ್ರಾಮಗಳ ಅಭಿವೃದ್ಧಿಗೆ ಯಾರು ಬೇಕು ಎಂಬುದನ್ನು ಗ್ರಾಮಸ್ಥರೇ ಕುಳಿತು ಚಿಂತನೆ ಮಾಡಿ, ಸಮಾಲೋಚನೆ ನಡೆಸಿ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಪಕ್ಷಗಳ ನಾಯಕರು ಬರಬಾರದು. ಗ್ರಾಮದ ಹೊರಗಿನವರು ಈ ವಿಚಾರದಲ್ಲಿ ತಲೆ ಹಾಕಬಾರದು. ಆಗ ಮಾತ್ರ ನೆಮ್ಮದಿ, ಅಭಿವೃದ್ಧಿ ಕಾಣಲು ಸಾಧ್ಯ ಎನ್ನುವುದು ರೈತನಾಯಕ ಹೊನ್ನೂರು ಮುನಿಯಪ್ಪ ಅವರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು